ಕೊಪ್ಪಳ – ಸಂಸದರು, ಶಾಸಕರಿಂದ ಜಂಟಿಯಾಗಿ ಮಳೆಹಾನಿ ಪರಿಶೀಲನೆ .
ಹಿಟ್ನಾಳ್ ಬ್ರದರ್ಸ್ - ಮಳೆಹಾನಿ ವೀಕ್ಷಣೆ.
ಕೊಪ್ಪಳ – ಸಂಸದ, ಶಾಸಕರಿಂದ ಜಂಟಿಯಾಗಿ ಮಳೆಹಾನಿ ಪರಿಶೀಲನೆ
ಕೊಪ್ಪಳ- ಸತ್ಯ ಮಿಥ್ಯ (ಜೂನ್ 13).
ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಹಾಗೂ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಜಂಟಿಯಾಗಿ ಜೂನ್ 13ರಂದು ಕೊಪ್ಪಳ ನಗರದಲ್ಲಿನ ವಿವಿಧೆಡೆ ಸಂಚರಿಸಿ ಮಳೆಯಿಂದಾದ ಹಾನಿಯನ್ನು ಪರಿಶೀಲಿಸಿದರು.
ಕೊಪ್ಪಳ ನಗರದ 3ನೇ ವಾರ್ಡ್ ನ ಕುವೆಂಪು ನಗರ, ಹಮಾಲಾರ ಕಾಲೋನಿ, ನಗರದ ಕಿನ್ನಾಳ ರಸ್ತೆಯಲ್ಲಿರುವ ಗಣೇಶ್ ತೆಗ್ಗು ಹಾಗೂ ಕಲ್ಯಾಣ ನಗರಕ್ಕೆ ಮತ್ತು ರೈಲ್ವೇ ಸ್ಟೇಷನ್ ರಸ್ತೆಯ ವಿವಿಧೆಡೆ ತೆರಳಿ ವಾಸ್ತವ ಪರಿಸ್ತಿತಿಯನ್ನು ಖುದ್ದು ಅವಲೋಕಿಸಿದರು.
ಈ ವೇಳೆ ಸಂಸದರು ಮಾತನಾಡಿ, ಕಳೆದ ಕೆಲವು ದಿನಗಳಿಂದ ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಉತ್ತಮವಾಗಿ ಮಳೆಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಜೂನ್ 1 ರಿಂದ ಜೂನ್ 13ರವರೆಗೆ ವಾಡಿಕೆ ಮಳೆ 38 ಮಿಮಿ ಇದ್ದು ವಾಸ್ತವವಾಗಿ 99 ಮಿಮಿ ಮಳೆಯಾಗಿದೆ. ಕಳೆದ ಏಳು ದಿನಗಳಲ್ಲಿ ವಾಡಿಕೆ ಮಳೆ 17 ಮಿಮಿ ಇದ್ದು ವಾಸ್ತವವಾಗಿ 62 ಮಿಮಿ ಮಳೆಯಾಗಿದೆ. ಈ ಮಳೆಯಿಂದ ಬಿತ್ತನೆಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಶಾಸಕರು ಮಾತನಾಡಿ, ನಿರಂತರವಾಗಿ ಸುರಿದ ಮಳೆಯಿಂದ ಹಾನಿಗೊಳಗಾದ ಕೊಪ್ಪಳ ನಗರದ ವಿವಿಧ ವಾರ್ಡ್ಗಳಲ್ಲಿ ಸಂಚರಿಸಿ ಪರಿಶೀಲಿಸಲಾಗುತ್ತಿದೆ. ಮಳೆಯಿಂದ ಆದಂತಹ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದ ಎಲ್ಲಾ ಚರಂಡಿಗಳ ಸ್ವಚ್ಛತೆಗೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಮೂಲ ನಕ್ಷೆಯ ಪ್ರಕಾರ ನಗರದಲ್ಲಿ ರಾಜಕಾಲುವೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ರಾಜಕಾಲುವೆಗಳನ್ನು ಯಾರೇ ಒತ್ತುವರಿ ಮಾಡಿದರು ಅವುಗಳನ್ನು ಕೂಡಲೇ ತೆರವುಗೊಳಿಸಲಾಗುವುದು. ಸ್ವಾಮಿ ವಿವೇಕಾನಂದ ಅಂಡರ್ ಪಾಸ್ ಗೆ ಅನುದಾನ ಬಂದಿದ್ದು, ಇದನ್ನು ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂಗಣ್ಣ ಕರಡಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಕ್ಬರಪಾಶಾ ಪಲ್ಟನ್, ನಗರಸಭೆ ಸದಸ್ಯರಾದ ಅಮಜದ್ ಪಟೇಲ್, ಸಿದ್ದಲಿಂಗಯ್ಯಸ್ವಾಮಿ ಹಿರೇಮಠ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್, ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ, ಕೊಪ್ಪಳ ತಹಶಿಲ್ದಾರರಾದ ವಿಠ್ಠಲ ಚೌಗಲಾ ಸೇರಿದಂತೆ ನಗರಸಭೆ ಸದಸ್ಯರು, ಇತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ವರದಿ : ಹಿರೇಮಠ್.