
ಪರಿಸರ ಪ್ರೇಮಿ ಸಂಗಮೇಶ ಜವಾದಿ ಕಾರ್ಯ ಅನನ್ಯ
ವಿಶೇಷ ಬರಹ : ಸತ್ಯಮಿಥ್ಯ (ಫೆ -17)
ಕರುನಾಡು ಕಂಡ ಶ್ರೇಷ್ಠ ಸಾಮಾಜಿಕ ಸೇವಕರು, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವೈಚಾರಿಕ ಚಿಂತಕ ಬರಹಗಾರರು. ಮಾಧ್ಯಮ ಲೋಕದಲ್ಲಿ ವಿಶಿಷ್ಟ ರೀತಿಯಲ್ಲಿ ಛಾಪು ಮೂಡಿಸಿ, ಸತ್ಯ ನಿಷ್ಠ ವರದಿಗಳಿಗೆ ಹೆಸರು ಮಾಡಿದವರು. ನಿಷ್ಕಲ್ಮಶ – ನಿಷ್ಕಳಂಕ – ಪ್ರಾಮಾಣಿಕ ಸೇವೆಗೆ ಪ್ರಸಿದ್ಧಿ ಪಡೆದವರು.
ನೇರ ನುಡಿ,ದಿಟ್ಟ ನಡೆಗೆ ಹೆಸರಾದವರು ನಮ್ಮ ಕಲ್ಯಾಣ ಕರ್ನಾಟಕ ಭಾಗದ ಹೋರಾಟಗಾರರು ಎಂದೇ ಮನೆ ಮಾತಾದವರು ಶ್ರೀಯುತ ಸಂಗಮೇಶ ನಾಗಶೆಟ್ಟಿ ಜವಾದಿ ರವರು. ಮೂಲತಃ ಜವಾದಿ ರವರು ಬೀದರ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಕೊಡಂಬಲ ಗ್ರಾಮದ ನಾಗಶೆಟ್ಟಿ ಜವಾದಿ ಮತ್ತು ಸರಸ್ವತಿ ಜವಾದಿ ರವರ ಸುಪುತ್ರರಾಗಿದ್ದಾರೆ.ಸ್ನಾತಕೋತ್ತರ ಪದವಿ ಪಡೆದುಕೊಂಡು, ಕೆಲವು ಕಡೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅನುಭವ ಸಹ ಹೊಂದಿರುತ್ತಾರೆ.
ಸಧ್ಯ ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಂಘಟನೆ, ಪರಿಸರ, ಕೃಷಿ, ಹೋರಾಟ, ಮಕ್ಕಳ – ಮಹಿಳೆಯರ – ವಿಕಲಚೇತನರ, ಮಾಧ್ಯಮ ಕ್ಷೇತ್ರಸೇರಿದಂತೆ ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಂಸ್ಕೃತಿಯ ರಕ್ಷಣೆಗಾಗಿ ನಿಸ್ವಾರ್ಥ ಮನೋಭಾವದಿಂದ ಸೇವಾ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.
ಕನ್ನಡ ಸಾಹಿತ್ಯ, ಶರಣ ಸಾಹಿತ್ಯ, ಜಾನಪದ ಪರಿಷತ್ತು, ಜಾನಪದ ಸಾಹಿತ್ಯ, ಚುಟುಕು ಸಾಹಿತ್ಯ, ವಚನ ಸಾಹಿತ್ಯ ಪರಿಷತ್ತಗಳ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಜೊತೆಗೆ ರಾಷ್ಟ್ರೀಯ ದೇಹಾಂಗದಾನ ಜಾಗೃತ ಸಮಿತಿ ಬೀದರ್ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ, ಪರಿಸರ ಸಂಘಟನೆಯ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ಸೇರಿದಂತೆ ಬೀದರ ಜಿಲ್ಲಾ ಸಾವಯವ ಕೃಷಿ ಪರಿವಾರದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಹೀಗೆ ಅನೇಕ ಸಂಘ – ಸಂಸ್ಥೆಗಳಲ್ಲಿ ಕೆಲಸ ಮಾಡಿಕೊಂಡು ಬರುತ್ತಿರುವ ಶ್ರೀಯುತ ಸಂಗಮೇಶ ಎನ್ ಜವಾದಿ ರವರ ಸೇವಾ ಕೈಂಕರ್ಯಗಳು ಅಪಾರವಾಗಿವೆ. ಅಷ್ಟೇ ರೀತಿಯಲ್ಲಿ ಜನಮನ್ನಣೆ ಸಹ ಪಡೆದುಕೊಂಡಿದ್ದಾರೆ. ಸರ್ವ ಜನಾಂಗದ ಜನಸಾಮಾನ್ಯರ ಪ್ರೀತಿ – ವಿಶ್ವಾಸಕ್ಕೂ ಭಾಜನರಾಗಿದ್ದಾರೆ.
