
ಗಜೇಂದ್ರಗಡ : ಬಡಮಕ್ಕಳಿಗೆ ಹಾಲು ಹಣ್ಣು ಆಹಾರ ನೀಡುವ ಮೂಲಕ ಬಸವ ಪಂಚಮಿ ಆಚರಣೆ.
ಗಜೇಂದ್ರಗಡ:ಸತ್ಯಮಿಥ್ಯ (ಆಗಸ್ಟ್ -08).
ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ ಉಂಬ ಜಂಗಮ ಬಂದಡೆ ನಡೆಯೆಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ. ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ
ಕಲ್ಲತಾಗಿದ ಮಿಟ್ಟೆಯಂತಪ್ಪರಯ್ಯಾ ಎಂಬ ನಾನ್ನುಡಿಯಂತೆ ವಾಸ್ತವ ಪ್ರಪಂಚ ನಡೆಯುತ್ತಿರುವ ಈ ಸನ್ನಿವೇಶದಲ್ಲಿ.
ಬಡ ಮಕ್ಕಳ ಹೊಟ್ಟೆಗಳಿಗೆ,ಹಣ್ಣು ಹಾಲು ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳ ಸದಸ್ಯರಿಂದು ‘ಬಸವ ಪಂಚಮಿ’ ಆಚರಿಸಿದವು.
ಊರ ಹೊರವಲಯದ ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ದಿನದ ಬದುಕು ಸಾಗಿಸುತ್ತಿರುವವರ ಮಕ್ಕಳೊಂದಿಗೆ ಸೇರಿ ಹಾಲು, ಹಣ್ಣು, ಬಿಸ್ಕೆಟ್ ನೀಡುವ ಮೂಲಕ ಕಲ್ಲಿನ ಮೇಲೆ ಹಾಲನೆರೆದರೆ ಪ್ರಯೋಜನವೇನು? ಹಸಿದ ಹೊಟ್ಟೆಗೆ ಅನ್ನವಿತ್ತರೆ ಹಬ್ಬವಲ್ಲವೇ? ಎಂಬ ಸಂದೇಶ ಸಾರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಕಳಕಯ್ಯ ಸಾಲಿಮಠ, ಸಾಂಪ್ರದಾಯಿಕ ನಾಗರಪಂಚಮಿ ಆಚರಣೆ ಬದಲಾಗಿ ಬಸವ ಪಂಚಮಿ ಆಚರಿಸುತ್ತಿದ್ದೇವೆ ಎಂದರು.
ವೈಚಾರಿಕ ಪ್ರಜ್ಞೆಯೊಂದಿಗೆ ಮಾದರಿ ಸಮಾಜ ರೂಪಿಸಲು ಬಸವಾದಿ ಶರಣರು ಪ್ರಯತ್ನ ನಡೆಸಿದ್ದರು. ಮೌಢ್ಯ ಕಂದಾಚಾರ ಬಿಡುವ ಅವರ ಸದಾಶಯದಂತೆ ನಾವಿಂದು ಸಾಗಬೇಕಿದೆ.ಪೌಷ್ಟಿಕ ಆಹಾರವಾಗಿರುವ ಹಾಲನ್ನು ಕಲ್ಲು ಮಣ್ಣಿನ ಮೇಲೆ ಸುರಿಯುವುದು ಸಲ್ಲದು. ಅದರ ಅವಶ್ಯಕತೆ ಇರುವವರಿಗೆ ಅದನ್ನು ನೀಡಬೇಕು. ಅಂಥ ಮಾನವೀಯ ಕಾರ್ಯಗಳಲ್ಲಿ ಬಸವಪರ ಸಂಘಟನೆಗಳು ಸದಾ ಮುಂದಾಗುತ್ತವೆ ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ಬಸವ ಕೇಂದ್ರಗಳ ಮುಖಂಡರಾದ ಗುರುಲಿಂಗಯ್ಯ ಓದಸುಮಠ, ಬಸವರಾಜ ಕೊಟಗಿ, ಬಸವರಾಜ ಹೂಗಾರ, ಸಾಗರ ವಾಲಿ, ಮಂಜು ಹರಿಹರ, ಶರಣಪ್ಪ ಹಡಪದ, ವೀರೇಶ ವಾಲಿ, ಮಹಾಂತೇಶ ಕಡಗದ, ಬಸಯ್ಯ ಹಿರೇಮಠ, ಎಂ.ಎಸ್. ಅಂಗಡಿ, ಬಸವರಾಜ ಹೊಸಮನಿ, ಸಮರ್ಥ, ದೀಪಕ, ಗೌತಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.