ಸುರಿವ ಮಳೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ – ಹಾಸ್ಟೆಲ್ಗಾಗಿ ಕೆ.ಕೆ ಸರ್ಕಲ್ ಬಂದ್.
ಗಜೇಂದ್ರಗಡ:ಸತ್ಯಮಿಥ್ಯ ( ಜುಲೈ -26).
ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ ಎಫ್ ಐ) ಗಜೇಂದ್ರಗಡ ತಾಲ್ಲೂಕು ಸಮಿತಿಯ ನೇತೃತ್ವದಲ್ಲಿ ಇಂದು ಗಜೇಂದ್ರಗಡ ನಗರಕ್ಕೆ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಇದೇ ವರ್ಷ ಪ್ರಾರಂಭಿಸಲು ಒತ್ತಾಯಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳ ಮುಕಾಂತರ ತೆರಳಿದ ವಿದ್ಯಾರ್ಥಿಗಳು ಕೆ ಕೆ ಸರ್ಕಲ್ ನಲ್ಲಿ ಮಾನವ ಸರವಳಿ ನಿರ್ಮಿಸಿ ಸರ್ಕಲ್ ಬಂದ್ ಮಾಡಿ ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಮಳೆ ಬರಲು ಪ್ರಾರಂಭವಾಯಿತು ಇದನ್ನು ಲೆಕ್ಕಿಸದೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹೋರಾಟ ಮುಂದುವರೆಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಎಸ್ ಎಫ್ ಐ ರಾಜ್ಯ ಪದಾಧಿಕಾರಿಗಳಾದ ಗಣೇಶ ರಾಠೋಡ ಮಾತನಾಡಿ ಗಜೇಂದ್ರಗಡ ನಗರವು ಶೈಕ್ಷಣಿಕವಾಗಿ ಬೆಳೆಯುತ್ತಿರುವ ನಗರ ಆಗಿದ್ದು ಇಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಅಂದಾಜು 1500 ಕ್ಕೂ ಹೆಚ್ಚು ಇದೆ. ಅದರ ಜೊತೆಗೆ 4 ಪಿ ಯು ಕಾಲೇಜಗಳು, ಒಂದು ಡಿಪ್ಲೊಮಾ ಕಾಲೇಜು. ಹಾಗೇ 4 ಡಿಗ್ರಿ ಕಾಲೇಜುಗಳು ಇವೆ. ಇಲ್ಲಿ ಸುಮಾರು 1200 ಕ್ಕೂ ಅಧಿಕ ವಿದ್ಯಾರ್ಥಿಗಳು ಡಿಗ್ರಿ ಓದುತ್ತಿದ್ದಾರೆ ಇದರಲ್ಲಿ ಅರ್ದಕ್ಕಿಂತ ಹೆಚ್ಚು ಜನ ಬಾಲಕರು ವಿದ್ಯಾಭ್ಯಾಸ ಮಾಡುತ್ತಿದ್ದು ಇಲ್ಲಿತನಕ ಒಂದೇ ಒಂದು ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಇಲ್ಲದಿರುವುದು ಖೇಧಕರ.
ಈ ವಿಚಾರವಾಗಿ ಎಸ್ ಎಫ್ ಐ ನೇತೃತ್ವದಲ್ಲಿ ಕಳೆದ 7-8 ವರ್ಷಗಳಿಂದ ಹೋರಾಟ ಮಾಡಿ ಮನವಿ ಸಲ್ಲಿಸಿದ್ದೆವೆ. ಹಿಂದೆ ಮುಖ್ಯಮಂತ್ರಿಗಳು ಬಂದಾಗ ಅವರಿಗೂ ಮನವಿ ನೀಡಿದ್ದೇವೆ. ಸಹಿ ಸಂಗ್ರಹ ಚಳುವಳಿ ಮಾಡಿ ಜನಾಭಿಪ್ರಾಯ ರೂಪಿಸಿ ಕೂಡಾ ಶಾಸಕರು, ಸಂಸದರುಗಳಿಗೆ ಅಧಿಕಾರಿಗಳಿಗೆ ಮನವಿ, ಹೋರಾಟ, ಒತ್ತಾಯ, ಮಾಡುತ್ತಲೆ ಬಂದಿದ್ದೆವೆ. ಜೊತೆಗೆ ಮೊನ್ನೆ ಜುಲೈ 5 ರಂದು ಗಜೇಂದ್ರಗಡ ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಮಾನ್ಯ ತಹಶಿಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವೆ. ಜುಲೈ 10 ರಂದು ಮಾನ್ಯ ಶಾಸಕರಿಗೆ ಮನವಿ ನಿಡಿದ್ದೆವೆ. ಮತ್ತು ಜುಲೈ 16 ರಂದು ಮಾನ್ಯ ಜಿಲ್ಲಾಧಿಕಾರಿ, ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ, ಮಾನ್ಯ ಅಪರ ಜಿಲ್ಲಾಧಿಕಾರಿ, ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಉಪ ನಿರ್ದೇಶಕರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರಿಗೆ ಸಮಸ್ಯೆ ಕುರಿತು ಮಾಹಿತಿ ನೀಡಿ ಮನವಿಯ ಬೇಡಿಕೆ ಪತ್ರ ಸಲ್ಲಿಸಿ ಜುಲೈ 24 ರ ಒಳಗೆ ಹಾಸ್ಟೆಲ್ ಕುರಿತು ಸ್ಪಷ್ಟತೆ ನೀಡಬೇಕೆಂದು ಮನವಿ ಮಾಡಿದ್ವಿ ಆದರೆ ಅದರ ಕುರಿತು ಸ್ಪಷ್ಟತೆಯನ್ನು ನೀಡಲು ಜಿಲ್ಲೆಯ ಇಲಾಖೆಗಳ ಅಧಿಕಾರಿಗಳು ಮುಂದಾಗಿಲ್ಲಾ ವಿದ್ಯಾರ್ಥಿಗಳ ಜೊತೆಗೆ ಆಥವಾ ವಿದ್ಯಾರ್ಥಿ ಮುಖಂಡರ ಜೊತೆಗೆ ಕನಿಷ್ಠ ಸಭೆ ಕರೆದು ತಿಳಿಸಿಲ್ಲಾ ಹಾಗಾಗಿ ವಿದ್ಯಾರ್ಥಿಗಳು ಮತ್ತೆ ಇಂದು ಹೋರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈವರೆಗೂ ಹಾಸ್ಟೆಲ್ ಕೊಡಲು ಸರ್ಕಾರವಾಗಲಿ ಮತ್ತು ಆಡಳಿತ ವರ್ಗವಾಗಲಿ ಹಿತಾಸಕ್ತಿ ತೋರದಿರುವುದು ಬೇಸರದ ವಿಚಾರ ಎಂದರು.
ನಂತರ ಎಸ್ ಎಫ್ ಐ ನ ಜಿಲ್ಲಾ ಮುಖಂಡರಾದ ಚಂದ್ರು ರಾಠೋಡ ಮಾತನಾಡಿ ಜುಲೈ 15 ರಿಂದ ಮುಂಗಾರು ಅಧಿವೇಶನ ಪ್ರಾರಂಭಗೊಂಡಿದ್ದು ಶಾಸಕರು ಸರ್ಕಾರದ ಗಮನಕ್ಕೆ ತಂದು ಹಾಸ್ಟೆಲ್ ಮಾಡಿಸಿ ಕೊಡಲು ಈ ಹೋರಾಟದ ಮೂಲಕ ಒತ್ತಾಸುತ್ತಿದ್ದೆವೆ. ಈ ಹಿಂದೆ ನಾವು ರಾಜ್ಯದಲ್ಲಿ ಹಾಸ್ಟೆಲ್ ಬೇಡಿಕೆ ಇಟ್ಟು ಹೋರಾಟ ಮಾಡಿದಕ್ಕೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 150 ಕ್ಕೂ ಹೆಚ್ಚು ಹಾಸ್ಟೆಲ್ ಗಳನ್ನು ಪ್ರಾರಂಬಿಸುವ ಪ್ರಸ್ತಾವನೆಗೆ ಸರ್ಕಾರದ ಅಸ್ತು ಹೇಳಿದ್ದು ಗದಗ ಜಿಲ್ಲೆಗೆ ಎರಡು ಹಾಸ್ಟೆಲ್ ನೀಡಿದ್ದಾರೆ ಅದರಲ್ಲಿ ಬಾಲಕರ ಮೆಟ್ರಿಕ್ ನಂತರದ ಹಾಸ್ಟೆಲ್ ಕೂಡಾ ಇದ್ದು ಅದನ್ನು ಗಜೇಂದ್ರಗಡದಲ್ಲಿ ಪ್ರಾರಂಭಿಸಲು ಜಿಲ್ಲೆಯ ಇಲಾಖಾಧಿಕಾರಿಗಳಿಗೆ ಆದೇಶಿಸಬೇಕು ಎಂದು ಈ ಮೂಲಕ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ ಎಫ್ ಐ)ಗಜೇಂದ್ರಗಡ ತಾಲ್ಲೂಕು ಸಮಿತಿಯು ಸರ್ಕಾರಕ್ಕೆ ಒತ್ತಾಯಿಸುತ್ತದೆ ಎಂದರು.