ಹಾ ಅಂದಹಾಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಾಗೆ ಪರಿಸರ ಕ್ಷೇತ್ರದಲ್ಲಿಯೂ ವಿಶಿಷ್ಟ ರೀತಿಯಲ್ಲಿ ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸಂಗಮೇಶ ಎನ್ ಜವಾದಿ ರವರ ಕುರಿತು ಲೇಖನ ಬರೆಯುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಜವಾದಿ ರವರು ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ನಿರಂತರವಾಗಿ ಕೆಲಸ ಮಾಡುತ್ತಿರುವ ಕಾರಣ ಇವರ ಕುರಿತು ಬೆಳಕು ಚೆಲ್ಲುವ ಕಾರ್ಯ ಮಾಡಿರುತ್ತೇವೆ.
ಪರಿಸರ ಸಂರಕ್ಷಣೆಗಾಗಿ ಟೊಂಕಕಟ್ಟಿಕೊಂಡು ಹಗಲಿರುಳೆನ್ನದೆ ದುಡಿಯುತ್ತಿರುವ ಜವಾದಿ ರವರು ಪರಿಸರ ಸಂರಕ್ಷಣೆ ಇಂದಿನ ಸಮಾಜದ ಅವಿಭಾಜ್ಯ ಅಂಗವಾಗಿದೆ, ಆದರೆ ನಮ್ಮ ಪರಿಸರವನ್ನು ರಕ್ಷಿಸಲು ಏನು ಮಾಡಬಹುದು ಎಂಬುದರ ಕುರಿತು ಇತ್ತಿಚಿನ ಅನೇಕ ಜನರಿಗೆ ಮೂಲಭೂತ ಜ್ಞಾನವೂ ಇಲ್ಲ. ತಿಳುವಳಿಕೆಯಂತೂ ಮೊದಲೇ ಇಲ್ಲ ಎನ್ನುತ್ತಾರೆ. ಜೊತೆಗೆ ಇತ್ತೀಚಿನ ದಶಕಗಳಲ್ಲಿ ಪರಿಸರದ ಮೇಲೆ ಮಾನವನ ಒತ್ತಡಗಳು ಘಾತೀಯವಾಗಿ ಹೆಚ್ಚಿರುವುದರಿಂದ ಪರಿಸರ ಸಂರಕ್ಷಣೆ ವ್ಯಾಪಕ ಸಮಸ್ಯೆಯಾಗಿದೆ ಎಂಬುದು ಇವರ ನೇರ ನುಡಿ.
ಇನ್ನು ಪರಿಸರ ಮಾಲಿನ್ಯದ ವಿಷಯಕ್ಕೆ ಬಂದರೆ, ಮುಖ್ಯ ಅಂಶಗಳು ವಾಯುಮಾಲಿನ್ಯ, ಮಣ್ಣಿನ ಮಾಲಿನ್ಯ, ನೀರಿನ ಮಾಲಿನ್ಯ, ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ದೃಶ್ಯ ಮಾಲಿನ್ಯ ಸೇರಿದಂತೆ ಕೆಲಸದ ಸ್ಥಳಗಳ ಬಿಸಿ, ಕೈಗಾರಿಕಾ ಉತ್ಪಾದನಾ ಚಟುವಟಿಕೆಗಳು, ಶಕ್ತಿ ಉತ್ಪಾದನೆ ಮತ್ತು ಸಾರಜನಕ ಆಕ್ಸೈಡ್‌ಗಳು, ಇಂಗಾಲದ ಮಾನಾಕ್ಸೈಡ್, ಸೀಸ ಮತ್ತು ಮೋಟಾರು ವಾಹನಗಳಿಂದ ಹೊರಸೂಸುವ (ಅನಿಲಗಳಿಂದ) ವಾಯುಮಾಲಿನ್ಯಗಳಿಂದ ಪರಿಸರ ಮಾಲಿನ್ಯ ಪ್ರಮುಖವಾಗಿ ಆಗುತ್ತಿದೆ ಎನ್ನುತ್ತಾರೆ. ಮತ್ತೊಂದೆಡೆ, ನೀರಿನ ಮಾಲಿನ್ಯವು ಸಂಸ್ಕರಣೆ ಇಲ್ಲದೆ ಪ್ರಕೃತಿಗೆ ಬಿಡುಗಡೆಯಾಗುವ ದೇಶೀಯ ಮತ್ತು ಕೈಗಾರಿಕಾ ತ್ಯಾಜ್ಯನೀರಿನಿಂದ ಉಂಟಾಗುವ ಮೇಲ್ಮೈ ನೀರು, ಸಮುದ್ರಗಳು ಮತ್ತು ಅಂತರ್ಜಲವನ್ನು ಮಾಲಿನ್ಯಗೊಳಿಸುತ್ತದೆ. ದುರದೃಷ್ಟವಶಾತ್, ನಗರದ ಜೀವನ, ಕೈಗಾರಿಕಾ ಚಟುವಟಿಕೆಗಳು ಮತ್ತು ತಪ್ಪು ಕೃಷಿ ಪದ್ಧತಿಗಳಿಂದಾಗಿ ಮಣ್ಣು ಕಲುಷಿತಗೊಂಡಿದೆ ಎಂಬುದು ಸಂಗಮೇಶ ಜವಾದಿ ರವರ ಆತಂಕವಾಗಿದೆ.
