*ಶಿಗ್ಗಾವಿ ಸವಣೂರು ಕ್ಷೇತ್ರದ ಜನರ ಪ್ರೀತಿ ವಿಶ್ವಾಸ ಮರೆಯಲು ಸಾಧ್ಯವಿಲ್ಲ: ಬಸವರಾಜ ಬೊಮ್ಮಾಯಿ*
*ನಾನು ಜನರ ರಾಜಕಾರಣ ಮಾಡುತ್ತ ಜನರೊಂದಿಗೆ ಇರುತ್ತೇನೆ: ಬಸವರಾಜ ಬೊಮ್ಮಾಯಿ*
ಮತದಾರರಿಗೆ ಧನ್ಯವಾದ ಯಾತ್ರೆಯಲ್ಲಿ ಸಂಸದ ಬಸವರಾಜ ಅಭಿಮತ
ಹಾವೇರಿ:ಸತ್ಯ ಮಿಥ್ಯ (ಜುಲೈ -18)
ಶಿಗ್ಗಾವಿ ಸವಣೂರು ಕ್ಷೇತ್ರದ ಜನರ ಪ್ರೀತಿ ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ನಿಮ್ಮ ಸಂಬಂಧ ಶಾಸ್ವತವಾದದ್ದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಶಿಗ್ಗಾವಿ ಕ್ಷೇತ್ರದಲ್ಲಿ ನಡೆಸುತ್ತಿರುವ ಮತದಾರರಿಗೆ ಧನ್ಯವಾದ ಯಾತ್ರೆಯಲ್ಲಿ ಪಾಲ್ಗೊಂಡು ಹಳೆ ಮುತ್ತಳ್ಳಿ, ತಿಮ್ಮಾಪುರ, ಎನ್. ಎಂ. ತಡಸ, ಕಡಹಳ್ಳಿ, ಹಿರೇಬೆಂಡಿಗೇರಿ, ಚಿಕ್ಕಬೆಂಡಿಗೇರಿ, ಬೆಳವಲಕೊಪ್ಪ, ಸುರುಪ್ ಬೆಂಡಿಗೇರಿ ಗ್ರಾಮಗಳಲ್ಲಿ ಮತದಾರರಿಗೆ ಧನ್ಯವಾದ ಅರ್ಪಿಸಿ ಮಾತನಾಡಿದರು.
ನನ್ನನ್ನು ನಾಲ್ಕು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ, ಉಪಕಾರ ಮಾಡಿದವರ ಉಪಕಾರ ಸ್ಮರಣೆ ಮಾಡುವುದು ನಮ್ಮ ಧರ್ಮ. ಕೇವಲ ಅಧಿಕಾರ ಇದ್ದರೆ ಮಾತ್ರ ಬರಬೇಕೆಂದು ಇಲ್ಲ. ನಮ್ಮ ನಿಮ್ಮ ನಡುವಿನ ಸಂಬಂಧ ಮುಖ್ಯ. ನಾನು ನಿಮ್ಮ ಜೊತೆ ಸದಾಕಾಲ ಇರುತ್ತೇನೆ ಎಂದು ಮೊದಲು ಹೇಳಿದ್ದೆ. ನನ್ನ ಹೃದಯಲ್ಲಿ ನಿಮಗೆ ಸ್ಥಾನ ಇದೆ. ನಿಮ್ಮ ಹೃದಯದಲ್ಲಿ ನನಗೆ ಸ್ಥಾನ ಇದೆ. ಆ ಹಿನ್ನೆಲೆಯಲ್ಲಿ ನಾನು ಮೊದಲಿನಂತೆಯೇ ಸದಾಕಾಲ ನಿಮ್ಮಕೆಲಸ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.
ಸಾಮಾನ್ಯವಾಗಿ ರಾಜಕಾರಣದಲ್ಲಿ ಚುನಾವಣೆಗೆ ಸೀಮಿತ ಅಥವಾ ರಾಜಕಾರಣಕ್ಕೆ ಸೀಮತವಾದ ಸಂಬಂಧಗಳಿರುತ್ತವೆ. ಎರಡು ರೀತಿಯ ರಾಜಕಾರಣ ಇರುತ್ತದೆ. ಒಂದು ಅಧಿಕಾರದ ರಾಜಕಾರಣ ಇನ್ನೊಂದು ಜನರ ರಾಜಕಾರಣ. ನಾನು ನಿಮ್ಮೆಲ್ಲರ ಆಶೀರ್ವಾದದಿಂದ ಜನರ ರಾಜಕಾರಣ ಮಾಡುತ್ತ ಬಂದಿದ್ದೇನೆ. ಆ ಪ್ರೀತಿ ಉಳಿಸಿಕೊಳ್ಳಲು ನನ್ನ ಜೀವನದ ಉಸಿರಿರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳಿದರು.
