ಗದಗ – ಬಿಡಾಡಿ ದನಗಳ ಹಾವಳಿ ಸಾರ್ವಜನಿಕರಿಗೆ ತೊಂದರೆ
ಬಿಡಾಡಿ ದನಗಳ ಹಾವಳಿ ಸಾರ್ವಜನಿಕರಿಗೆ ತೊಂದರೆ:ನಗರಸಭೆ ಬಿಡಾಡಿ ದನಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ?

ಬಿಡಾಡಿ ದನಗಳ ಹಾವಳಿ ಸಾರ್ವಜನಿಕರಿಗೆ ತೊಂದರೆ:ನಗರಸಭೆ ಬಿಡಾಡಿ ದನಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ?
ಗದಗ:ಸತ್ಯಮಿಥ್ಯ ( ಜೂಲೈ -08)
ಗದಗ-ಬೆಟಗೇರಿ ಅವಳಿ ನಗರದಾದ್ಯಂತ ಕಳೆದ ಕೆಲವು ದಿನಗಳಿಂದ ಬಿಡಾಡಿ ದನಗಳ ಹಾವಳಿ ಹೆಚ್ಚಿದೆ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಶಾಲೆಗೆ ತೆರಳುವ ವಿದ್ಯಾರ್ಥಿಗಳು ಪ್ರತಿ ನಿತ್ಯವೂ ಈ ಸಮಸ್ಯೆಯಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಿ ಅವುಗಳನ್ನು ನಗರದಿಂದ ಬೇರೆಡೆ ಸ್ಥಳಾಂತರ ಮಾಡಬೇಕಾದ ನಗರಸಭೆಗೆ ಮಾತ್ರ ನಿದ್ರೆಗೆ ಜಾರಿದ್ದು, ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಕೆಲವು ತಿಂಗಳುಗಳಿಂದ ಇವುಗಳ ಉಪಟಳ ಹೇಳ ತೀರದಂತಾಗಿದ್ದು, ಮಕ್ಕಳು, ವಯೋವೃದ್ಧರು ರಸ್ತೆಯಲ್ಲಿ ಸಂಚರಿಸದಂತಹ ಸ್ಥಿತಿ ನಿರ್ಮಾಣವಾಗಿದೆ.
ಬಿಡಾಡಿ ದನಗಳು ಹಿಂಡು ಹಿಂಡಾಗಿ ರಸ್ತೆಯ ಮಧ್ಯದಲ್ಲಿಯೇ ಮಲಗುವುದು ಹಾಗೂ ಒಂದಕ್ಕೊಂದು ಹಾಯುತ್ತಾ ರಸ್ತೆಯಲ್ಲೇ ಕಾದಾಡಲು ಪ್ರಾರಂಭಿಸಿದರೆ ಆ ರಸ್ತೆಯಲ್ಲಿ ಸಂಚಾರವೇ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಈಗಾಗಲೇ ಹಲವರು ರಸ್ತೆಯಲ್ಲಿ ಬಿಡಾಡಿ ದನಗಳ ಕಾದಾಟದಿಂದ ಗಾಯಗೊಂಡ ಪ್ರಕರಣಗಳು ವರದಿಯಾಗಿವೆ.
ಎಲ್ಲೆಡೆ ಸಮಸ್ಯೆ: ಈ ಸಮಸ್ಯೆ ಕೇವಲ ಒಂದು ಪ್ರದೇಶದಲ್ಲಿ ಮಾತ್ರವಲ್ಲ, ಪ್ರಮುಖ ಸ್ಥಳಗಳಾದ ಮಹಾತ್ಮಾ ಗಾಂಧಿವೃತ್ತ, ಸ್ಟೇಶನ್ ರಸ್ತೆ, ಬ್ಯಾಂಕ್ ರೋಡ್, ಕೆ.ಸಿ. ರಾಣಿ ರೋಡ್, ಪಾಲಾ-ಬದಾಮಿ ರಸ್ತೆ, ತೋಂಟದಾರ್ಯ ಮಠದ ರಸ್ತೆ, ಜಿಲ್ಲಾ ಕ್ರೀಡಾಂಗಣ ರಸ್ತೆ, ಬೆಟಗೇರಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಕೂಡು ರಸ್ತೆಗಳು, ಜರ್ಮನ್ ಆಸ್ಪತ್ರೆಯ ಮುಂಭಾಗದಲ್ಲಿ, ಭೂಮರಡ್ಡಿ ವೃತ್ತ, ಮಹೇಂದ್ರಕರ ವೃತ್ತ ಸೇರಿದಂತೆ ಅವಳಿ ನಗರದ ಎಲ್ಲ ಪ್ರಮುಖ ರಸ್ತೆಗಳು ಇಂದು ಬಿಡಾಡಿ ದನಗಳಿಂದ ತುಂಬಿ ಹೋಗಿದ್ದು, ಜನತೆಗೆ ವಾಹನ ಸಂಚಾರ ಮಾಡುವುದೇ ದುಸ್ತರವಾಗುತ್ತಿದೆ.
ಸವಾರರಿಗೆ ತೊಂದರೆ: ಅವಳಿ ನಗರದಲ್ಲಿರುವ ಬಿಡಾಡಿ ದನಗಳು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವುದು ಒಂದೆಡೆಯಾದರೆ ಇನ್ನು ನಿತ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಸ್ಥಿತಿಯಂತೂ ಹೇಳತೀರದಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ನಿಂತಿರುವ ಬಿಡಾಡಿ ದನಗಳು ವಾಹನಗಳ ಶಬ್ದ ಕೇಳುತ್ತಿದ್ದಂತೆಯೇ ರಸ್ತೆಯ ಅಕ್ಕಪಕ್ಕದುದ್ದಕ್ಕೂ ಓಡಾಡುತ್ತವೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ತೀವ್ರ ತೊಂದರೆಯನ್ನುಂಟು ಮಾಡಿವೆ. ಇನ್ನು ಬಿಡಾಡಿ ದನಗಳು ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಹಾಯ್ದು ಕೆಳಗೆ ಬೀಳಿಸಿದ ಘಟನೆಗಳು ಸಾಕಷ್ಟು ನಡೆದಿವೆ. ಇಷ್ಟಾದರೂ ನಗರಸಭೆಯು ಈ ಬಿಡಾಡಿ ದನಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ವರದಿ:ಮುತ್ತು ಗೋಸಲ.