ಇವುಗಳಲ್ಲದೆ ಮನುಷ್ಯನ ಉದಾಸೀನತೆ, ತಿಳಿಗೇಡಿತನದಿಂದ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ, ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ಕೂಡ ಅಷ್ಟೇ ಸತ್ಯ ಅನ್ನುತ್ತಾರೆ. ಈ ಬಗ್ಗೆ ಕಾಳಜಿ, ಚಿಂತೆ ಇರುವವರನ್ನೂ ಗಾಢವಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ – ಈ ನಿಟ್ಟಿನಲ್ಲಿ ನಾವೇನು ಮಾಡಬಹುದು ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದು ಬಿಟ್ಟಿದೆ ಎನ್ನುತ್ತಾರೆ.
ಈ ನಿಟ್ಟಿನಲ್ಲಿ ಪರಿಸರವನ್ನು ರಕ್ಷಿಸಲು , ಮಾಲಿನ್ಯವನ್ನು ತಡೆಗಟ್ಟಲು ಮತ್ತು ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಇಂದಿನ ದಿನಗಳಲ್ಲಿ ಬಹಳಷ್ಟು ಅಗತ್ಯತೆ ಮತ್ತು ಅನಿವಾರ್ಯತೆ ಇದೆ. ಇದಕ್ಕೆ ಸಂಬಂಧಿಸಿದಂತೆ ಇಂದಿನ ನಾಗರಿಕ ಸಮಾಜ ಸಹ ಸ್ವ ಇಚ್ಛೆಯಿಂದ ಪರಿಸರ ಸಂರಕ್ಷಣೆಗೆ ಮುಂದಾಗಬೇಕಾಗಿದೆ.
ಪರಿಸರಕ್ಕೆ ಹಾನಿಕಾರಕವಾದ ಎಲ್ಲಾ ಚಟುವಟಿಕೆಗಳನ್ನು ಆದಷ್ಟು ಬೇಗನೆ ತಡೆಯುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ದೃಢವಾದ ಕಾನೂನುಗಳನ್ನು ಜಾರಿಗೆ ತರುವುದು ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ ಎನ್ನುತ್ತಾರೆ ಜವಾದಿರವರು.
ಇನ್ನು ವಿಶೇಷವಾಗಿ ಹೇಳಬೇಕೆಂದರೆ ಪರಿಸರ ನಾಶ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸವಕಳಿಯು ಸದಾ ಇರುವ ಪ್ರಮುಖ ಸಮಸ್ಯೆಗಳಾಗಿವೆ. ಇವುಗಳನ್ನು ಹದ್ದುಬಸ್ತಿನಲ್ಲಿ ಇಡುವುದು ಬಹಳಷ್ಟು ಅವಶ್ಯಕತೆ ಇದೆ. ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕರ ಪ್ರಥಮ ಆದ್ಯತೆಯ ಕರ್ತವ್ಯವಾಗಬೇಕು ಎಂಬುದು ಇವರ ಅಂತರಾಳದ ಕಳಕಳಿ ಧ್ವನಿಯಾಗಿದೆ. ಇದಕ್ಕಾಗಿ ಸರ್ಕಾರ ಶಿಕ್ಷಣ ವ್ಯವಸ್ಥೆ ಮೂಲಕ ಶಾಲೆಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಕಡ್ಡಾಯವಾಗಿ ಪರಿಸರ ಶಿಕ್ಷಣದ ನೀತಿಯ ಪಾಠಗಳು ಮಕ್ಕಳಿಗೆ – ವಿಧ್ಯಾರ್ಥಿಗಳಿಗೆ ಭೋದನೆ ಮಾಡಿಸಬೇಕು. ಮಕ್ಕಳಿಗೆ ವಾರಕ್ಕೆ ಒಮ್ಮೆಯಾದರೂ ಪ್ರಾಕ್ಟಿಕಲ್ ಆಗಿ ಸಸಿಗಳು ನೆಡುವ, ಸಸಿಗಳನ್ನು ರಕ್ಷಿಸುವಂತಹ ಕೆಲಸಗಳು ಮಾಡಿಸಬೇಕು. ಈ ತನ್ಮೂಲಕವಾದರೂ ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಯಲು ಸಾಧ್ಯ.