
ದೋಷಪೂರಿತ ಜಾತಿಗಣತಿಯಿಂದ ಲಿಂಗಾಯಿತರಿಗೆ ಅನ್ಯಾಯ – ತೋಂಟದಾರ್ಯ ಶ್ರೀ ಕಿಡಿ.
ಗದಗ :ಸತ್ಯಮಿಥ್ಯ (ಎ-16).
ಸರ್ಕಾರದ ಜಾತಿಗಣತಿ ವರದಿ ಕರುನಾಡಲ್ಲಿ ಹೊಸ ರಾಜಕೀಯ ಕಿಚ್ಚನ್ನು ಹೊತ್ತಿಸಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸ್ವಪಕ್ಷದವರು ಸೇರಿದಂತೆ ಅನೇಕರು ಬೆಂಕಿ ಉಗುಳುತ್ತಿದ್ದಾರೆ.
ಈ ಕುರಿತು ಗದುಗಿನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ. ಸಿದ್ದರಾಮ ಶ್ರೀಗಳು ಅಸಮಾಧಾನ ಹೊರಹಾಕಿದ್ದಾರೆ.ಜಾತಿಗಣತಿ ದೋಷಪೂರಿತ ವರದಿಯಾಗಿದೆ ವರದಿಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ಲಿಂಗಾಯತರು ಬಹುಸಂಖ್ಯಾತರೆಂಬುದು ಎಲ್ಲರಿಗೂ ತಿಳಿದಿದೆ. ನಂತರ ಒಕ್ಕಲಿಗರು ಸೇರಿದಂತೆ ವಿವಿಧ ಜಾತಿಯವರು ಮುಂಚೂಣಿಯಲ್ಲಿದ್ದಾರೆ. ಆದರೆ, ಲಿಂಗಾಯತರ ಜನಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಲಿಂಗಾಯತರು ಮೀಸಲಾತಿಗಾಗಿ ಉಪಜಾತಿಯ ಹೆಸರನ್ನು ಬರೆಸಿರುವ ಕಾರಣ ಇರಬಹುದು. ದೋಷಪೂರಿತ ವರದಿಯನ್ನ ಸರ್ಕಾರ ಒಪ್ಪಿಕೊಳ್ಳುವುದರಿಂದ ಅನೇಕರಿಗೆ ಅನ್ಯಾಯವಾಗಬಹುದು ಎಂದಿದ್ದಾರೆ.
ಸರ್ಕಾರ ಇನ್ನೊಮ್ಮೆ ಸಮೀಕ್ಷೆ ನಡೆಸಬೇಕು. ಮತ್ತೊಮ್ಮೆ ಜಾತಿಗಣತಿ ವರದಿ ಸಿದ್ಧಪಡಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು. ಜಾತಿಗಣತಿಯ ವರದಿ ಸಾರ್ವಜನಿಕರಲ್ಲಿ ಸಂಶಯ ಹುಟ್ಟುಹಾಕಿದೆ. ಸುಮಾರು ಏಳೆಂಟು ವರ್ಷಗಳ ಹಿಂದೆ ಜಾತಿಗಣತಿ ಸಿದ್ಧಪಡಿಸಿದ್ದಾರೆ. ಆ ಜಾತಿ ಜನಗಣತಿ ವರದಿ ಸಮರ್ಪಕವಾಗಿ ಇಲ್ಲ. ಆ ವರದಿಯನ್ನ ಸಿದ್ಧಪಡಿಸಿದ ವ್ಯಕ್ತಿಗಳು ಕರ್ನಾಟಕ ಪ್ರತಿಯೊಬ್ಬ ವ್ಯಕ್ತಿಯನ್ನು ಸಂಪರ್ಕಿಸಿಲ್ಲವೆಂಬ ಆರೋಪವಿದೆ ಎಂದು ಹೇಳಿದ್ದಾರೆ.
ವರದಿ : ಮುತ್ತು ಗೋಸಲ.