
102 ಕೆಜಿ ಭಾರದ ಮೂಟೆ ಹೊತ್ತು 575 ಮೆಟ್ಟಿಲುಗಳ ಅಂಜನಾದ್ರಿ ಬೆಟ್ಟ ಹತ್ತಿದ ರೈತ!
ಸಾವಳಗಿ: ಸತ್ಯಮಿಥ್ಯ (ಜು-24).
ಆ ಮೂಟೆ ಬರೋಬ್ಬರಿ ಒಂದು ಕ್ವಿಂಟಾಲ ಅಂದರೆ ಬರೋಬ್ಬರಿ 102 ಕೆಜಿ ಭಾರದ್ದು. ಆ ಬೆಟ್ಟ 575 ಮೆಟ್ಟಿಲುಗಳ ಕಡಿದಾದ, ಸಂಕೀರ್ಣಗಳಿಂದ ಕೂಡಿದ ಮಾರ್ಗ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಆ ರೈತ 102 ಕೆಜಿ ಭಾರದ ಮೂಟೆ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿ ಹರಕೆ ತೀರಿಸುವ ಮೂಲಕ ಗಮನ ಸೆಳೆದರು.
ವಯಸ್ಸು 61 ಆದ್ರೂ ದಣಿವರಿಯದ ವೃದ್ಧ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ 61 ವರ್ಷ ವಯಸ್ಸಿನ ನಿಂಗಪ್ಪ ಸವಣೂರು ಎಂಬ ರೈತ ಮಂಗಳವಾರ ಅಂಜನಾದ್ರಿ ಬೆಟ್ಟವನ್ನು 102 ಕೆಜಿ ಭಾರದ ಮೂಟೆ ಹೊತ್ತು ಏರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದರು.
102 ಕೆಜಿಯ ಭಾರವಿದ್ದ ಮೂಟೆಯನ್ನು ಹೊತ್ತು 575 ಮೆಟ್ಟಿಲುಗಳ ಕಡಿದಾದ ಹಾದಿಯಲ್ಲಿ ಸಾಗುವ ಮೂಲಕ ಅಂಜನಾದ್ರಿ ಬೆಟ್ಟವೇರಿದ ರೈತನೋರ್ವ ಎಲ್ಲರ ಗಮನ ಸೆಳೆದಿದ್ದಾರೆ.
ನೆಲಮಟ್ಟದಿಂದ 550 ಅಡಿ ಎತ್ತರದ ಬೆಟ್ಟ: ಅತ್ಯಂತ ಸಂಕೀರ್ಣ ಮತ್ತು ಕಡಿದಾದ ದಾರಿ ಹೊಂದಿರುವ ಅಂಜನಾದ್ರಿ ಬೆಟ್ಟವು ನೆಲಮಟ್ಟದಿಂದ 550ಕ್ಕೂ ಹೆಚ್ಚು ಅಡಿ ಎತ್ತರದಲ್ಲಿದೆ. ಈ ಬೆಟ್ಟಕ್ಕೆ ಹತ್ತಲು 575 ಮೆಟ್ಟಿಲುಗಳಿದ್ದು, ಸಾಮಾನ್ಯ ಜನರೇ ಈ ಬೆಟ್ಟ ಹತ್ತಲು ಪ್ರಯಾಸ ಪಡುತ್ತಾರೆ.
ಅಂದುಕೊಂಡಂತೆ ಹರಕೆ ತೀರಿಸಿದ ನಿಂಗಪ್ಪ: ಆದರೆ 61 ವರ್ಷ ಪ್ರಾಯದ ಈ ರೈತ ತಾನು ಹೊತ್ತಿದ್ದ`ಅಂಜನಾದ್ರಿ ಬೆಟ್ಟ ಹತ್ತುವ ಹರಕೆ’ ತೀರಿಸಲು 102 ಕೆಜಿ ಭಾರದ ಜೋಳದ ಮೂಟೆ ಹೊತ್ತು 62 ನಿಮಿಷದಲ್ಲಿ ಬೆಟ್ಟ ಏರಿ ಜನರನ್ನು ನಿಬ್ಬೆರಗಾಗಿಸಿದ್ದಾರೆ ರೈತ ನಿಂಗಪ್ಪ.
ಮೊಳಗಿತು ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ: ನಿಂಗಪ್ಪ ಬೆಟ್ಟ ಹತ್ತುವಾಗ ಕೇವಲ ಎರಡು ಕಡೆ ಅದೂ 15 ರಿಂದ 45 ಸೆಕೆಂಡುಗಳಷ್ಟು ಕಾಲ ನಿಂತು ಧಣಿವಾರಿಸಿಕೊಂಡು, ಒಂದು ಗುಟುಕು ನೀರು ಕುಡಿದು ಮತ್ತೆ ಪ್ರಯಾಣ ಮುಂದುವರೆಸಿದರು. ಆತನೊಂದಿಗೆ ಬಂದಿದ್ದ ಸಹಚರರು ಜೈಶ್ರೀರಾಮ್, ಜೈ ಹನುಮಾನ್ ಎಂಬ ಘೋಷಣೆ ಹಾಕುತ್ತಲೇ ಬೆಚ್ಚ ಹತ್ತಿದರು.
ಬಳಿಕ ಈ ಬಗ್ಗೆ ಮಾತನಾಡಿದ ರೈತ ನಿಂಗಪ್ಪ, ಈ ಹಿಂದೆ ಶ್ರೀಶೈಲಕ್ಕೆ ಹೋಗಿ ಬರುವಾಗ ಅಂಜನಾದ್ರಿಗೆ ಬಂದಿದ್ದೆ. ಆಗ ಮೂಟೆ ಹೊತ್ತು ಇಲ್ಲಿಗೆ ಬರುವುದಾಗಿ ಸಂಕಲ್ಪ ಮಾಡಿದ್ದೆ. ಅದನ್ನು ತೀರಿಸಿದ್ದೇನೆ. ಈ ಮೂಲಕ ಶರೀರದ ಬಗ್ಗೆ ಜನ ಕಾಳಜಿ ವಹಿಸಬೇಕು. ದೈಹಿಕ ಕಸರತ್ತು ಮಾಡಬೇಕು ಎಂದು ಅವರು ಕರೆ ನೀಡಿದರು.
ವರದಿ : ಸಚೀನ ಆರ್ ಜಾಧವ .