ಹಾಗೂ ನಾಗರಿಕರಿಗೆ ಪರಿಸರ ಪ್ರೇಮ ಮತ್ತು ಪರಿಸರ ನಾಶದಿಂದಾಗುವ ದುಷ್ಟರಿಣಾಮಗಳ ಬಗೆ ತಿಳಿಸುವ ನೈತಿಕತೆಯ ಚಿಂತನೆಗಳು, ವಿಚಾರ ಸಂಕಿರಣಗಳು, ವಿಚಾರ ಮತ್ತು ಚಿಂತನಾ ಗೋಷ್ಠಿಗಳು ಏರ್ಪಡಿಸುವ ಕಾರ್ಯ ಆಗಬೇಕು. ಆದಾಗಲೇ ಮಕ್ಕಳ ಹಾಗೂ ನಾಗರಿಕರ ಮನಸ್ಸುಗಳ ಮೇಲೆ ಪರಿಸರ ಸಂರಕ್ಷಣೆ ಬಗ್ಗೆ ಖಂಡಿತವಾಗಿಯೂ ಪ್ರಭಾವ ಬೀರುತ್ತದೆ ಎನ್ನುತ್ತಾರೆ.
ಈ ರೀತಿ ಕಡ್ಡಾಯವಾಗಿ ಆದಾಗ ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಅರಣ್ಯ ಸಂಪತ್ತು ಸಂಪೂರ್ಣವಾಗಿ ರಕ್ಷಣೆ ಮಾಡಲು ಸಾಧ್ಯವಾಗಬಹುದು ಎಂಬುದು ಸಂಗಮೇಶ ಜವಾದಿಯವರ ಅಭಿಮತವಾಗಿದೆ.ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಯ ಸಮಸ್ಯೆಗಳನ್ನು ಗುರುತಿಸಿ ಆ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಸಹ ಮಾಡಬೇಕಾಗಿದೆ ಎನ್ನುತ್ತಾರೆ. ಈ ದಿಸೆಯಲ್ಲಿ ಸಂಗಮೇಶ ಜವಾದಿ ರವರು ಸರ್ಕಾರ ಮಾಡದೇ ಇರುವಂತಹ ಅನೇಕ ಕೆಲಸಗಳನ್ನು ಮಾಡಿ, ಪರಿಸರ ಸಂರಕ್ಷಣೆಯಲ್ಲಿ ಮಹತ್ವ ಪೂರ್ಣ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ.
ವಿಶೇಷವಾಗಿ ರೈತರು, ಯುವಕರು, ವಿದ್ಯಾರ್ಥಿಗಳ ಬಳಿಗೆ ತೆರಳಿ, ಅವರಿಗೆಲ್ಲಾ ತಿಳಿ ಹೇಳುವ ಕೆಲಸವನ್ನು ಚಾಚೂ ತಪ್ಪದೆ ಜವಾದಿ ರವರು ಮಾಡಿಕೊಂಡು ಬರುತ್ತಿದ್ದಾರೆ. ಜೊತೆಗೆ ಪರಿಸರ ಸಂರಕ್ಷಣೆ ಕುರಿತು ಘೋಷ ವಾಕ್ಯಗಳನ್ನು ಬರೆದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ.ಆದರೆ ಪರಿಸರ ರಕ್ಷಣೆಯ ಘೋಷಣೆಗಳು ಒಂದು ದಿನದ ಮಟ್ಟಿಗೆ ಮಾತ್ರ ಸೀಮಿತವಾಗಿರದೆ ಅಂದರೆ ಘೋಷಣೆಗಳಾಗಿಯೇ ಉಳಿಯದೆ, ಕಡ್ಡಾಯವಾಗಿ ಆಚರಣೆಗೂ ಬರುವಂತಾಗಬೇಕು ಎಂಬುದು ಇವರ ಆಶಯ ದನಿಯಾಗಿದೆ.
