
ಸುಳ್ಳು ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ:ಆರೋಪಿ ಜೊತೆಗೆ ಸರ್ಕಾರಕ್ಕೂ ದಂಡ ವಿಧಿಸಿದ ಹೈಕೋರ್ಟ್.
ಬೆಂಗಳೂರು : ಸತ್ಯಮಿಥ್ಯ (ಫೆ -17)
ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳಿಂದ ಜಮೀನು ಖರೀದಿಸಿರುವುದಾಗಿ ಸುಳ್ಳು ಕ್ರಯಪತ್ರ ಸೃಷ್ಟಿಸಿ, ಅದರ ಮೂಲಕ ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ವ್ಯಕ್ತಿಯೊಬ್ಬರಿಗೆ ಹೈಕೋರ್ಟ್ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಲ್ಲದೆ, ಈ ಪ್ರಕರಣದಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಸರ್ಕಾರಕ್ಕೂ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಎರಡು ಎಕರೆ ಜಮೀನಿಗೆ ಸಂಬಂಧಿಸಿದ ವ್ಯಾಜ್ಯದಲ್ಲಿ ನ್ಯಾಯಮೂರ್ತಿ ಎನ್.ಎಸ್. ಸಂಜಯಗೌಡ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಕ್ರಮವಾಗಿ ಜಮೀನು ಪಡೆದುಕೊಂಡಿದ್ದ ಸುರೇಶ್ ಎಂಬುವವರಿಗೆ, ಕೂಡಲೇ ಜಮೀನು ತೆರವು ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:ಬೆಂಗಳೂರು ಉತ್ತರ ತಾಲ್ಲೂಕು ಜಾಲ ಹೋಬಳಿಯ ಬೆಟ್ಟಹಲಸೂರು ಗ್ರಾಮದಲ್ಲಿನ ಸರ್ವೇ ನಂಬರ್ 376ರಲ್ಲಿ ಎರಡು ಎಕರೆ ಜಮೀನು ಎ.ಜೆ. ಜೇಮ್ಸ್ ಮತ್ತು ಅವರ ಪತ್ನಿ ಆನ್ಸಿ ಜೇಮ್ಸ್ ಹಾಗೂ ಬಿ.ಎಂ. ಗೋವಿಂದರಾಜು ಮತ್ತು ಬಿ.ಜಿ. ಮುನಿಯಪ್ಪ ಅವರ ಹೆಸರಿನಲ್ಲಿತ್ತು. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಎಚ್.ಆರ್.ಸುರೇಶ್, ಈ ಜಮೀನನ್ನು ಪರಿಶಿಷ್ಟ ಜಾತಿಗೆ ಸೇರಿದ ಬೈಲಮ್ಮ ಮತ್ತು ಗೌರಮ್ಮ ಎಂಬುವವರಿಂದ ಖರೀದಿಸಿರುವುದಾಗಿ ಸುಳ್ಳು ಕ್ರಯಪತ್ರ ಸೃಷ್ಟಿಸಿದ್ದರು. ಈ ಕ್ರಯಪತ್ರದ ಆಧಾರದ ಮೇಲೆ ಅವರು ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದರು.
ಸುರೇಶ್ ಅವರು, ಜಮೀನಿನ ಮೂಲ ಮಾಲೀಕರಾದ ಎ.ಜೆ. ಜೇಮ್ಸ್ ಅವರು ನಿರ್ಮಿಸಿದ್ದ ಫಾರ್ಮ್‌ಹೌಸ್ ಅನ್ನು ಒಡೆದುಹಾಕಿದ್ದರು. ಈ ಬಗ್ಗೆ ಜೇಮ್ಸ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ.
ನ್ಯಾಯಾಲಯದ ತೀರ್ಪು:ವಿಚಾರಣೆ ನಡೆಸಿದ ಹೈಕೋರ್ಟ್, ಸುರೇಶ್ ಅವರ ಸುಳ್ಳು ದಾಖಲೆಗಳನ್ನು ತಿರಸ್ಕರಿಸಿದೆ ಮತ್ತು ಜಮೀನು ಮೂಲ ಮಾಲೀಕರಿಗೆ ಸೇರಿದ್ದು ಎಂದು ತೀರ್ಪು ನೀಡಿದೆ. ಅಲ್ಲದೆ, ಸುರೇಶ್ ಅವರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ ಮತ್ತು ಸರ್ಕಾರವು ತನ್ನ ಕರ್ತವ್ಯದಲ್ಲಿ ವಿಫಲವಾಗಿದೆ ಎಂದು ಹೇಳಿ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಈ ಆದೇಶವನ್ನು ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಮತ್ತು ಮುಂದಿನ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಲಾಗಿದೆ.
ವರದಿ : ಚನ್ನು. ಎಸ್.