
ವಾಲ್ಮೀಕಿ ಹಗರಣ ಸಿಬಿಐಗೆ – ಹೈಕೋರ್ಟ್ ತೀರ್ಪು :ಆತಂಕದಲ್ಲಿ ರಾಜ್ಯ ಸರ್ಕಾರ.
ಬೆಂಗಳೂರು: ಸತ್ಯಮಿಥ್ಯ ( ಜು-01).
ಕರ್ನಾಟಕ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವಂತ 187 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ಕರ್ನಾಟಕ ಹೈಕೋರ್ಟ್ ಎಸ್‌ಐಟಿ ತನಿಖೆ ರದ್ದುಗೊಳಿಸಿ, ಸಿಬಿಐ ತನಿಖೆಗೆ ಮಹತ್ವದ ಆದೇಶ ಹೊರಡಿಸಿದೆ.
ಇಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ಕೋರಿದ್ದಂತ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದಂತ ನ್ಯಾಯಪೀಠವು ವಿಚಾರಣೆ ನಡೆಸಿತು.
ಎಸ್‌ಐಟಿ ತನಿಖೆ ರದ್ದುಗೊಳಿಸಿ, ಸಿಬಿಐ ತನಿಖೆಗೆ ವಹಿಸಬೇಕೆಂದು ರಾಜ್ಯ ಬಿಜೆಪಿ ನಾಯಕರು ಸಲ್ಲಿಸಿದ್ದಂತ ಅರ್ಜಿಯನ್ನು ಮಾನ್ಯ ಮಾಡಿತು.
ಅಂತಿಮವಾಗಿ ವಾಲ್ಮೀಕಿ ನಿಗಮದ ಹಗರಣ ಸಂಬಂಧ 187 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಕೋರಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿತು. ಹೀಗಾಗಿ ವಾಲ್ಮೀಕಿ ನಿಗಮದ ಹಗರಣವನ್ನು ಇನ್ಮುಂದೆ ಸಿಬಿಐ ತನಿಖೆ ನಡೆಸಲಿದೆ.
ಅಂದಹಾಗೇ ಸಿಬಿಐ ತನಿಖೆಗೆ ಕೋರಿ ರಾಜ್ಯ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ ಸೇರಿದಂತೆ ಇತರೆ ನಾಯಕರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಸಿಎಂ ಬದಲಾವಣೆ ಚರ್ಚೆ ಕಾವೇರುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯನವರಿಗೆ ಹೈಕೋರ್ಟ್ ತೀರ್ಪು ಬಹಳಷ್ಟು ಆತಂಕವನ್ನುಂಟು ಮಾಡಿದೆ ಎಂದು ರಾಜಕೀಯ ಚಿಂತಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವರದಿ : ಚನ್ನು. ಎಸ್.