ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸಿ: ಹಜರತ್ ಹುಸೇನ.
ಕನಕಗಿರಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸಭೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸಿ: ಹಜರತ್ ಹುಸೇನ.
ಕನಕಗಿರಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸಭೆ.
ಕೊಪ್ಪಳ: ಸತ್ಯಮಿಥ್ಯ (ಜುಲೈ 01).
ರಾಜ್ಯ ಸರ್ಕಾರ ಮಹತ್ವದ ಕಾರ್ಯಕ್ರಮವಾದ ಗ್ಯಾರಂಟಿ ಯೋಜನೆಗಳು ಜನಪರ ಯೋಜನೆಗಳಾಗಿದ್ದು ಇವುಗಳ ಅನುಷ್ಠಾನದಲ್ಲಿ ಕೆಲವು ತಾಂತ್ರಿಕ ದೋಷಗಳು ಎದುರಾಗುತ್ತಿದ್ದು ಅವುಗಳನ್ನು ಶೀಘ್ರದಲ್ಲಿ ಪರಿಹರಿಸಿಬೇಕು ಎಂದು ಕನಕಗಿರಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹಜರತ್ ಹುಸೇನ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನಕಗಿರಿ ತಾಲ್ಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜುಲೈ 01ರಂದು ಹಮ್ಮಿಕೊಂಡಿದ್ದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಸರ್ವರಿಗೂ ಸಮಬಾಳು ಸಮಪಾಲು ನೀಡಬೇಕೆಂಬ ಉದ್ದೇಶದಿಂದ ಜಾರಿಗೆ ತಂದ ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಯುವನಿಧಿ ಸೇರಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಸಾಮಾನ್ಯ ಜನರ ಆರ್ಥಿಕ ಸಬಲೀಕರಣಕ್ಕೆ ತುಂಬಾ ಸಹಕಾರಿಯಾಗಿದ್ದು, ಇವುಗಳು ಸಮರ್ಪಕ ಅನುಷ್ಠಾನವಾಗುತ್ತಿವೆ. ತಾಂತ್ರಿಕ ದೋಷಗಳಿಂದಾಗಿ ಕೆಲವರಿಗೆ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭವನ್ನು ದೊರಕಿಸಿಕೊಡಬೇಕು ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಬೇಕು. ಅಂಗಡಿಗಳಲ್ಲಿ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕು ಹಾಗೂ ಪಡಿತರ ಕಾರ್ಡ್ನಲ್ಲಿರುವ ಪ್ರತಿ ಸದಸ್ಯರಿಗೆ ನೀಡುವ ಆಹಾರ ಸಾಮಾಗ್ರಿಗಳ ವಿವರವನ್ನು ಸಹ ಸೂಚನಾ ಫಲಕದಲ್ಲಿ ಅಳವಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ತಾಲ್ಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ ಮಾರ್ಚ್ ಅಂತ್ಯದವರೆಗೆ ಇದರಲ್ಲಿ 23,220 ಕುಟುಂಬಗಳಿಗೆ ಪ್ರತಿ ಮಾಹೆಯಲ್ಲಿ 5 ಕೆ.ಜಿ ಅಕ್ಕಿ ಮತ್ತು ಹೆಚ್ಚುವರಿ 5 ಕೆ.ಜಿ ಅಕ್ಕಿಯ ಮೊತ್ತವನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಮಾರ್ಚ್ ಮಾಹೆಯವರೆಗೆ 22,083 ಫಲಾನುಭವಿಗಳು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಶಿಶು ಅಭಿವೃದ್ಧಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯಡಿ ಗಂಗಾವತಿ ಉಪವಿಭಾಗದ ಕನಕಗಿರಿ ವಿಭಾಗದಲ್ಲಿ 9059 ವಿದ್ಯುತ್ ಗ್ರಾಹಕರ ಪೈಕಿ 8167 ಕ್ಕೂ ಅಧಿಕ ಗ್ರಾಹಕರು ನೋಂದಣಿಯಾಗಿದ್ದಾರೆ ಎಂದು ಜೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ಶಕ್ತಿ ಯೋಜನೆಯಡಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗಂಗಾವತಿ ಘಟಕ ಬಸ್‌ಗಳಲ್ಲಿ ಇಲ್ಲಿಯವರೆಗೆ 63.67 ಲಕ್ಷಕ್ಕೂ ಅಧಿಕ ಮಹಿಳೆಯರು ಮಾರ್ಚ್ ಅಂತ್ಯದವರೆಗೆ ಪ್ರಯಾಣ ಉಚಿತ ಮಾಡಿದ್ದಾರೆ ಎಂದು ಕೆ.ಕೆ.ಆರ್.ಟಿ.ಸಿ ಗಂಗಾವತಿ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.
ಯುವನಿಧಿ ಯೋಜನೆಯಡಿ ತಾಲ್ಲೂಕಿನಲ್ಲಿ ಪದವಿ ಹಾಗೂ ಡಿಪ್ಲೋಮಾ ಪದವಿ ಪೂರ್ಣಗೊಳಿಸಿದ 1672 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದಾರೆ ಎಂದು ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ರಾಜಶೇಖರ ಸೇರಿದಂತೆ ಕನಕಗಿರಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ಮಲ್ಲಿಕಾರ್ಜುನ ಹಿರೇಮಠ್.