
ಕೆ.ಹೆಚ್. ಶ್ರೀನಿವಾಸ್ ನಿಧನಕ್ಕೆ ಎಚ್. ಕೆ .ಪಾಟೀಲ್ ಸಂತಾಪ.
ಗದಗ : ಸತ್ಯಮಿಥ್ಯ (ಅಗಸ್ಟ್ -30)
ಕರ್ನಾಟಕದ ರಾಜಕಾರಣಿ ಉತ್ತಮ ಸಂಸದೀಯ ಪಟು ಶ್ರೀ ಕೆ.ಹೆಚ್. ಶ್ರೀನಿವಾಸ್ ಇವರು ನಿಧನರಾದ ಸುದ್ದಿ ಆಘಾತಕಾರಿಯಾದುದು. ಇವರು ನಮ್ಮ ತಂದೆ ಕೆ. ಎಚ್. ಪಾಟೀಲ್ ಅವರಿಗೆ ಆತ್ಮೀಯರಾಗಿದ್ದರು. ಅಲ್ಲದೆ ನನ್ನ ರಾಜಕೀಯ ಜೀವನದ ಆರಂಭದ ಮಾರ್ಗದರ್ಶಕರು. ಶ್ರೀ ದೇವರಾಜ್ ಅರಸು ಅವರಿಗೆ ರಾಜಕೀಯ ಕಾರ್ಯದರ್ಶಿ ಆಗಿದ್ದಲ್ಲದೆ ಅವರ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿ ಉತ್ತಮ ಸಂಸದೀಯ ಪಟುವಾಗಿ ಹೊರಹೊಮ್ಮಿದವರು. ಶ್ರೀಮತಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಭಾಷಣಗಳ ಕನ್ನಡ ಭಾಷಾಂತರಕಾರರಾಗಿ, ಕನ್ನಡದಲ್ಲಿ ಕವನ ಮತ್ತು ನಾಟಕಗಳನ್ನು ರಚಿಸಿರುವ ಇವರು ಶ್ರೀ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿದ್ದರು. ಕಾಂಗ್ರೆಸ್, ಜೆಡಿಎಸ್ ಹಾಗೂ ಇತರ ಪಕ್ಷಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಇವರ ಸಂಸದೀಯ ಸೇವಾ ಅವಧಿ ಆದರ್ಶನಿಯವಾದುದು. ಇವರ ಅಗಲಿಕೆ ನಮಗೆಲ್ಲ ನೋವು ತಂದಿದೆ ಅವರ ಆತ್ಮಕ್ಕೆ ಶಾಂತಿ ಕೋರುತ್ತಾ ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.