ಮಾನವರ ಹಲವು ಚಟುವಟಿಕೆಗಳಿಂದ ಹೊರಸೂಸುವ ಇಂಗಾಲದ ಡೈಆಕ್ಸೈಡ್ ತಗ್ಗಿಸುವ ನಿಟ್ಟಿನಲ್ಲಿ ಪ್ರಕೃತಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಅದಕ್ಕಾಗಿಯೇ ಇಂಗಾಲದ ಡೈಆಕ್ಸೈಡ್ ಹೆಚ್ಚಾಗಿ ಹೊರಸೂಸುವ ವಾಹನಗಳು ನಿಷೇಧ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಅಂತೆಯೇ ಈ ನಿಟ್ಟಿನಲ್ಲಿ ಹೋರಾಟಗಳು ಸಹ ನಿರಂತರವಾಗಿ ಮಾಡುತ್ತಿದ್ದಾರೆ. ಹಾಗೆ ಪ್ಲಾಸ್ಟಿಕ್ ನಿಷೇಧ ಅಭಿಯಾನ ಆಗಬೇಕು. ಪ್ರಥಮವಾಗಿ ಮನೆಗಳಿಂದಲೇ ಪ್ಲಾಸ್ಟಿಕ್ ನಿಷೇಧ ಆರಂಭಿಸಬೇಕು ಎನ್ನುವುದು ಇವರ ಮನದ ಮಾತಾಗಿದೆ. ಪ್ಲಾಸ್ಟಿಕಗಳಿಂದ ಮಾನವರ ಆರೋಗ್ಯದ ಮೇಲೆ ಆಗುತ್ತಿರುವ ಅನಾಹುತಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ. ಅಂದಾಗಲೇ ಮಾತ್ರ ಜನರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿಕೊಳ್ಳಬಹುದು. ಈ ಮೂಲಕ ಅವರುಗಳೂ ಆರೋಗ್ಯವಂತರಾಗಿ, ಯಾವುದೇ ರೋಗಗಳಿಗೂ ಬಲಿಯಾಗದೆ ಸದೃಢವಾಗಿ
ಜೀವನ ಸಾಗಿಸಬಹುದು ಎಂಬುದು ಇವರ ಕಳಕಳಿಯಾಗಿದೆ.ಹಾಗೆಯೇ ಮನೆ ಆವರಣ ಮತ್ತು ಖಾಲಿ ಇರುವ ಲಭ್ಯ ಸ್ಥಳಗಳಲ್ಲಿ ಸಸಿ ನೆಟ್ಟು ಪರಿಸರ ರಕ್ಷಣಾ ಕಾರ್ಯದಲ್ಲಿ ತೊಡಗಬೇಕು ಎಂದು ಜನ ಜಾಗೃತಿ ಮೂಡಿಸುತ್ತಾ, ಜನಸಾಮಾನ್ಯರಿಗೆ ಎಚ್ಚರಿಸುತ್ತಿದ್ದಾರೆ. ಅದೇ ರೀತಿ ಸಾವಿರಾರು ಸಸ್ಯಗಳು ವಿತರಿಸುವ ಹಾಗೂ ನೆಡುವ ಕಾರ್ಯ ಸದ್ದುಗದ್ದಲವಿಲ್ಲದೆ ಸಂಗಮೇಶ ಜವಾದಿ ರವರು ಮಾಡುತ್ತಿರುವುದು ನಾವೆಲ್ಲರೂ ಕಾಣುತ್ತಿದ್ದೇವೆ. ಅಲ್ಲದೆ ಪ್ರತಿಯೊಬ್ಬ ನಾಗರಿಕರು ಪರಿಸರದ ಅಭಿಮಾನ ಹೊಂದಬೇಕು ಎಂಬುದು ಇವರ ಸದಾಶಯ. ಈ ಬಗ್ಗೆ ಜಾಗೃತಿ ಮೂಡಿಸಲು ಸತತವಾಗಿ ಶ್ರಮಿಸುತ್ತಿದ್ದಾರೆ. ಕೇವಲ ವರ್ಷಕ್ಕೆ ಒಂದು ದಿನ ಮಾತ್ರ ಪರಿಸರ ದಿನಾಚರಣೆಗೆ ಸೀಮಿತವಾಗಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು.ಅಂದಾಗಲೇ ಮಾತ್ರ ಪರಿಸರ ದಿನಾಚರಣೆ ಆಚರಣೆ ಮಾಡಿದ್ದು ಸ್ವಾರ್ಥಕವಾಗಲಿದೆ ಎನ್ನುತ್ತಾರೆ ಜವಾದಿಯವರು. ಯಾಕೆಂದರೆ ಪರಿಸರ ಮನುಷ್ಯರ ಜೀವನದ ಅವಿಭಾಜ್ಯ
ಅಂಗ. ಪರಿಸರವಿಲ್ಲದೇ ಮಾನವರ ಜೀವನ ಊಹಿಸುವುದು ಕಷ್ಟ, ಅಂತೆಯೇ ಪ್ರಕೃತಿಯ ಮಡಿಲಲ್ಲಿ ನಾವೆಲ್ಲರೂ ಆನಂದಮಯವಾಗಿ ಬದುಕಬೇಕೆಂದರೆ ಪರಿಸರ ಸಂರಕ್ಷಣೆಯೇ ಮಾನವರ ಪ್ರಥಮ ಕಾಯಕವಾಗಬೇಕು ಎಂಬುದು ಇವರ ನೇರ ನುಡಿಯಾಗಿದೆ.ಇದರಂತೆ ಇವರ ಕಾರ್ಯ ಚಟುವಟಿಕೆಗಳು ಸದ್ದು ಗದ್ದಲವಿಲ್ಲದೆ ನೆರವೇರುತ್ತಿವೆ.
