ಆಧ್ಯಾತ್ಮಿಕ ಕ್ಷೇತ್ರದಲ್ಲಿ ಜಗದ್ಗುರು ಗಂಗಾಧರ ಮಹಾಸ್ವಾಮಿಗಳವರ ಕಾರ್ಯ ಅನನ್ಯ-ರಂಭಾಪುರಿ ಜಗದ್ಗುರುಗಳು.
ಆಧ್ಯಾತ್ಮಿಕ ಕ್ಷೇತ್ರದಲ್ಲಿ ಜಗದ್ಗುರು ಗಂಗಾಧರ ಮಹಾಸ್ವಾಮಿಗಳವರ ಕಾರ್ಯ ಅನನ್ಯ-ರಂಭಾಪುರಿ ಜಗದ್ಗುರುಗಳು
ಅಬ್ಬಿಗೇರಿಯಲ್ಲಿ ಶರನ್ನವರಾತ್ರಿ ೩ನೇ ದಿನದ ಇಷ್ಟಲಿಂಗ ಮಹಾಪೂಜೆ; ಜಗದ್ಗುರುಗಳ ಆಶೀರ್ವಚನ
ನರೇಗಲ್ಲ:ಸತ್ಯಮಿಥ್ಯ (ಅ.೦೫).
ಆಧ್ಯಾತ್ಮಿಕ ಕ್ಷೇತ್ರವನ್ನು ತಿಳಿದುಕೊಳ್ಳುವುದು, ಅದರಲ್ಲಿನ ಆಚರಣೆಗಳನ್ನು ಪಾಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇಷ್ಟಲಿಂಗ ಮಹಾಪೂಜೆ ನಮಗೆ ಇನ್ನಿಲ್ಲದ ಆನಂದವನ್ನು ನೀಡುತ್ತದೆ. ಅಂತರಂಗದಲ್ಲಿ ಮಾಡುವ ಈ ಪೂಜೆಯನ್ನು ಲೋಕಾಂತರಗೊಳಿಸಿದವರು ರಂಭಾಪುರಿ ಪೀಠದ ಹಿಂದಿನ ಜಗದ್ಗುರುಗಳಾದ ಶ್ರೀ ಗಂಗಾಧರ ಮಹಾಸ್ವಾಮಿಗಳವರು. ಅವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಾಡಿದ ಕಾರ್ಯ ಅನನ್ಯವಾದುದು ಎಂದು ಶ್ರೀಮದ್ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಶರನ್ನವರಾತ್ರಿ ೩ನೇ ದಿನದ ಇಷ್ಟಲಿಂಗ ಮಹಾಪೂಜೆಯನ್ನು ಅಬ್ಬಿಗೇರಿಯ ಹೊಸ ಹಿರೇಮಠದಲ್ಲಿ ನೆರವೇರಿಸಿದ ಬಳಿಕ ನೆರೆದ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು. ಇಷ್ಟಲಿಂಗ ಪೂಜೆಯಲ್ಲಿ ಜಗನ್ನಿಯಾಮಕನಾದ ಶಿವನನ್ನು ನಾವು ಪೂಜಿಸುತ್ತೇವೆ. ಲಿಂಗ ರೂಪದಲ್ಲಿರುವ ಶಿವನ ಪೂಜೆ ಮನಸ್ಸಿಗೆ ಬಹಳಷ್ಟು ಆನಂದವನ್ನು ನೀಡುತ್ತದೆ. ಒಂದು ಸಂದರ್ಭದಲ್ಲಿ ಬ್ರಹ್ಮ ಶಿವನ ಮುಕುಟವನ್ನೂ, ವಿಷ್ಣು ಶಿವನ ಪಾದವನ್ನೂ ಕಾಣಲು ಹೋಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಅದರಲ್ಲಿ ವಿಷ್ಣು ಅಲ್ಪ ಪ್ರಮಾಣದ ಯಶ ಕಂಡರೂ ಬ್ರಹ್ಮ ಸುಳ್ಳು ಹೇಳಿದ್ದರಿಂದ ಅವನಿಗೆ ಶಿವ ಶಾಪ ಕೊಟ್ಟನು. ಶಿವನ ಶಾಪದಿಂದಲೆ ನಾವುಗಳು ಎಲ್ಲಿಯೂ ಬ್ರಹ್ಮ ದೇವರ ದೇವಸ್ಥಾನಗಳನ್ನು ಕಾಣುವುದಿಲ್ಲ ಎಂದು ಜಗದ್ಗುರುಗಳು ಹೇಳಿದರು.
