
ಪತಿಯನ್ನು ಹತ್ಯೆ ಮಾಡಿ ಪತ್ನಿ ಹೆದ್ದಾರಿಯಲ್ಲಿ ಬಿಸಾಕಿ ಅಪಘಾತದ ಕಥೆ ಸೃಷ್ಟಿಸಿದ ಘಟನೆ.
ಗದಗ: ಸತ್ಯಮಿಥ್ಯ (ಅಗಸ್ಟ್ -31)
ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನ ಶವ ಹೆದ್ದಾರಿಯಲ್ಲಿ ಪತ್ತೆಯಾಗಿದ್ದು, ಮೊದಲು ಅಪಘಾತದಂತೆ ಕಂಡು ಬಂದರೂ ಪತ್ನಿಯೇ ಹತ್ಯೆ ಮಾಡಿ ಆತನನ್ನು ಹೆದ್ದಾರಿಯಲ್ಲಿ ಎಸೆದಿದ್ದಾಳೆ ಎಂಬ ಆರೋಪ ಮಾಡಲಾಗಿದೆ.
ಮಂಜುನಾಥ್ ಮೀಸಿ ಎಂಬಾತ ಶವವಾಗಿ ಪತ್ತೆಯಾದ ವ್ಯಕ್ತಿಯಾಗಿದ್ದು, ಆತನ ಪತ್ನಿ ಶಾರದಮ್ಮ ಕೊಲೆ ಮಾಡಿದ್ದಾಳೆ ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಗುರುವಾರ(ಆ 29)ತಡರಾತ್ರಿ ಮನೆಯಲ್ಲೇ ಹತ್ಯೆ ಮಾಡಿ ಹೆದ್ದಾರಿಯಲ್ಲಿ ಬಿಸಾಕಿ ಅಪಘಾತದ ಕಥೆ ಸೃಷ್ಟಿ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಮಂಜುನಾಥ್ ಕೋಟುಮಚಗಿಯಲ್ಲಿ ಅಕ್ಕನನ್ನ ಭೇಟಿಯಾಗಿ ರಾತ್ರಿ ಮನೆಗೆ ಮರಳಿದ್ದ. ಅಕ್ಕನ ಮನೆಯ ಪಕ್ಕದ ಬಡಾವಣೆಯಲ್ಲಿ ಹೆಂಡತಿ, ಮಕ್ಕಳ ಜತೆ ವಾಸವಿದ್ದ. ಶುಕ್ರವಾರ ನಸುಕಿನ 3 ಗಂಟೆಗೆ ರಸ್ತೆಯಲ್ಲಿ ಬಿದ್ದಿದ್ದಾನೆ ಎಂದು ಹೇಳಲಾಗಿದ್ದು ಸ್ಥಳಕ್ಕೆ ಪೊಲೀಸರು, ಶ್ವಾನದಳ ಸಿಬಂದಿ ದೌಡಾಯಿಸಿದ್ದಾರೆ.
ಶ್ವಾನದಳ ಸಿಬಂದಿ ಶ್ವಾನಕ್ಕೆ ಶವದ ವಾಸನೆ ತೋರಿಸಿದ ಎರಡೇ ನಿಮಿಷದಲ್ಲಿ ಮನೆ ಮುಂದೆ ಬಂದು ನಿಂತಿತ್ತು. ತತ್ ಕ್ಷಣ ಶಾರದಮ್ಮಳ ವಿಚಾರಣೆಯನ್ನು ಗದಗ ಗ್ರಾಮೀಣ ಪೊಲೀಸರು ನಡೆಸಿದ್ದಾರೆ. ಸ್ಥಳಕ್ಕೆ ಗದಗ ಎಸ್ ಪಿ ಬಿ.ಎಸ್. ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿ : ಮುತ್ತು ಗೋಸಲ್.