ಸುಮಾರು ಇಲ್ಲಿಯವರೆಗೆ ಒಂದು ಲಕ್ಷಕ್ಕೂ ಅಧಿಕ ಸಸಿಗಳನ್ನು ರೈತರಿಗೆ, ರೈತ ಮಹಿಳೆಯರಿಗೆ ವಿತರಿಸಿದ್ದಾರೆ. ನಲವತ್ತು ಸಾವಿರಕ್ಕೂ ಅಧಿಕ ಹೆಚ್ಚು ಸಸಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನೆಟ್ಟಿರುತ್ತಾರೆ. ಅನೇಕ ಶಾಲಾ – ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ಗೋಷ್ಠಿಗಳು, ಜಾಗೃತಿ ಅಭಿಮಾನಿಗಳು, ಮಕ್ಕಳು – ವಿದ್ಯಾರ್ಥಿಗಳಿಗಾಗಿ ಪರಿಸರ ಸಂರಕ್ಷಣೆ ಕುರಿತು ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳು ಆಯೋಜಿಸಿ, ನಿರಂತರವಾಗಿ ಬಹುಮಾನ ನೀಡುತ್ತಿದ್ದಾರೆ.
ಇವುಗಳಲ್ಲದೆ ಪ್ರಕೃತಿಯನ್ನು ಸಂರಕ್ಷಿಸುವಲ್ಲಿ ಅರಣ್ಯ ಸಂಪತ್ತು ಸಂರಕ್ಷಣೆ ಮಾಡುವುದು ಬಹಳ ಅವಶ್ಯಕತೆ ಇದೆ. ಮರಗಳನ್ನು ಕಡಿದ ಸ್ಥಳದಲ್ಲಿ ಸಸಿಗಳನ್ನು ನೆಡುವುದು. ಸ್ಥಳೀಯ ಪರಿಸರ ವ್ಯವಸ್ಥೆಗಳಿಗೆ ಸಹಾನುಭೂತಿಯುಳ್ಳ ಸುಸ್ಥಿರ ಕೃಷಿ ಪದ್ಧತಿಗಳತ್ತ ಗಮನ ಹರಿಸುವುದು. ಬೆಳೆ ತಿರುಗುವಿಕೆ, ಕೃಷಿ ಅರಣ್ಯೀಕರಣ ಮತ್ತು ಸಾವಯವ ಕೃಷಿಯಂತಹ ತಂತ್ರಗಳು ಬಳಸಿಕೊಂಡು ಮಣ್ಣಿನ ಸವೆತ, ನೀರಿನ ಬಳಕೆ ಮತ್ತು ರಾಸಾಯನಿಕ ಮಾಲಿನ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುವುದು ಸೇರಿದಂತೆ ಮನುಷ್ಯ ಪ್ರಕೃತಿಯೊಂದಿಗೆ ಸಾಮರಸ್ಯದ ಸಂಬಂಧವನ್ನು ಹೊಂದಬೇಕು ಎನ್ನುತ್ತಾರೆ.ಅದಕ್ಕಾಗಿಯೇ ಮನೆಗೊಂದು ಮರಗಳನ್ನು ಬೆಳೆಸಬೇಕು ಎಂಬುದು ಇವರ ಮನದಾಳದ ಮಾತುಗಳು.
ಇನ್ನು ಪ್ರಕೃತಿಯನ್ನು ಸಂರಕ್ಷಿಸುವ ಮೂಲಕ, ಭವಿಷ್ಯದ ಪೀಳಿಗೆಗೆ ಅಗತ್ಯವಿರುವ ಸಂಪನ್ಮೂಲಗಳು ಲಭ್ಯವಾಗುವಂತೆ ನಾವೆಲ್ಲರೂ ನೋಡಿಕೊಳ್ಳಬೇಕಾಗಿದೆ. ಹಾಗೆಯೇ ಪುನರ್ ಬಳಕೆಯಂತ ವಸ್ತುಗಳನ್ನು ಸುಮ್ಮನೆ ಬಿಸಾಡಬೇಡಿ, ಮರುಬಳಕೆ ಮಾಡಿ. ನಿಮಗೆ ಬೇಡದಿದ್ದರೆ ಇತರರಿಗಾದರೂ ದಾನ ಮಾಡಬೇಕು. ಸಮಾರಂಭಗಳ ಸಂದರ್ಭದಲ್ಲಿ ಸುಲಭದಲ್ಲಿ ಮಣ್ಣಾಗಿ ಹೋಗುವ ಪರಿಸರ ಸ್ನೇಹೀ ಉತ್ಪನ್ನಗಳನ್ನು ಬೆಳೆಸುವುದು ಆಗಬೇಕು ಎಂಬುದು ಇವರ ನುಡಿ.
