ವಖ್ಫ್ ಬೋರ್ಡ್ ಅವಾಂತರ ಬಗ್ಗೆ ಅದ್ಭುತವಾಗಿ ಮಾತನಾಡಿದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ .
ನರೇಗಲ್ – ಸತ್ಯಮಿಥ್ಯ (ನ -10)
ಪ್ರಸ್ತುತ ಸಂದರ್ಭದಲ್ಲಿ ನಮ್ಮ ಧರ್ಮ ಮತ್ತು ಪರಂಪರೆಯ ಬಗ್ಗೆ ನಮ್ಮೆಲ್ಲರಿಗೂ ಅರಿವಿನ ಅವಶ್ಯಕತೆ ಇದೆ. ಜೊತೆಗೆ ನೆಲದ ಕಾನೂನಿನ ಪರಿಕಲ್ಪನೆ ಇರಬೇಕು ಇಲ್ಲದಿದ್ದರೆ ಅಪಾಯ. ಇತ್ತೀಚೆಗೆ ರೈತರ ಜಮೀನಿನ, ದೇವಸ್ಥಾನ ಮಠ ಮಂದಿರಗಳ ಮತ್ತು ಸರ್ಕಾರಕ್ಕೆ ಸಂಬಂಧಪಟ್ಟ ಅನೇಕ ಆಸ್ತಿಗಳ ಪಹಣಿಯಲ್ಲಿ ವಖ್ಫ್ ಎಂದು ನಮೋದಾಗಿರುವುದು ಅತ್ಯಂತ ಕಳವಳಕಾರಿ ವಿಷಯ. ವಖ್ಫ್ ಕಾನೂನು ಬಹಳಷ್ಟು ವಿಚಿತ್ರವಾಗಿದೆ. ನಮ್ಮ ದೇಶ ನಾನಾ ಭಾಷೆ, ವಿವಿಧ ಧರ್ಮ, ಬೇರೆ ಬೇರೆ ಸಂಪ್ರದಾಯಗಳನ್ನು ಹೊಂದಿದ್ದರು. ಕಾನೂನಿನ ವಿಷಯದಲ್ಲಿ ಎಲ್ಲರೂ ಒಂದೇ ಎಂಬ ಪರಿಕಲ್ಪನೆ ನಮ್ಮಲ್ಲಿತ್ತು. ಆದರೆ ವಕ್ಫ್ ಬೋರ್ಡಿನ ಕಾನೂನನ್ನು ಅಧ್ಯಯನ ಮಾಡಿದಾಗ ಬಹಳಷ್ಟು ಖೇದವೆನಿಸುತ್ತದೆ ಎಂದು ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಅವರು ರಾಜ್ಯಾದ್ಯಂತ ರೈತರ ಕೃಷಿ ಜಮೀನು, ಹಿಂದೂ ಧರ್ಮದ ಮಠ ಮಂದಿರ, ಸರ್ಕಾರಿ ಜಾಗ ಹಾಗೂ ಸಾಮಾನ್ಯ ಜನರ ಪಹಣಿಯಲ್ಲಿ ವಖ್ಫ್ ಬೋರ್ಡ್ನ ಹೆಸರು ನಮೋದಾಗಿರುವುದನ್ನು ವಿರೋಧಿಸಿ.ಭಾರತೀಯ ಕಿಸಾನ್ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ನಡೆದ ನರೇಗಲ್ ಬಂದ್ ಸಂದರ್ಭದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ದೇಶವನ್ನು ಇಸ್ಲಾಂ ಧರ್ಮದವರು ಆಳ್ವಿಕೆ ನಡೆಸಿದ್ದು ಇತಿಹಾಸ . ಇಸ್ಲಾಂ ಧರ್ಮದಲ್ಲಿ ಕಟ್ಟರ್ ಮತ್ತು ಸೂಫಿ ಪರಂಪರೆಯನ್ನು ಹೊಂದಿರುವ ಅನೇಕ ಜನರಿದ್ದಾರೆ. ಸೂಫಿ ಪರಂಪರೆ ಎಂಬುವುದು ಶಾಂತಿ, ಸಮಾನತೆ, ಸಹ ಬಾಳ್ವೆಯ ಸಂದೇಶವನ್ನು ಸಾರುವ ಸಂಪ್ರದಾಯವನ್ನು ಹೊಂದುವ ಮೂಲಕ ಜಗತ್ತಿಗೆ ಒಳ್ಳೆಯ ಸಂದೇಶ ಸಾರಿದರು. ಆದರೆ ಧರ್ಮ ವಿಸ್ತಾರವಾದಿ ಮತ್ತು ಸಂಪ್ರದಾಯವಾದಿ ಇಸ್ಲಾಂ ಧರ್ಮಿಯರ ಕುತಂತ್ರದಿಂದ ಅವಘಡಗಳು ಸಂಭವಿಸುತ್ತಿವೆ. ಇದಕ್ಕೆ ಕುಮ್ಮಕ್ಕು ಕೊಡುವ ರಾಜಕೀಯ ಪಕ್ಷಗಳನ್ನು ಜನರು ತಿರಸ್ಕಾರ ಮಾಡಬೇಕು.
ಪುನಾ- ಬೆಂಗಳೂರು ರಸ್ತೆ ನಿರ್ಮಾಣ ಸಂದರ್ಭದಲ್ಲಿ ಅನೇಕ ರೈತರ ಪಹಣಿಯಲ್ಲಿ ಸರ್ಕಾರಿ ಸ್ವತ್ತು ಎಂಬ ಉಲ್ಲೇಖದಿಂದ. ಅಲ್ಲಿನ ರೈತರು ದಶಕಗಳ ಕಾಲ ಸಂಕಷ್ಟವನ್ನು ಅನುಭವಿಸಬೇಕಾಯಿತು. ತೀರಾ ಇತ್ತೀಚೆಗೆ ಅದಕ್ಕೊಂದು ಪರಿಹಾರ ದೊರಕಿ. ಅಲ್ಲಿನ ರೈತರ ಜಮೀನಿಗೆ ಕೋಟಿಗಟ್ಟಲೆ ಬೆಲೆ ಬಂದಿರುವುದು ನಮ್ಮ ಕಣ್ಣಮುಂದಿದೆ.
ಆದ್ದರಿಂದ ಆಳುವ ಸರ್ಕಾರ ಈ ರೀತಿಯ ಗೊಂದಲಗಳಿಗೆ ಆಸ್ಪದ ನೀಡದೆ. ಸಂಕಷ್ಟದಲ್ಲಿರುವ ರೈತರಿಗೆ ಆಸರೆಯಾಗಬೇಕು. ಇಲ್ಲದಿದ್ದರೆ ಇಂತಹ ಸರ್ಕಾರಗಳನ್ನು ಜನ ತಿರಸ್ಕರಿಸಬೇಕು ಎಂದರು.
ಈ ವೇಳೆ ನರೇಗಲ್ಲ ರಹಿಮಾನ್ ಶಾವಲಿ ದರ್ಗಾದ ಸೈಯದ್ ಮಂಜೂರ್ ಹುಸೇನ್ ಶ್ಯಾವಲಿ ಶರಣರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ರೈತರು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.