ರಾಜ್ಯಕ್ಕೆ 11ನೇ ರ‍್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ ಕೋಟೆನಾಡಿನ ಕುವರಿ.
ಸಮಸ್ಯೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ ನಮ್ರತಾ ಪಾಟೀಲ

ಸಮಸ್ಯೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ ನಮ್ರತಾ ಪಾಟೀಲ
ಗಜೇಂದ್ರಗಡ: ಸತ್ಯ ಮಿಥ್ಯ (ಏ-10).
ಮನೆಯಲ್ಲಿ ತಂದೆ ಇಲ್ಲ ಎನ್ನುವ ಕೊರಗು, ಬೆನ್ನೆಲುಬಾಗಿ ನಿಂತ ತಾಯಿಯ ಧೈರ್ಯ, ಕಾಲೇಜಿನಲ್ಲಿ ಉಪನ್ಯಾಸಕರು ತೋರುವ ಮಾರ್ಗದರ್ಶನದಲ್ಲಿ ಜೀವನದಲ್ಲಿ ಎದುರಾದ ಅನೇಕ ಸಮಸ್ಯೆಗಳನ್ನು ಮೆಟ್ಟಿನಿಂತು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಗಜೇಂದ್ರಗಡ ತಾಲ್ಲೂಕಿಗೆ ಪ್ರಥಮ, ಜಿಲ್ಲಿಗೆ ತೃತೀಯ ಹಾಗೂ ರಾಜ್ಯಕ್ಕೆ 11ನೇ ಸ್ಥಾನ ಪಡೆದು ಓದಿಗೂ ಅಡೆತಡೆಗಳಿಗೂ ಸಂಬಂಧವಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಗಜೇಂದ್ರಗಡ ನಗರದ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ನಮ್ರತಾ ಚಂದ್ರಶೇಖರಗೌಡ ಪಾಟೀಲ.
ತಾಯಿ ಭಾರತಿ ಪಾಟೀಲ ತನ್ನ ಅಂತರಾಳದ ನೋವುಗಳನ್ನು ನುಂಗಿ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗನಿಗೆ ಶಿಕ್ಷಣವನ್ನು ಒದಗಿಸುತ್ತಿದ್ದಾರೆ. ಅವಳಿಜವಳಿಯಾಗಿ ಹುಟ್ಟಿದ ನಮ್ರತಾ ಪಾಟೀಲ ಹಾಗೂ ನಿಲಮ್ ಪಾಟೀಲ ಇಬ್ಬರನ್ನು ಗಜೇಂದ್ರಗಡ ನಗರದ ಶ್ರೀ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಪಿಯು ಶಿಕ್ಷಣದ ಕಲಿಕೆಗಾಗಿ ದಾಖಲಾತಿ ಪಡೆದಿದ್ದಾರೆ. ಇಲ್ಲಿನ ಉಪನ್ಯಾಸಕರ ನಿರಂತರ ಪರಿಶ್ರಮದ ಫಲವಾಗಿ ಈಚೆಗೆ ಪ್ರಕಟಗೊಂಡ ರಾಜ್ಯ ದ್ವಿತೀಯ ಪಿಯುಸಿ ಫಲಿತಾಂಶದ ವಾಣಿಜ್ಯ ವಿಭಾಗದಲ್ಲಿ ಕನ್ನಡದಲ್ಲಿ 100, ಇಂಗ್ಲಿಷ್‌ನಲ್ಲಿ 96, ಅರ್ಥಶಾಸ್ತ್ರದಲ್ಲಿ 96, ವ್ಯವಹಾರ ಅಧ್ಯಾಯನದಲ್ಲಿ 98, ಲೆಕ್ಕಶಾಸ್ತ್ರದಲ್ಲಿ 98, ಸಂಖ್ಯಾಶಾಸ್ತ್ರದಲ್ಲಿ 100 ಅಂಕಗಳನ್ನು ಪಡೆದಿದ್ದಾಳೆ. ಒಟ್ಟು 600ಕ್ಕೆ 588 ಅಂಕಗಳನ್ನು ಗಳಿಸಿ ಶೇ.98 ರಷ್ಟು ಫಲಿತಾಂಶ ದಾಖಲಿಸುವ ಗಮನಾರ್ಹ ಸಾಧನೆ ಮಾಡಿದ್ದಾಳೆ.