ಉದಾ: ಪ್ಲಾಸ್ಟಿಕ್ ಚೀಲದ ಬದಲು ಕಾಗದ ಅಥವಾ ಬಟ್ಟೆಯ ಚೀಲ, ಪ್ಲಾಸ್ಟರ್ ಆಫ್ ಪ್ಯಾರಿಸ್ ಬದಲು ಮಣ್ಣಿನ ಗಣೇಶ, ಪ್ಲಾಸ್ಟಿಕ್ ಗೋಣಿಗಳ ಬದಲು ಸೆಣಬಿನ ನಾರಿನ ಗೋಣಿ. ಎಸೆಯುವ ಸಂಸ್ಕೃತಿ’ಯ ಬದಲು ’ರಿಪೇರಿ ಸಂಸ್ಕೃತಿ’ಯನ್ನು ಅಳವಡಿಸಲು ಸಾಧ್ಯವೋ ಎಂಬುದನ್ನು ನೋಡಿ. ನೆಯಲ್ಲಿಯೇ ಜೈವಿಕ, ಹಸಿ ತ್ಯಾಜ್ಯಗಳ ಸಂಸ್ಕರಣೆ ಮಾಡಿ (ಉದಾ: ಅಡುಗೆಮನೆಯ ಆಹಾರ ತ್ಯಾಜ್ಯ, ಉದ್ಯಾನವನದ ಹಸಿರು ತ್ಯಾಜ್ಯ). ಇದರಿಂದ ನೀವು ಮನೆಯಲ್ಲಿಯೇ ಪರ್ಯಾಯ ಇಂಧನ ಅಥವಾ ಗೊಬ್ಬರ ತಯಾರಿಸಬಹುದು, ಬೀದಿಯಲ್ಲಿರುವ ದನಗಳು, ನಾಯಿಗಳು ಪ್ಲಾಸ್ಟಿಕ್ ತಿನ್ನುವುದನ್ನೂ ತಪ್ಪಿಸಬಹುದು. ಇದನ್ನು ಅಪಾರ್ಟ್‍ಮೆಂಟಿನಲ್ಲಿರುವವರೂ ಮಾಡಬಹುದು.ಅಪಾಯಕಾರಿ ತ್ಯಾಜ್ಯಗಳನ್ನು ಮಕ್ಕಳ ಕೈಗೆ ಸಿಗದಂತೆ ಸಂಗ್ರಹಿಸಿ ಜಾಗ್ರತೆಯಾಗಿ ವಿಲೇವಾರಿ ಮಾಡಬೇಕು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಹೆಚ್ಚಾಗಿ ಬಳಸಲು ಪ್ರಯತ್ನ ಮಾಡಿ. ಇದರಿಂದ ಪರಿಸರವೂ ಉಳಿಯುತ್ತದೆ, ದೇಶದ ಪೆಟ್ರೋಲಿಯಂ ಆಮದಿನ ಹೊರೆಯೂ ಕಮ್ಮಿಯಾಗುತ್ತದೆ. ಪ್ರತಿಯೊಬ್ಬರ ಮನೆಯೊಳಗೆ ಉತ್ತಮ ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಿ, ಹಗಲು ಹೊತ್ತನ್ನು ಚೆನ್ನಾಗಿ ಉಪಯೋಗಿಸಿ. ಆಗ ಫ್ಯಾನ್, ವಾತಾನುಕೂಲಿ, ವಿದ್ಯುತ್ ದೀಪಗಳು, ಇವೆಲ್ಲದರಲ್ಲಿ ವಿದ್ಯುತ್ ಶಕ್ತಿಯನ್ನು ಉಳಿಸಬಹುದು. ನವೀಕರಿಸಲು ಸಾಧ್ಯವಿರುವ ಮೂಲಗಳನ್ನು ಉಪಯೋಗಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ ಜವಾದಿಯವರು.
ಸಾವಯವ ಕೃಷಿಗೆ ಉತ್ತೇಜನ ನೀಡಬೇಕು
ಸಾಧ್ಯವಾದಾಗಲೆಲ್ಲಾ ರಾಸಾಯನಿಕ ಮುಕ್ತ, ಸಾವಯವ ಹಾಗೂ ಸಸ್ಯಮೂಲದ ಆಹಾರ ಪದಾರ್ಥಗಳನ್ನೇ ಖರೀದಿಸಿರಿ. ಇದರಿಂದ ಪರಿಸರಕ್ಕೂ ನಿರಾಳ, ಮಾನವರ ಆರೋಗ್ಯಕ್ಕೂ ವರದಾನವಾಗಲಿದೆ ಎನ್ನುತ್ತಾರೆ.
