
ರಾಜ್ಯಸರ್ಕಾರಕ್ಕೆ KSMCL ವತಿಯಿಂದ 1402 ಕೋಟಿ ರೂಪಾಯಿ ಚೆಕ್ ವಿತರಣೆ.
ಬೆಂಗಳೂರು :ಸತ್ಯಮಿಥ್ಯ (ಮಾ -14).
ಕರ್ನಾಟಕ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಸ್ಟೇಟ್ ಮಿನರಲ್ಸ್ (KSMCL) ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖಾಂತರ ಸಿಎಂ ಪರಿಹಾರ ನಿಧಿಗೆ 15 ಕೋಟಿ, 2023-24 ನೇ ಸಾಲಿನ ಲಾಭಾಂಶವಾಗಿ 191.43 ಕೋಟಿ ಮತ್ತು ವಿಶೇಷ ಲಾಭಾಂಶವಾಗಿ 1195.63 ಕೋಟಿ ರೂಪಾಯಿ ಧನಾದೇಶ ಚೆಕ್ ನ್ನು ವಿತರಿಸಲಾಯಿತು.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ( ಈ ಹಿಂದೆ ಮೈಸೂರು ಮಿನರಲ್ಸ್ ಸಂಸ್ಥೆ) ಗಣಿಗಾರಿಕೆಯಲ್ಲಿ ತೊಡಗಿರುವ ಕರ್ನಾಟಕ ಸರ್ಕಾರದ ಸಂಪೂರ್ಣ ಮಾಲೀಕತ್ವದ ಒಂದು ಉನ್ನತ ಸಾರ್ವಜನಿಕ ಉದ್ದಿಮೆಯಾಗಿದ್ದು, ಸಂಸ್ಥೆಯು 2023-24ನೇ ಸಾಲಿನಲ್ಲಿ ರೂ.1403.58 ಕೋಟಿಗಳ ವಹಿವಾಟು ನಡೆಸಿ ರೂ.867.33 ಕೋಟಿ ತೆರಿಗೆ ಪೂರ್ವ ಲಾಭ ಹಾಗೂ ರೂ.643.20 ಕೋಟಿ ತೆರಿಗೆ ನಂತರದ ಲಾಭ ಗಳಿಸಿರುತ್ತದೆ.
ದಿನಾಂಕ 05.03.2025 ರಂದು ನಡೆದ 354ನೇ ಮಂಡಳಿ ಸಭೆಯಲ್ಲಿ ಕಂಪನಿಯು 2023-24ನೇ ಸಾಲಿನಲ್ಲಿ ಗಳಿಸಿರುವ ನಿವ್ವಳ ಲಾಭದ (Net profit) ಮೇಲೆ ಷೇರುದಾರರಿಗೆ ಅಂದರೆ ಸರ್ಕಾರಕ್ಕೆ ರೂ.191.43 ಕೋಟಿಗಳನ್ನು ಶೇಕಡಾ 30% ಲಾಭಾಂಶವಾಗಿ ನೀಡಲು ಮಂಡಳಿ ನಿರ್ದೇಶಕರು ಒಪ್ಪಿಗೆ ನೀಡಿದ್ದು, ದಿನಾಂಕ 05.03.2025 ರಂದು ನಡೆದ 58ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡಿರುತ್ತದೆ.
ಆರ್ಥಿಕ ಇಲಾಖೆಯ ದಿನಾಂಕ 15.07.2024ರ ಆದೇಶ ಸಂಖ್ಯೆ.ಆಇ 51 ಐಎನ್ವಿ 2024 ರನ್ವಯ ಶೇಕಡಾ 30% ವಿಶೇಷ ಲಾಭಾಂಶ ರೂ.1195.63 ಕೋಟಿಗಳನ್ನು ದಿನಾಂಕ 31.03.2024ರ ಬ್ಯಾಲೆನ್ಸ್ ಶೀಟ್ ಪ್ರಕಾರ ನಗದು ಮತ್ತು ನಗದು ಸಮಾನದ ಮೊತ್ತದ ಮೇಲೆ ವಿಶೇಷ ಲಾಭಾಂಶವಾಗಿ ನೀಡಲು ಮಂಡಳಿ ನಿರ್ದೇಶಕರು ಒಪ್ಪಿಗೆ ನೀಡಿದ್ದು, ದಿನಾಂಕ 05.03.2025 ರಂದು ನಡೆದ 58ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡಿರುತ್ತದೆ.ಪ್ರತಿ ವರ್ಷ ಈ ನಿಗಮದಿಂದ ರೂ.15.00 ಕೋಟಿಗಳನ್ನು ಮಾನ್ಯ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಆಯವ್ಯಯದಲ್ಲಿ ನಿಗದಿಪಡಿಸಲಾಗುತ್ತಿದ್ದು, 2023-24ನೇ ಸಾಲಿಗೆ ರೂ.15.00 ಕೋಟಿಗಳನ್ನು ನಿಗದಿಪಡಿಸಿದ್ದು, ರೂ.15.00 ಕೋಟಿಗಳನ್ನು ಈ ದಿನ ಮಾನ್ಯ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸ್ಟೇಟ ಮಿನರಲ್ಸ್ ಕಾರ್ಪೋರೇಶನ್ ಅಧ್ಯಕ್ಷರಾದ ಜಿ. ಎಸ್. ಪಾಟೀಲ್, ಭಾ. ಆ. ಸೇ ಕರ್ನಾಟಕ ಸರ್ಕಾರದ ಕಾರ್ಯದರ್ಶಿ ರಮಣ್ ದೀಪ್ ಚೌದರಿ, ಕೆ. ಎಸ್. ಎಂ. ಸಿ. ಎಲ್ ನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಸೇರಿದಂತೆ ಅನೇಕರಿದ್ದರು.
ವರದಿ : ಚನ್ನು. ಎಸ್.