ಕೃಷಿಕೂಲಿಕಾರರ ಸಂಘಟನೆಯ ಮುಖಂಡರಾದ ಬಾಲು ರಾಠೋಡ ಅವರು ಮಾತನಾಡಿ ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ತೀರಾ ಅಗತ್ಯ ಇದ್ದು ಹಾಸ್ಟೆಲ್ ಪ್ರಾರಂಭಿಸಲು ಶಾಸಕರು ಮತ್ತು ಅಧಿಕಾರಿಗಳು ಹಿತಾಶಕ್ತಿ ತೋರಬೇಕು. ವಿದ್ಯಾರ್ಥಿಗಳ ಹೋರಾಟಕ್ಕೆ ನಮ್ಮ ಕೃಷಿ ಕೂಲಿಕಾರರ ಸಂಘಟನೆಯ ಸಂಪೂರ್ಣ ಬೆಂಬಲ ಇದೆ ಎಂದರು.
ಒಂದು ತಾಸು ಗಟ್ಟಲೆ ಕೆ ಕೆ ಸರ್ಕಲ್ ಬಂದ ಮಾಡಿದ ಮೇಲೆ ಅಧಿಕಾರಿಗಳು ಎಚ್ಚೆದ್ದು ಹೋರಾಟದ ಸ್ಥಳಕ್ಕೆ ಬಂದ ಶಿರಸ್ತೇದಾರರು, ಪಿ ಎಸ್ ಐ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದರು ಆಗ ಅಧಿಕಾರಿಗಳ, ಪೋಲಿಸರ ಹಾಗೂ ವಿದ್ಯಾರ್ಥಿ ಮುಖಂಡರ ಮಧ್ಯ ಕೆಲ ಹೊತ್ತು ವಾಗ್ವಾದ ನಡೆಯಿತು. ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಅಧಿಕಾರಿಗಳು ಮತ್ತು ಪೋಲಿಸರು ಮನವಿ ಮಾಡಿದ ಮೇಲೆ ಹೋರಾಟವನ್ನು ಕೆ ಕೆ ಸರ್ಕಲ್ ನಿಂದ ತಹಶಿಲ್ದಾರರ ಕಚೇರಿಯಲ್ಲಿ ಮುಂದುವರಿಸಲಾಯಿತು.
ತಹಶಿಲ್ದಾರರ ಕಚೇರಿಯಲ್ಲಿ ಶಿರಸ್ತೇದಾರರು ಮಾನ್ಯ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿ ಹೋರಾಟದ ಕುರಿತು ತಿಳಿಸಿದ ಮೇಲೆ ಉಪನಿರ್ದೇಕರು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಕಳುಹಿಸಿರುವ ಪ್ರಸ್ತಾವನೆಯನ್ನು ಲಿಖಿತ ರೂಪದಲ್ಲಿ ನೀಡಿದ ಮೇಲೆ ಮತ್ತು ಅಗಸ್ಟ್ ತಿಂಗಳ ಮೂರನೇ ವಾರದಲ್ಲೇ ಹಾಸ್ಟೆಲ್ ಪ್ರಾರಂಭಿಸುವ ಭರವಸೆ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ನ್ನು ಇದೇ ವರ್ಷ ಪ್ರಾರಂಭಿಸಬೇಕು ಈ ಕುರಿತು ಅಗಸ್ಟ್ ಮೂರನೇ ವಾರದಲ್ಲಿ ಸ್ಪಷ್ಟತೆ ನೀಡಬೇಕು ಇಲ್ಲವಾದರೆ ಮತ್ತೆ ಹೋರಾಟ ಮಾಡಲಾಗುತ್ತದೆ ಎಂಬ ಎಚ್ಚರಿಕೆ ನೀಡಿ ಹೋರಾಟವನ್ನು ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಎಸ್ ಎಫ್ ಐ ನ ತಾಲ್ಲೂಕು ಅಧ್ಯಕ್ಷರಾದ ಪ್ರದೀಪ್ ಎಂ, ಮುಖಂಡರಾದ ಅನೀಲ್, ಸುನೀಲ್,ಬಸವರಾಜ, ಮಂಜು, ಕಿರಣ, ಮಾರ್ತಾಂಡ, ಬಸವರಾಜ ಜೀಗೇರಿ, ಬಸವರಾಜ ಹೊಸಹಳ್ಳಿ, ವಿನೋದ, ಗೀರಿಶ್, ಮೇಘರಾಜ, ನಂದಿನಿ, ಪ್ರಗತಿ, ದಾವಲಬಿ, ಹೊನ್ನಮ್ಮ, ಲಕ್ಷ್ಮೀ, ನೇತ್ರಾ, ಅಕ್ಷತಾ, ಪವಿತ್ರಾ, ಕಾರ್ಮಿಕ ಮುಖಂಡರಾದ ಕನಕಪ್ಪ, ಮೈಬು ಹವಾಲ್ದಾರ ಮತ್ತು ಸಾವಿರಾರು ವಿದ್ಯಾರ್ಥಿಗಳು ಮಳೆಯನ್ನೇ ಲೆಕ್ಕಿಸದೆ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ವರದಿ : ಸುರೇಶ ಬಂಡಾರಿ.