
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ – ಯುವ ಪೀಳಿಗೆಗೆ ತಿಳಿಸಬೇಕು : ಡಾ. ಬಿ. ವ್ಹಿ. ಕಂಬಳ್ಯಾಳ.
ಗಜೇಂದ್ರಗಡ:ಸತ್ಯಮಿಥ್ಯ (ಆಗಸ್ಟ್ -15)
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವನ್ನು ಮತ್ತು ಬ್ರಿಟಿಷರ ಸಂಕೋಲೆಯಿಂದ ಭಾರತ ಮಾತೆಯನ್ನು ಬಿಡುಗಡೆಗೊಳಿಸಿದ ಬಗೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸಬೇಕು ಎಂದು ಆಡಳಿತ ಮಂಡಳಿ ಸದಸ್ಯ ಡಾ. ಬಿ. ವಿ. ಕಂಬಳ್ಯಾಳ ಹೇಳಿದರು.
ಪಟ್ಟಣದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಬೆಳಿಗ್ಗೆ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ ತರಲು ಲಕ್ಷಾಂತರ ದೇಶಪ್ರೇಮಿಗಳು ಹೋರಾಡಿದ್ದಾರೆ. ಇಂದಿನ ಪೀಳಿಗೆಗೆ ಅವರ ತ್ಯಾಗ, ಬಲಿದಾನವನ್ನು ಪರಿಚಯ ಮಾಡಿಕೊಡುವ ಕಾರ್ಯವಾಗಬೇಕು ಎಂದರು. ಒಗ್ಗಟ್ಟಿನ ಪ್ರಯತ್ನದಿಂದ ಉತ್ತಮ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕೆ ಎಲ್ಲರೂ ಮುಂದಾಗುವ ಮೂಲಕ ದೇಶದ ಋಣ ತಿರಿಸೋಣ ಎಂದು ಹೇಳಿದರು.
ಮುಖಂಡ ಪ್ರಭು ಎನ್. ಚವಡಿ ಮಾತನಾಡಿ, ರಾಷ್ಟ್ರದ ಪ್ರಜ್ಞಾವಂತ ನಾಗರಿಕರಾಗಿ ನೆಲಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ, ಶೈಕ್ಷಣಿಕ ಅಭಿವೃದ್ದಿ ಹೊಂದುವುದರ ಜೊತೆಗೆ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳೋಣ ಎಂದು ಹೇಳಿದರು. ವಿದ್ಯಾರ್ಥಿಗಳು ಸಾಧನೆಯ ಗುರಿಯೊಂದಿಗೆ ಸಂಕಲ್ಪ ಮಾಡಬೇಕು. ಮನಸ್ಸಿದ್ದರೆ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು. ವಿದ್ಯಾರ್ಥಿ ಜೀವನ ಎಂಬುದು ಬದುಕಲ್ಲಿ ಬರುವ ಅತ್ಯಂತ ಅಮೂಲ್ಯ ಮತ್ತು ಸುಂದರವಾದ ಸಮಯ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಐಟಿಐ ಪ್ರಾಚಾರ್ಯ ಎ. ಪಿ. ಗಾಣಗೇರ, ಪಿಯು ಪ್ರಾಚಾರ್ಯ ವಸಂತರಾವ್ ಗಾರಗಿ, ಪದವಿ ಪ್ರಾಚಾರ್ಯ ಬಸಯ್ಯ ಎಸ್. ಹಿರೇಮಠ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಕಾಡದ, ಪಿಯು, ಪದವಿ, ಐಟಿಐ ಹಾಗೂ ಪ್ರಾಥಮಿಕ ಶಾಲೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.
ವರದಿ : ಸುರೇಶ ಬಂಡಾರಿ.