ವೀರಶೈವ ಧರ್ಮ ಅಂತಿಂತಹ ಧರ್ಮವಲ್ಲ. ಹಸಿದು, ನೀರಡಿಸಿ ಬಂದವರನ್ನು ಸಮಾಧಾನಗೊಳಿಸುವುದೇ ವೀರಶೈವ ಧರ್ಮದ ಮೂಲ ತತ್ವವಾಗಿದೆ. ಹಿಂದೂ ಧರ್ಮದಲ್ಲಿ ಗೋಮಾತೆಗೆ ವಿಶಿಷ್ಠ ಸ್ಥಾನವಿದೆ. ಅದನ್ನು ಪುಣ್ಯದ ಪ್ರಾಣ ಎಂದು ಭಾವಿಸುವ ನಾವು ಗೋಮಾತೆಯ ಪೂಜೆಯನ್ನು ಮಾಡುತ್ತೇವೆ. ಗೋಮಾತೆಯಿಂದ ನಿಶ್ಚಿತ ಲಾಭವನ್ನು ಪಡೆಯಬೇಕೆಂದರೆ ಅದರ ಪೃಷ್ಠ ಭಾಗವನ್ನು ಅಂದರೆ ಹಿಂಬದಿಯನ್ನು ಶ್ರದ್ಧೆಯಿಂದ ಪೂಜಿಸಿದರೆ ಖಂಡಿತ ನಿಮ್ಮ ಮನದ ಆಸೆಗಳು ಈಡೇರುತ್ತವೆ ಎಂದು ಶ್ರೀಗಳು ಹೇಳಿದರು.
ಈ ಭಾಗದಲ್ಲಿ ಶ್ರೀ ಅನ್ನದಾನೇಶ್ವರ ಮಠ ಅತ್ಯಂತ ಪ್ರಭಾವಶಾಲಿ ಮಠವಾಗಿದೆ. ಈ ಹಿಂದಿನ ಡಾ.ಅಭಿನವ ಅನ್ನದಾನ ಮಹಾಸ್ವಾಮಿಗಳವರು ಲಿಂಗ ಪೂಜಾ ನಿಷ್ಠರಾಗಿದ್ದರು. ಅವರಿಂದ ಶಿವಯೋಗ ಮಂದಿರವು ಅತ್ಯಂತ ಸೊಂಪಾಗಿ ಬೆಳೆಯಿತು. ಹಾಲಕೆರೆ ಮಠದ ಕೀರ್ತಿಯೂ ಸಹ ದಶದಿಕ್ಕುಗಳಲ್ಲಿ ಪಸರಿಸಿತು. ಲಿಂ. ಡಾ. ಅಭಿನವ ಅನ್ನದಾನ ಶ್ರೀಗಳವರ ಕ್ರಿಯಾಶೀಲತೆಗೆ ಯಾರೂ ಸಾಟಿಯಾಗಲಿಕ್ಕಿಲ್ಲ. ಹಾಲಕೆರೆಯಲ್ಲಿಯೂ ಒಂದು ಹಿರೇಮಠವಿದೆ. ಅದರ ಬೆಳವಣಿಗೆಯ ಕಡೆಗೂ ಭಕ್ತರು ಕಾಳಜಿ ವಹಿಸಬೇಕೆಂದು ಜಗದ್ಗುರುಗಳು ತಿಳಿಸಿದರು.
ಇಂದಿನ ಲಿಂಗಪೂಜಾ ಕಾರ್ಯದಲ್ಲಿ ಶಾಸಕ ಜಿ.ಎಸ್. ಪಾಟೀಲ, ಶಿರಹಟ್ಟಿ ಕ್ಷೇತ್ರದ ಶಾಸಕರ ಶ್ರೀಮತಿಯವರು, ಸುತ್ತಲಿನ ಗ್ರಾಮಗಳ ಅನೇಕ ಗಣ್ಯ ಮಾನ್ಯರು, ವಿ.ಬಿ. ಸೋಮನಕಟ್ಟಿಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಇಂದು ಶನಿವಾರ ನಿಡಗುಂದಿ, ಮಾರನಬಸರಿ, ಹಾಳಕೇರಿ ಹಾಗೂ ಅಬ್ಬಿಗೇರಿ ಗ್ರಾಮದ ಮಹಿಳೆಯರು ಕುಂಭವನ್ನು ತೆಗೆದುಕೊಂಡು ಬಂದಿದ್ದರು.
ಇಷ್ಟಲಿಂಗ ಮಹಾಪೂಜೆಯಲ್ಲಿ ನಾಡಿನ ಅನೇಕ ಶ್ರೀಗಳವರು ಪಾಲ್ಗೊಂಡಿದ್ದರು.
ವರದಿ : ಸಂಗಮೇಶ ಮೆಣಸಗಿ