ಇನ್ನು ಹುಟ್ಟುಹಬ್ಬ, ಮದುವೆ ಸಮಾರಂಭ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಗಿಡ ನೆಡುವ ಕಾರ್ಯ ಆಗಬೇಕು. ಅದನ್ನು ನೀರೆರೆದು ಪೋಷಿಸಲು ಮರೆಯಬಾರದು ಎನ್ನುತ್ತಾರೆ.ಈ ನಿಟ್ಟಿನಲ್ಲಿ ಸಸ್ಯಜನ್ಯ ಆಹಾರಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಜನಸಂಖ್ಯೆಯನ್ನು ನಿಯಂತ್ರಣ ಆಗಬೇಕು. ಸಾವಯವ ವಸ್ತುಗಳನ್ನು ಖರೀದಿಸಬೇಕು.
ಮರಗಳನ್ನು ಕಡಿಯುವುದರ ಬದಲು ಸ್ಥಳಾಂತರಿಸುವುದು ಆಗಬೇಕು.ಪರಿಸರಕ್ಕೆ ಹಾನಿ ಉಂಟು ಮಾಡುವಂತಹ ಪಟಾಕಿಗಳು ನಿಷೇಧ ಮಾಡಬೇಕು. ಪರಿಸರಕ್ಕೆ ಹಾನಿ ಉಂಟು ಮಾಡುವಂತಹ ಸೌಂಡ್ ಸಿಸ್ಟಮ್ ಗಳು ನಿಷೇಧ ಆಗಬೇಕು.ಮಾನವರ ಆರೋಗ್ಯಕರ ಜೀವನಕ್ಕೆ ಪರಿಸರ ಸ್ನೇಹಿ ಉತ್ಪನ್ನಗಳನ್ನು ಬೆಳೆಸಬೇಕು ಎನ್ನುತ್ತಾರೆ. ಹೀಗೆ ಜವಾದಿ ಯವರು ತಮ್ಮನ್ನು ತಾವು ಪರಿಸರ ಸಂರಕ್ಷಣೆಗಾಗಿ ಸಮರ್ಪಿಸಿಕೊಂಡಿದ್ದಾರೆ. ಪರಿಸರ ರಕ್ಷಣೆಯೇ ಇವರ ಮೂಲ ಮಂತ್ರವಾಗಿದೆ.ಮೂಲ ಧ್ಯೇಯವಾಗಿದೆ.
ಜವಾದಿ ರವರ ಆಶಯ ಮಾತು : – ಪ್ರಕೃತಿ ಮನುಷ್ಯನ ಜೀವನಕ್ಕೆ ಏನ್ನೆಲ್ಲ ಕೊಟ್ಟಿಲ್ಲ. ಅಂತಹದರಲ್ಲಿ ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಇಂತ ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಸರ್ವನಾಶ ನಮ್ಮ ಕಣ್ಣೇದುರೆ ನಡೆಯಲಿದೆ. ಇದು ನಡೆಯಬಾರದೆಂದರೆ ಇಂದಿನಿಂದಲೆ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಪರಿಸರದ ಸಂರಕ್ಷಣೆಗಾಗಿ ನಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತುವ ಅವಶ್ಯಕತೆ ಇಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ ಎನ್ನುತ್ತಾರೆ ಸಂಗಮೇಶ ಜವಾದಿ ರವರು.
ಸರಕಾರ ಗುರುತಿಸಬೇಕು: – ಪರಿಸರ ಸಂರಕ್ಷಣೆಗಾಗಿ ಇಡೀ ಬದುಕು ಮುಡಿಪಾಗಿಟ್ಟಿರುವ ಶ್ರೀಯುತ ಸಂಗಮೇಶ ಎನ್ ಜವಾದಿ ರವರ ಸೇವಾ ಕಾರ್ಯಗಳು ಗುರುತಿಸಿ ಗೌರವಿಸುವ ಕಾರ್ಯವು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಲೇಬೇಕು. ಅಂದಾಗಲೇ ಪರಿಸರ ಸಂರಕ್ಷಣೆಗಾಗಿ ದುಡಿಯುತ್ತಿರುವ ನಿಸ್ವಾರ್ಥ ಸೇವಕರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ.
ಬರಹ – ಬಸವರಾಜ ಮಂಕಲ್. ಸಾಮಾಜಿಕ ಕಾರ್ಯಕರ್ತರು,ಬೀದರ ಜಿಲ್ಲೆ.