ಅಲೆಮಾರಿಗಳಿಗೆ ಬದುಕು ಕಟ್ಟಿಕೊಡಲು ಮುಂದಾಗಿ-ಪಲ್ಲವಿ. ಜಿ.
ಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅಧಿಕಾರಿಗಳಿಗೆ ಸಲಹೆ
ನರೇಗಲ್:ಸತ್ಯಮಿಥ್ಯ (ಡಿ -09).
ಹೊಟ್ಟೆಪಾಡಿಗೆ ದೇವಿ ಹೊತ್ತು ಊರುರು ತಿರುಗುವ, ಚಾಟಿಯಿಂದ ದೇಹಕ್ಕೆ ಹೊಡೆದುಕೊಂಡು ಜನರಿಗೆ ಮನರಂಜನೆ ನೀಡುವ ಉದ್ಯೋಗ ಮಾಡುವ ಅಲೆಮಾರಿಗಳಿಗೆ ಧಾರ್ಮಿಕ ಭಿಕ್ಷಾಟನೆಯೇ ಕುಲವೃತ್ತಿಯಾಗಿದೆ. ಇನ್ನಾದರು ಇಂತಹ ಕುಟುಂಬಗಳಿಗೆ ಬದುಕು ಕಟ್ಟಿಕೊಡಲು ಅಧಿಕಾರಿಗಳು ಮುಂದಾಗಬೇಕು ಎಂದು ಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು.
ನರೇಗಲ್ ಪಟ್ಟಣದ 3ನೇ ವಾರ್ಡಿನ ಬುಲ್ಡೋಜರ್ ನಗರದಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಅಲೆಮಾರಿ ಸಮುದಾಯದ ಸಿಂಧೋಳ್ಳು ಕುಟುಂಬಗಳ ಸ್ಥಿತಿಗತಿ ವೀಕ್ಷಣೆಗೆ ಹಾಗೂ ಕುಂದುಕೊರತೆಗಳ ಆಹ್ವಾಲು ಸ್ವೀಕಾರಕ್ಕಾಗಿ ಶುಕ್ರವಾರ ರಾತ್ರಿ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.
ನಾನು ಅಲೆಮಾರಿ ಸಮುದಾಯ ಹೆಣ್ಣುಮಗಳಾಗಿದ್ದು, ರಾಜ್ಯ ಸರ್ಕಾರ ಈ ಸಮುದಾಯದ ಅಭಿವೃದ್ದಿಗೆ ಮುಂದಾಗುವಂತೆ ಜವಾಬ್ದಾರಿ ವಹಿಸಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದೆ. ಅದಕ್ಕೆ ಸಿಂಧೋಳ್ಳು, ಅಲೆಮಾರಿ ಕುಟುಂಬಗಳು ವಾಸಿಸುವ ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತಿದ್ದೇನೆ ಎಂದರು.
ಅನಕ್ಷರತೆ ಹಾಗೂ ದಾಖಲಾತೆಗಳ ಕೊರತೆಯಿಂದ ಇಂದಿಗೂ ಅನೇಕರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ, ಜಾತಿ ಆದಾಯ ಪ್ರಮಾಣ ಪತ್ರ ಇಲ್ಲದಿರವ ಕುರಿತು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಯೋಜನೆಗಳ ಲಾಭ ಅಲೆಮಾರಿಗಳಿಗೆ ಸಿಗುತ್ತಿಲ್ಲ ಆದ್ದರಿಂದ ಈ ಕೂಡಲೇ ಆಯಾ ಇಲಾಖೆಯ ಅಧಿಕಾರಿಗಳ ತಾವೇ ಖುದ್ದಾಗಿ ಭೇಟಿನೀಡಿ ಸರ್ಕಾರಿ ದಾಖಲೆಗಳನ್ನು ಮಾಡಿಸಿಕೊಡಬೇಕು ಎಂದು ಅಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಹಳ ವರ್ಷದಿಂದ ಇಲ್ಲಿಯೇ ವಾಸ ಮಾಡುತ್ತಿರುವ ಕಾರಣ ಇಲ್ಲಿನ ಪಕ್ಕದ ಭೂಮಿಯನ್ನು ಖರೀದಿ ಮಾಡಿ ಮನೆ ಕಟ್ಟಿಕೊಡುವಂತೆ ಕೋರಿದರು. ಆಗ ಮಾಹಿತಿ ನೀಡಿದ ಪ.ಪಂ. ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಈಗಾಗಲೇ 36ಕ್ಕೂ ಹೆಚ್ಚಿನ ಎಕರೆ ಭೂಮಿ ದ್ಯಾಂಪುರದಲ್ಲಿದ್ದು ನಿವೇಶನ ಹಂಚಿಕೆ ಮಾಡುತ್ತಿದ್ದೇವೆ. ಸದ್ಯ 2ಎಕರೆ ಮಾತ್ರ ಬಾಕಿ ಉಳಿದಿದೆ ಅರ್ಜಿ ಹಾಕಿದರೆ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಥಮ ಆದ್ಯತೆ ಡಲಾಗುವುದು ಎಂದರು.
