ಬಾನಾಪುರ-ಗದ್ದನಕೇರಿ ಕ್ರಾಸ್ ರಸ್ತೆ ಕಾಮಗಾರಿ. ಉಣಚಗೇರಿ-ಪುರ್ತಗೇರಿ-ರಾಜೂರ ಬೈಪಾಸಗೆ ರೈತರ ಆಕ್ಷೇಪ.
ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದ ಶಾಸಕ ಜಿ. ಎಸ್. ಪಾಟೀಲ್.
ಬಾನಾಪುರ-ಗದ್ದನಕೇರಿ ಕ್ರಾಸ್ ರಸ್ತೆ ಕಾಮಗಾರಿ. ಉಣಚಗೇರಿ-ಪುರ್ತಗೇರಿ-ರಾಜೂರ ಬೈಪಾಸಗೆ ರೈತರ ಆಕ್ಷೇಪ.
ಗಜೇಂದ್ರಗಡ : ಸತ್ಯಮಿಥ್ಯ (ಜುಲೈ -02).
ಬಾನಾಪುರ – ಗದ್ದನಕೇರಿ ಕ್ರಾಸ್ ವರೆಗಿನ ದ್ವಿಪಥ ರಾಷ್ಟ್ರೀಯ ಹೆದ್ದಾರಿ ಗಜೇಂದ್ರಗಡದ ಪಕ್ಕದಲ್ಲಿಂದ ಬೈಪಾಸ್ ರಸ್ತೆಯಾಗಿ ಉಣಚಗೇರಿ-ಪುರ್ತಗೇರಿ- ರಾಜೂರು ಮಾರ್ಗವಾಗಿ ಪರಿಗಣಿಸಲಾಗಿದ್ದು ಇದಕ್ಕೆ ನಮ್ಮ ಆಕ್ಷೇಪಣೆ ಇರುತ್ತದೆ ಎಂದು ರೈತರು ಇಂದು ರೋಣ ಮತಕ್ಷೇತ್ರದ ಶಾಸಕ ಜಿ. ಎಸ್. ಪಾಟೀಲರಿಗೆ ಮನವಿ ಸಲ್ಲಿಸಿದರು.
ಸರ್ವೇ ಮಾಡಿರುವ ಮಾರ್ಗದಲ್ಲಿ ನೀರಾವರಿ ಭೂಮಿ ಇರುವುದರಿಂದ ರೈತರಿಗೆ ತೊಂದರೆಯಾಗುತ್ತದೆ. ರಾಜೂರ ಗ್ರಾಮದ ಮೂಲಕ ಹಾದು ಹೋಗುವ ಈ ಮಾರ್ಗದ ಪಕ್ಕದಲ್ಲಿ ಶಾಲೆ ಇರುವುದರಿಂದ ಮಕ್ಕಳಿಗೆ ಬಹಳಷ್ಟು ತೊಂದರೆಯಾಗುತ್ತದೆ ಎಂದರು.
ಘೋರ್ಪಡೆ ಮನೆತನದ ಯಶರಾಜ್ ಮಾತನಾಡುತ್ತ ಹೆದ್ದಾರಿ ಹಾದುಹೋಗುವ ಮಾರ್ಗದಲ್ಲಿ ಬರುವ ರೈತರ ಬದುಕು ಬರದಾಗಲಿದೆ ಆದ್ದರಿಂದ ನಾವೆಲ್ಲರೂ ಕೂಡಿ ಪ್ರತಿಭಟನೆ ಮಾಡುತ್ತೇವೆ ನೀವು ಬೆಂಬಲ ಕೊಡಬೇಕು ಎಂದು ಶಾಸಕ ಜಿ. ಎಸ್. ಪಾಟೀಲರಿಗೆ ಹೇಳಿದರು.
ಈ ಬೈಪಾಸ್ ನಿರ್ಮಾಣದಿಂದ ಹಲವು ಜನರು ಸಂಪೂರ್ಣವಾಗಿ ಜಮೀನನ್ನು ಕಳೆದುಕೊಳ್ಳಲಿದ್ದಾರೆ. ಚಿಕ್ಕ ನೀರಾವರಿ ಜಮೀನುಗಳೊಂದಿಗೆ ಸಣ್ಣದಾಗಿ ಹೈನುಗಾರಿಕೆಯೊಂದಿಗೆ ಜೀವನ ಕಟ್ಟಿಕೊಳ್ಳಲು ಹವಣಿಸುತ್ತಿರುವ ರೈತರ ಬದುಕಿಗೆ ಮುಳ್ಳಾಗಲಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಜಿ. ಎಸ್. ಪಾಟೀಲ್. ರಸ್ತೆ ನಿಮ್ಮ ಹೊಲ್ದಾಗ ಹಾದು ಹೋಗೋದ್ರಿಂದ ಉಳಿದ ಹೊಲದ ಕಿಮ್ಮತ್ ಹೆಚ್ಚಾಗುತ್ತ ಎಂದರು ಈ ಸಂದರ್ಭದಲ್ಲಿ ಧಾರವಾಡ ಆಫೀಸ್ ನ್ಯಾಗ ರದ್ದಾಗೇತಿ ಅಂತಾ ಹೇಳಿ ಕಳಿಸಿದರ್ರಿ ಸರ್ ಅಂದಾಗ.ಹಂಗ್ ಹೇಳಿ ಕಳಸ್ತಾರ ಅಂತಾ ಹೇಳಿದ ಶಾಸಕರು ಮನವಿಯನ್ನು ಸಂಬಂಧಪಟ್ಟ ಅಧಿಕಾರಿಯ ಗಮನಕ್ಕೆ ತರುವ ಭರವಸೆ ನೀಡಿದರು.
ವರದಿ : ಸುರೇಶ ಬಂಡಾರಿ.