ಧಾರ್ಮಿಕ, ಅಧಾತ್ಮಿಕ ಕಾರ್ಯದ ಜೊತೆಗೆ ಗಜೇಂದ್ರಗಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಲಿಂಗೈಕ್ಯ ಅಭಿನವ ಅನ್ನದಾನ ಮಹಾಸ್ವಾಮಿಗಳು ಆರಂಭಿಸಿದ ಇಲ್ಲಿನ ಶಿಕ್ಷಣ ಸಂಸ್ಥೆಯನ್ನು ಈಗಿನ ಪೀಠಾಧಿಪತಿಗಳಾದ ಶ್ರೀ ಮುಪ್ಪಿನ ಬಸಲಿಂಗ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಮಕ್ಕಳಿಗೆ ಕೇವಲ ಪಠ್ಯದ ಬಗ್ಗೆ ಹೇಳಿಕೊಡದೆ ಸಂಸ್ಕಾರಯುತ, ಮೌಲ್ಯಯುತ ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಕ್ರೀಡೆ, ಪಠ್ಯೇತರ ಹಾಗೂ ಶೈಕ್ಷಣಿಕ ವಿಭಾಗದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾರೆ. ಅದರ ಪರಿಣಾಮದಿಂದ ದ್ವಿತೀಯ ಪಿಯುನಲ್ಲಿ ರಾಜ್ಯಕ್ಕೆ 11ನೇ ರ‍್ಯಾಂಕ್ ಪಡೆದ ನಮ್ರತಾ ಪಾಟೀಲ ಇವರು ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗ) ವತಿಯಿಂದ ತುಮಕೂರಿನಲ್ಲಿ ಜನವರಿ-01 ರಂದು ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಳೆ ಹಾಗೂ ಆಂಗ್ಲ ಭಾಷಾ ಚರ್ಚಾ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಹೆಮ್ಮೆಯ ಸಂಗತಿಯಾಗಿದೆ.
ಗ್ರಾಮೀಣ ಭಾಗದ ಮಕ್ಕಳ ಶ್ರೇಯೊಭಿವೃದ್ದಿಗಾಗಿ ಪಣ ತೊಟ್ಟಿರುವ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾಸರಕ ಸಮಿತಿಯ ಅಂಗ ಸಂಸ್ಥೆಯಾದ ಇಲ್ಲಿನ ಶಿಕ್ಷಣ ಸಂಸ್ಥೆಯು ಹಳ್ಳಿಗರ ಮಕ್ಕಳಿಗೆ ಅಕ್ಷರ ದೀಪ ಬೆಳಗುವ ಜ್ಞಾನದ ಜ್ಯೋತಿಯಾಗಿ ಪ್ರಜ್ವಲಿಸುತ್ತಿದೆ. ಅದರ ಫಲವಾಗಿ ಪ್ರತಿ ವರ್ಷ ಅನೇಕ ವಿದ್ಯಾರ್ಥಿಗಳು ಉತ್ತಮ ಸಾಧನೆಗಳನ್ನು ಮಾಡುತ್ತಿದ್ದಾರೆ. ಅದರಂತೆ ನಮ್ರತಾ ಪಾಟೀಲ ಅವರು ಉತ್ತಮ ಸಾಧನೆ ಮಾಡುವ ಮೂಲಕ ಇತರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಗಜೇಂದ್ರಗಡ ಕಾಲೇಜಿನ ಪ್ರಾಚಾರ್ಯ ವಸಂತರಾವ್ ಗಾರಗಿ ಹೇಳಿದರು.
“ನಮ್ರತಾ ಪಾಟೀಲ ಪ್ರತಿಭಾನ್ವಿತ ಹಾಗೂ ಛಲದಂಕ ವಿದ್ಯಾರ್ಥಿನಿಯಾಗಿದ್ದು ಸದಾ ಸಾಧನೆ ಮಾಡುವ ತವಕದಲ್ಲಿ ಇರುತ್ತಾಳೆ ಅನೇಕ ಅಡತಡೆಗಳ ನಡುವೆಯೂ ರಾಜ್ಯಮಟ್ಟದ ಸಾಧನೆ ಮಾಡುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ”
-ವೀರಯ್ಯ ವ್ಹಿ. ವಸ್ತ್ರದ, ಚೇರಮನ್ನರು ಶ್ರೀ ಅನ್ನದಾನೇಶ್ವರ ಪಿಯು ಕಾಲೇಜ್ ಗಜೇಂದ್ರಗಡ
“ಕಾಲೇಜಿನಲ್ಲಿ ಒದಗಿಸಲಾದ ಉತ್ತಮ ಕಲಿಕಾ ವಾತಾವರಣ ಹಾಗೂ ಉಪನ್ಯಾಸಕರ ಸಾಂಘಿಕ ಮಾರ್ಗದರ್ಶನ ನನ್ನ ಸಾಧನೆಗೆ ಸಹಕಾರ ನೀಡಿತು ಮುಂದೆಯೂ ಚೆನ್ನಾಗಿ ಓದಿ ಗೌರವಾನ್ವಿತ ಉನ್ನತ ಹುದ್ದೆ ಅಲಂಕರಿಸುವ ಆಸೆಯಿದೆ”
– ನಮ್ರತಾ ಪಾಟೀಲ, ವಿದ್ಯಾರ್ಥಿನಿ
ವರದಿ :ಸುರೇಶ ಬಂಡಾರಿ.