ಅಂತಾರಾಷ್ಟ್ರೀಯ

ಪಾಕಿಸ್ತಾನ ಮೋತ್ತೊಮ್ಮೆ ಮುಖಭಂಗ / ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಒಪ್ಪದ ಭಾರತ ತಂಡ.

Share News

ಪಾಕಿಸ್ತಾನ ಮೋತ್ತೊಮ್ಮೆ ಮುಖಭಂಗ / ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಒಪ್ಪದ ಭಾರತ ತಂಡ.

ದುಬೈ/ಸತ್ಯಮಿಥ್ಯ (ಸೆ-29)

ಇಲ್ಲಿ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೂ, ಏಷ್ಯಾ ಕಪ್‌ ಟ್ರೋಫಿ ತಂಡದ ಕೈ ಸೇರಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಇಂಡಿಯಾ ತಂಡ ನಿರಾಕರಿಸಿದ ಕಾರಣ ವಿಜೇತ ತಂಡಕ್ಕೆ ಟ್ರೋಫಿಯನ್ನು ನೀಡದ ವಿಚಿತ್ರ ಘಟನೆ ನಡೆಯಿತು.

ಭಾನುವಾರ ತಡರಾತ್ರಿ ನಡೆದ ಈ ನಾಟಕೀಯ ಬೆಳವಣಿಗೆಯಿಂದಾಗಿ, ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ತಂಡವು ಟ್ರೋಫಿ ಇಲ್ಲದೆಯೇ ತಮ್ಮ ವಿಜಯವನ್ನು ಆಚರಿಸಬೇಕಾಯಿತು.

ಭಾನುವಾರ ನಡೆದ ಹೈವೋಲ್ಟೇಜ್‌ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಮಣಿಸಿದ ಭಾರತ, ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಕಾಯುತ್ತಿತ್ತು. ಆದರೆ, ವಿಜೇತರ ಟ್ರೋಫಿಯನ್ನು ಯಾರು ನೀಡುತ್ತಾರೆ ಎಂದು ಭಾರತೀಯ ತಂಡದ ಆಡಳಿತ ಮಂಡಳಿ ವಿಚಾರಿಸಿದಾಗ, ಅದು ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎಂದು ತಿಳಿದು ಬಂತು. ಪಾಕಿಸ್ತಾನಿ ಸಚಿವರಾಗಿರುವ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡವು ಸ್ಪಷ್ಟವಾಗಿ ನಿರಾಕರಿಸಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಳಂಬ

ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಬಹಳ ವಿಳಂಬವಾಗಿ ನಡೆಯಿತು. ನಖ್ವಿ ವೇದಿಕೆಯ ಮೇಲೆ ಬಂದು ನಿಂತಾಗ, ಭಾರತೀಯ ಆಟಗಾರರು ಸುಮಾರು 15 ಗಜಗಳಷ್ಟು ದೂರದಲ್ಲಿಯೇ ನಿಂತು, ಮುಂದೆ ಬರಲು ಒಪ್ಪಲೇ ಇಲ್ಲ. ಈ ಸಂದರ್ಭದಲ್ಲಿ, ಇನ್ನೂ ಕ್ರೀಡಾಂಗಣದಲ್ಲಿದ್ದ ಭಾರತೀಯ ಅಭಿಮಾನಿಗಳು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಾ ನಖ್ವಿಯವರನ್ನು ಹೀಯಾಳಿಸಿದರು.

ವೇದಿಕೆಯಲ್ಲಿದ್ದ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತಕ್ಕೆ ಯಾವುದೇ ಅಭ್ಯಂತರ ಇರಲಿಲ್ಲ. ಆದರೆ, ಅದಕ್ಕೆ ನಖ್ವಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಒಂದು ವೇಳೆ ನಖ್ವಿ ಒತ್ತಾಯಪೂರ್ವಕವಾಗಿ ಟ್ರೋಫಿ ನೀಡಲು ಪ್ರಯತ್ನಿಸಿದರೆ, ಅಧಿಕೃತವಾಗಿ ಪ್ರತಿಭಟನೆ ದಾಖಲಿಸುವುದಾಗಿ ಭಾರತೀಯ ತಂಡವು ಎಚ್ಚರಿಕೆಯನ್ನು ನೀಡಿತ್ತು.

ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ, ಸಂಘಟಕರು ಇದ್ದಕ್ಕಿದ್ದಂತೆ ಟ್ರೋಫಿಯನ್ನು ವೇದಿಕೆಯಿಂದ ಡ್ರೆಸ್ಸಿಂಗ್ ರೂಮ್‌ಗೆ ತೆಗೆದುಕೊಂಡು ಹೋದರು.

ಭಾರತ ಗೆಲುವಿಗೆ ಆಫ್ಘಾನಿಸ್ತಾನದಲ್ಲಿ ವಿಜಯೋತ್ಸವ ವಿಡಿಯೋ/ಕೃಪೆ ಟ್ವಿಟ್ಟರ್.

ಅಂತಿಮವಾಗಿ, ಕೇವಲ ವೈಯಕ್ತಿಕ ಪ್ರಶಸ್ತಿಗಳನ್ನು ಮಾತ್ರ ಭಾರತೀಯ ಆಟಗಾರರಿಗೆ ವಿತರಿಸಲಾಯಿತು ಮತ್ತು ವಿಜೇತ ತಂಡಕ್ಕೆ ಟ್ರೋಫಿಯನ್ನೇ ನೀಡದೆ ಸಮಾರಂಭವನ್ನು ಮುಕ್ತಾಯಗೊಳಿಸಲಾಯಿತು.

ಕ್ರಿಕೆಟ್ ಇತಿಹಾಸದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಚಾಂಪಿಯನ್ ತಂಡಕ್ಕೆ ಟ್ರೋಫಿ ನೀಡದೆ ಇರುವ ಘಟನೆ ನಡೆದಿದೆ. ಟೂರ್ನಿಯುದ್ದಕ್ಕೂ ಪಾಕಿಸ್ತಾನಿ ಆಟಗಾರರೊಂದಿಗೆ ಹಸ್ತಲಾಘವ ಮಾಡುವುದನ್ನು ಮತ್ತು ಪಂದ್ಯಕ್ಕೆ ಮೊದಲು ನಡೆಯಬೇಕಿದ್ದ ಫೋಟೋಶೂಟ್ ಅನ್ನು ಭಾರತೀಯ ತಂಡವು ನಿರಾಕರಿಸಿತ್ತು. ಇದೀಗ ಪಾಕಿಸ್ತಾನದ ಸಚಿವರ ಕೈಯಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಮೊದಲೇ ರವಾನಿಸಿ, ಟ್ರೋಫಿಯನ್ನೂ ಪಡೆದುಕೊಳ್ಳಲು ನಿರಾಕರಿಸಿ ಸುದ್ದಿಯಾಗಿದೆ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Leave a Reply

Your email address will not be published. Required fields are marked *

Back to top button
error: Content is protected !!