
“ಆಪರೇಷನ್ ಕೊಂಬುಡಿಕ್ಕಿ” ನಿರ್ಮಾಣ ಮಾಡಲು ಅಣಿಯಾದ ಅನುಪ್ ಹನುಮಂತೇಗೌಡ.
ಎಸ್ ಮಹೇಂದರ್ ನಿರ್ದೇಶನದ ಈ ಚಿತ್ರಕ್ಕೆ ಕಿಶೋರ್ ನಾಯಕ
ಸಿನಿಲೋಕ : ಸತ್ಯಮಿಥ್ಯ (ಆಗಸ್ಟ್ -09).
ಸೂಪರ್ ಹಿಟ್ ಚಿತ್ರ “ಶಿವಾಜಿ ಸುರಕ್ಕಲ್” ಡಿಟೆಕ್ಟಿವ್ ಸರಣಿಗಳ ನಿರ್ಮಾಪಕ ಅನುಪ್ ಹನುಮಂತೇಗೌಡ ತಮ್ಮ ಮೂರನೇ ನಿರ್ಮಾಣದ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಹಿರಿಯ ನಿರ್ದೇಶಕ ಎಸ್ ಮಹೇಂದರ್ ಅವರ ನಿರ್ದೇಶನದಲ್ಲಿ ಕಿಶೋರ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರಕ್ಕೆ “ಆಪರೇಷನ್ ಕೊಂಬುಡಿಕ್ಕಿ” ಎಂದು ಹೆಸರಿಟ್ಟಿದ್ದಾರೆ.
ಕನ್ನಡ ಚಿತ್ರರಂಗದ ಕಿರಿಯ ಮತ್ತು ಯಶಸ್ವಿ ನಿರ್ಮಾಪಕ ಅನುಪ್ ಹನುಮಂತೇಗೌಡ ಈಗ “ಸಿಲ್ವರ್ ಸ್ಕ್ರೀನ್ ಸ್ಟುಡಿಯೋಸ್” ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಡಿಯಲ್ಲಿ “ಆಪರೇಷನ್ ಕೊಂಬುಡಿಕ್ಕಿ” ಎಂಬ ಬಿಗ್ ಬಜೆಟ್ ಚಿತ್ರ ನಿರ್ಮಾಣದ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.
“ಗಟ್ಟಿಮೇಳ” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಎಸ್ ಮಹೇಂದರ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕನಾಗಿ “ಕಂಠಿ” ಚಿತ್ರದ ಮೂಲಕ ಚಿತ್ರರಂಗ ಪಾದಾರ್ಪಣೆ ಮಾಡಿ, ಪ್ರಸ್ತುತ ದಕ್ಷಿಣ ಭಾರತದ ಬಹು ಬೇಡಿಕೆಯ ನಟ ಹಾಗೂ ಅಪ್ಪಟ ಕನ್ನಡಿಗರಾದ ಕಿಶೋರ್ ಅವರು ಅಭಿನಯಿಸುತ್ತಿದ್ದಾರೆ. ಕೆ.ಜಿ.ಎಫ್, ಸಲಾರ್ ಖ್ಯಾತಿಯ ರವಿ ಬಸ್ರೂರ್ ರವರು ಸಂಗೀತ ನೀಡಲಿದ್ದಾರೆ, ಛಾಯಾಗ್ರಾಹಕರಾಗಿ ಹೆಬ್ಬುಲಿ, ಕ್ರಾಂತಿ ಸಿನಿಮಾಗಳ ಖ್ಯಾತಿಯ ಕರುಣಾಕರ್ ರವರು ಕೆಲಸ ಮಾಡುತ್ತಿದ್ದು, ಕನ್ನಡದ ಹೆಸರಾಂತ ಸಂಕಲನಕಾರರಾದ ದೀಪು.ಎಸ್.ಕುಮಾರ್ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಕನ್ನಡದ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರ ಸಮಾಗಮದಲ್ಲಿ ಈ ಚಿತ್ರ ಅದ್ದೂರಿಯಾಗಿ ಮೂಡಿ ಬರಲಿದೆ.
ಕನ್ನಡ ಚಿತ್ರಗಳ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವುದು ನಿರ್ಮಾಪಕರ ಆಸೆಯಾಗಿದೆ. ಚಿತ್ರರಂಗದ ಸದ್ಯದ ಪರಿಸ್ಥತಿಯಲ್ಲಿ ದೊಡ್ಡ ನಿರ್ಮಾಣ ಸಂಸ್ಥೆಗಳ ನಿರ್ಮಾಪಕರುಗಳ, ದೊಡ್ಡ ದೊಡ್ಡ ಸ್ಟಾರ್ಗಳ ಸಿನಿಮಾಗಳು ಮಾತ್ರ ಮಾರುಕಟ್ಟೆಯಲ್ಲಿ ಯಶಸ್ಸುಗಳಿಸುತ್ತಿದೆ. ಈ ಸಮಯದಲ್ಲಿ ಸದಭಿರುಚಿಯ ಚಿತ್ರಗಳನ್ನು ಸೀಮಿತ ಬಜೆಟ್ ನಲ್ಲಿ ನಿರ್ಮಾಣ ಮಾಡಿ ಮಾರುಕಟ್ಟೆಯಲ್ಲಿ ಜನರಿಗೆ ತಲುಪಿಸಿ ಅದನ್ನು ಯಶಸ್ವಿಗೊಳಿಸಿದ ನಿರ್ಮಾಪಕ ಅನುಪ್ ಹನುಮಂತೇಗೌಡ ಈಗ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ವರದಿ : ಶಿವು ರಾಠೋಡ್.