ಅಲೆಮಾರಿ ಅಭಿವೃದ್ದಿ ನಿಗಮದ ಆಪ್ತಕಾರ್ಯದರ್ಶಿ ಬಿ. ಎಸ್. ಆನಂದಕುಮಾರ ಮಾತನಾಡಿ, ದ್ಯಾಂಪುರಕ್ಕೆ ಹೋಗುವಂತೆ ಹಾಗೂ ಅಲ್ಲಿನ ನಿವೇಶನಗಳನ್ನು ಪಡೆಯುವಂತೆ ಸಿಂಧೋಳ್ಳು ಕುಟುಂಬಸ್ಥರನ್ನು ಮನವೊಲಿಸಿದರು. ಕುಡಿಯುವ ನೀರು, ರಸ್ತೆ ಸಮಸ್ಯೆಯನ್ನು 20 ದಿನಗಳ ಒಳಗೆ ಬಗೆಹರಿಸಿ ಫೋಟೋ ಹಾಕುವಂತೆ ಮುಖ್ಯಾಧಿಕಾರಿಗೆ ತಿಳಿಸಿದರು.
ಗದಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಈ ವೇಳೆ ನರೇಗಲ್ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, 3ನೇ ವಾರ್ಡಿನ ಸದಸ್ಯ ಮಲ್ಲಿಕಾರ್ಜುನಗೌಡ ಭುಮನಗೌಡ್ರ, ಪಿಎಸ್‌ಐ ಐಶ್ವರ್ಯ, ರೋಣ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್. ಬಿ. ಹರ್ತಿ, ಗಜೇಂದ್ರಗಡ ತಹಶೀಲ್ದಾರ ಕಚೇರಿ ಶಿರಸ್ತದಾರ ಪಿ. ಬಿ. ಶಿಂಗ್ರಿ, ದುರಗೇಶ ವಿಭೂತಿ, ಗೀತಾ ಆಲೂರ, ಟಗರಪ್ಪ ಕಟ್ಟಿಮನಿ ಇದ್ದರು.
” ನಮ್ಮ ಬೆನ್ನಿಂದೆ ಯಾರು ಇಲ್ಲ ವಾಸಿಸಲು ಮನೆಯೂ ಇಲ್ಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಮತಯಾಚನೆ ಮಾಡುವ ಜನಪ್ರತಿನಿಧಿಗಳು ನಂತರದ ದಿನಗಳಲ್ಲಿ ನಮ್ಮ ಕಷ್ಟಗಳ ಆಲಿಸುವುದಿಲ್ಲ. ಕಡೆಗಾಣಿಸುತ್ತಾರೆ. ಅಧಿಕಾರಿಗಳು ನಮ್ಮ ಕುಂದುಕೊರತೆಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ನಮ್ಮ ಬೆನ್ನಿಂದೆ ಯಾರು ಇಲ್ಲದಕಾರಣ ನಾವು ಹೀಗೆ ಇದ್ದೇವೆ ಸಿಂಧೋಳ್ಳು ಎಂದು ಕುಟುಂಬಸ್ಥರು ಅಳಲು ತೋಡಿಕೊಂಡರು”
3ತಲೆಮಾರಿನಿಂದ ಇಲ್ಲಿ 45ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. 2002-03ರಲ್ಲಿ ಕೇವಲ 11 ಮನೆಗಳನ್ನು ನೀಡಿದ್ದಾರೆ. ಉಳಿದವರ ಖಾಸಗಿಯವರ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ಜೀವನ ಮಾಡುತ್ತಿದ್ದೇವೆ. ಹಾಗಾಗಿ ನಮ್ಮ ಸಮುದಾಯದ ಜನರಿಗೆ ವಸತಿ ಮತ್ತು ಮೂಲಭೂತ ಸೌಕರ್ಯದ ವ್ಯವಸ್ಥೆ ಮಾಡಬೇಕು ಎಂದು ಸಮುದಾಯದ ಜನರು ಬೇಡಿಕೆಯಿಟ್ಟರು.
” ನರೇಗಲ್ ಪಟ್ಟಣದಲ್ಲಿ ವಾಸಿಸುವ ಸಿಂಧೋಳ್ಳು ಅಲೆಮಾರಿ ಜನಾಂಗದವರಿಗೆ ದ್ಯಾಂಪುರದಲ್ಲಿ ನಿವೇಶ ಹಂಚಿಕೆ ಮಾಡಿ ಮೂಲಸೌಕರ್ಯ ಒದಗಿಸುವಂತೆ ಮಾಹಿತಿ ಸಹಿತವಾಗಿ ರೋಣ ಶಾಸಕರಿಗೆ ಪತ್ರ ಬರೆಯಲಾಗುವುದು “
-ಪವಿತ್ರಾ ಜಿ, ಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ
ನರೇಗಲ್ ಪಟ್ಟಣದ 3ನೇ ವಾರ್ಡಿನ ಬುಲ್ಡೋಜರ್ ನಗರದಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಅಲೆಮಾರಿ ಸಮುದಾಯದ ಸಿಂಧೋಳ್ಳು ಕುಟುಂಬಗಳ ಸ್ಥಿತಿಗತಿ ವೀಕ್ಷಣೆಗೆ ಹಾಗೂ ಕುಂದುಕೊರತೆಗಳ ಆಹ್ವಾಲು ಸ್ವೀಕಾರದ ಸಂದರ್ಭದಲ್ಲಿ ಎಂದು ಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಮಾತನಾಡಿದರು.
ವರದಿ : ಚನ್ನು. ಎಸ್.