
ಪತ್ರಿಕೆಗಳು ವಿದ್ಯಾರ್ಥಿಗಳ ಸಾಧನೆಗೆ ಮಾರ್ಗದರ್ಶಕ – ಪಿ ಎಸ್ ಐ ಐಶ್ವರ್ಯ.
ನರೇಗಲ್:ಸತ್ಯಮಿಥ್ಯ (ಆ-24)
ವಿದ್ಯಾರ್ಥಿ ಜೀವನದಲ್ಲಿ ಓದುವ ಹಾಗೂ ಬರೆಯುವ ಹವ್ಯಾಸವನ್ನು ಇಟ್ಟುಕೊಳ್ಳಬೇಕು ಸಾಧಕರ ಜೀವನ ಚರಿತ್ರೆಗಳನ್ನು ಓದುವ ಮೂಲಕ ಸ್ಪೂರ್ತಿ ಪಡೆದುಕೊಳ್ಳಬೇಕು. ಪತ್ರಿಕೆಗಳು ವಿದ್ಯಾರ್ಥಿಗಳ ಸಾಧನೆಗೆ ಮಾರ್ಗದರ್ಶಕ ಎಂದು ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ ಹೇಳಿದರು.
ನರೇಗಲ್ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗಾಗಿ ಭಾನುವಾರ ಬೆಳಿಗ್ಗೆ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಬೇಕಾದರೆ ಕನಿಷ್ಠ ಐದು ಪತ್ರಿಕೆಗಳನ್ನು ಓದುವ ಹಾಗೂ ಪ್ರೌಢಶಾಲಾ ಹಂತದಲ್ಲಿ ಒಂದು ಪತ್ರಿಕೆಯ ಎಲ್ಲಾ ಪುಟಗಳನ್ನು ಓದುವ ಹವಾಸವನ್ನು ರೂಢಿಸಿಕೊಳ್ಳಬೇಕು. ಗಣಿತ, ವಿಜ್ಞಾನ, ಇಂಗ್ಲಿಷ್‌ನಂತ ವಿಷಯಗಳನ್ನು ಪದೆಪದೇ ಬಿಡಿಸುವ ಮೂಲಕ ಸರಳೀಕರಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಹಾಸ್ಟೆಲ್‌ನಲ್ಲಿ ಕಲಿಯಲು ಬಂದಿರುವ ಪ್ರತಿ ಮಗುವಿನ ಪಾಲಕರು ಶ್ರಮಿಕರಾಗಿದ್ದಾರೆ ಅವರ ಜೀವನ ದುಡಿಮೆ ಮೇಲೆ ಅವಲಂಬನೆಯಾಗಿರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಹಾಗೂ ಮೊಬೈಲ್ ಸಹವಾಸಕ್ಕೆ ಹೋಗದೆ ಅಭ್ಯಾಸದ ಕಡೆಗೆ ಮಹತ್ವ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ವೈದ್ಯ ಡಾ. ಕೆ. ಬಿ. ಧನ್ನೂರ, ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ಯೋಗ, ವ್ಯಾಯಾಮ, ಪ್ರಾರ್ಥನೆ ಮಾಡುವ ಗುಣಗಳನ್ನು ಬೆಳಸಿಕೊಳ್ಳಬೇಕು. ಚೆನ್ನಾಗಿ ಓದಿ ಸಾಧನೆ ಮಾಡುವ ಮೂಲಕ ಹಾಸ್ಟೆಲ್ ಹಾಗೂ ನಿಮ್ಮೂರಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಗದಗ-ಬೆಟಗೇರಿ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನರೇಗಲ್ ಪಟ್ಟಣದ ಡಾ. ಆರ್. ಕೆ. ಗಚ್ಚಿನಮಠ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ, ಬಿಸಿಎಂ ಹಾಸ್ಟೆಲ್ ನಿಲಯ ಮೇಲ್ವಿಚಾರಕರಾದ ಪ್ರಭಾಕರ ಬಿ. ಚಲವಾದಿ, ಸಿಬ್ಬಂದಿಗಳಾದ ಮಂಜುಳಾ ಕತ್ತಿಶೆಟ್ಟರ, ಸುರೇಶ ಮಾದರ, ಸರೋಜಾ ಲಮಾಣಿ ಇದ್ದರು.
ವರದಿ : ಸುರೇಶ ಬಂಡಾರಿ