*ಅಭಿವೃದ್ದಿ ನಿರಂತರ ಪ್ರಕ್ರಿಯೆ*
ಶಿಗ್ಗಾವಿ ತಾಲೂಕು ಯಾವ ರೀತಿ ಇತ್ತು ಯಾವ ರೀತಿ ಅಭಿವೃದ್ಧಿ ಯಾಗಿದೆ ಎನ್ನುವುದನ್ನು ನೀವೆಲ್ಲ ಗಮನಿಸಿದ್ದೀರಿ ಎಂದು ಭಾವಿಸಿದ್ದೇನೆ. ಅಭಿವೃದ್ಧಿ ನಿರಂತರವಾಗಿ ನಡೆಯುವ ಪ್ರಕ್ರಿಯೆ, ಊರಿಗೆ ಯಾವುದಾದರೂ ಒಂದು ಕೆಲಸ ಮಾಡಿದರೆ ಮುಗಿಯಿತು ಎನ್ನುವ ಕಾಲ ಇತ್ತು. ಅದೇ ಕೆಲಸವನ್ನು ಹತ್ತು ವರ್ಷ ಹೇಳುತ್ತಿದ್ದರು. ಆದರೆ ಈಗ ಹಾಗೆ ಇಲ್ಲ ಜನರು ಜಾಗೃತರಾಗಿದ್ದಾರೆ. ಜನಪ್ರತಿನಿಧಿಗಳು ಒಂದಾದ ನಂತರ ಒಂದು ಕೆಲಸವನ್ನು ನಿರಂತರ ಮಾಡಬೇಕಾಗುತ್ತದೆ. ಆಗ ಮನಸಿಗೆ ಸಮಾಧಾನ ಆಗುತ್ತದೆ. ನನಗೆ ಒಂದು ಸಮಾಧಾನದ ವಿಷಯ ಏನೆಂದರೆ ಹಿಂದುಳಿದ ತಾಲೂಕನ್ನು ಅಭಿವೃದ್ಧಿ ಹೊಂದುತ್ತಿರುವ ತಾಲೂಕನ್ನಾಗಿ ಮಾಡಿರುವ ಸಮಾಧಾನ ಇದೆ. ತಾಲೂಕಿನ ಅಭಿವೃದ್ಧಿ ಹೇಗೆ ಎಂದು ಒಂದು ತೋಟ ಮಾಡಿ, ಹದ ಮಾಡಿ, ಸಸಿ ನೆಟ್ಟು ಬೆಳೆಸಿದ್ದೇವೆ. ಕೆಲವು ಫಲ ಕೊಡುತ್ತವೆ. ಕೆಲವು ಫಲ ಕೊಡುವುದಿಲ್ಲ. ಆ ತೋಟವನ್ನು ಎಲ್ಲರೂ ಸಂರಕ್ಷಣೆ ಮಾಡಿಕೊಂಡು ಹೋದರೆ, ಅದರಿಂದ ನಮಗೆ ಹೆಚ್ಚಿನ ಫಲ ದೊರೆಯುತ್ತದೆ. ತೋಟ ಕಾಯುವ ಮತ್ತು ಬೆಳೆಸುವ ಕೆಲಸವನ್ನು ತಾವೆಲ್ಲರೂ ಸೇರಿ ಮಾಡಬೇಕು. ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಹೇಳಿದರು.
*ಸಾಮಾಜಿಕ ಸಾಮರಸ್ಯ ಮುಖ್ಯ*
ನಾನು ಜಾತಿ ಮತ, ಪಂಥ ಭೇದವಿಲ್ಲದೆ ಕೆಲಸ ಮಾಡಿದ್ದೇನೆ. ಚುನಾವಣೆ ಬರುತ್ತವೆ ಹೋಗುತ್ತವೆ. ಯಾರಾದರೂ ಶಾಸಕರಾಗಬಹುದು, ಯಾರಾದರೂ ಸಂಸದರಾಗಬಹುದು, ಆದರೆ, ಊರಿನ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಮರಸ್ಯಕ್ಕೋಸ್ಕರ ನಾವೆಲ್ಲರೂ ಒಕ್ಕಟ್ಟಾಗಿರಬೇಕು. ಯಾವುದೇ ಧರ್ಮ, ದೇಶ, ಸಮಾಜದಲ್ಲಿ ಹುಟ್ಟಬೇಕೆಂದು ಯಾರೂ ಅರ್ಜಿ ಹಾಕಿ ಹುಟ್ಟುವುದಿಲ್ಲ. ಆದರೆ, ಮನುಷ್ಯರಾಗಿ ಹುಟ್ಟಿದ ಮೇಲೆ ಬದುಕು ನಮ್ಮ ಕೈಯಲ್ಲಿರುತ್ತದೆ. ನಾವೆಲ್ಲ ಒಂದು ಎಂದು ಕೆಲಸ ಕಾರ್ಯಗಳನ್ನು ಮಾಡೋಣ, ನಿಮ್ಮ ಒಬ್ಬ ಸಹೋದರ ನಿಮ್ಮ ಬೆನ್ನ ಹಿಂದೆ ಇದ್ದಾನೆ. ನೀವು ಯಾವಾಗ ಕರೆದರೂ ನಿಮ್ಮ ಸಮಸ್ಯೆ ಪರಹಾರಕ್ಕೆ ಬರುತ್ತಾನೆ ಎಂಬ ವಿಶ್ವಾಸ ಇಟ್ಟುಕೊಳ್ಳಿ ಎಂದು ಭರವಸೆ ನೀಡಿದರು.
ನಿಮ್ಮ ಊರಿಗೆ ಬಂದಾಗ ಪ್ರೀತಿ ವಿಶ್ವಾಸ ತೋರಿಸಿ, ರೊಟ್ಟಿ, ನವಣಕ್ಕಿ ಅನ್ನ, ಉಪ್ಪಿಟ್ಟು ಚಾ ಕೊಟ್ಟಿದ್ದೀರಿ, ನಾನು ಅದೆಲ್ಲವನ್ನು ಮರೆಯಲು ಸಾಧ್ಯವಿಲ್ಲ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ನಿಮ್ಮ ಸಂಬಂಧ ನಿರಂತರವಾಗಿ ಅದನ್ನು ಶಾಸ್ವತವಾಗಿ ಉಳಿಸಿಕೊಂಡು ಹೋಗೋಣ ಎಂದರು.
ವರದಿ : ಮುತ್ತು.