ಭಾರಿ ಮಳೆ ಹಿನ್ನೆಲೆ: ನಗರಸಭೆಯಿಂದ ವಿವಿಧೆಡೆ ಸ್ವಚ್ಛತಾ ಕಾರ್ಯ, ಅಗತ್ಯ ಮುಂಜಾಗ್ರತಾ ಕ್ರಮ.
ಪೌರಾಯುಕ್ತರಾದ ಗಣೇಶ ಪಾಟೀಲ ಅವರ ಮಾರ್ಗದರ್ಶನದಲ್ಲಿ ನಗರಸಭೆ ಅಧಿಕಾರಿಗಳು ಭೇಟಿ

ಕೊಪ್ಪಳ- ಜೂನ್ 16 (ಸತ್ಯ ಮಿಥ್ಯ )
ಕಳೆದ ಕೆಲವು ದಿನಗಳಿಂದ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಗರದ ವಿವಿಧೆಡೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆ ಉಂಟಾದ ಸ್ಥಳಗಳಿಗೆ ಪೌರಾಯುಕ್ತರಾದ ಗಣೇಶ ಪಾಟೀಲ ಅವರ ಮಾರ್ಗದರ್ಶನದಲ್ಲಿ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನಾ ಕಾರ್ಯ ಮುಂದುವರೆಸಿದ್ದಾರೆ.
ರೈಲ್ವೇ ಸ್ಟೇಶನ್ ಹತ್ತಿರ ರೈಲ್ವೇ ನಿಲ್ದಾಣದ ಕಾಮಗಾರಿಯಿಂದ ಚರಂಡಿ ಮುಚ್ಚಿರುವುದರಿಂದ ಮಳೆ ನೀರು ನಿಂತು ಸಾರ್ವಜನಿಕರಿಗೆ ತೊಂದರೆ ಉಂಟಾದಾಗ ಅಲ್ಲಿಗೆ ನಗರಸಭೆ ಅಧಿಕಾರಿಗಳು ತೆರಳಿ ಸರಿಪಡಿಸಿದರು. ಗುಡ್ಡದಿಂದ ರಬಸವಾಗಿ ಹರಿದು ಬಂದ ಮಳೆ ನೀರು ಕುವೆಂಪು ನಗರದ ಕೆಲವು ಮನೆಗಳಲ್ಲಿ ನೀರು ನಿಂತಿರುವ ಸ್ಥಳಕ್ಕೆ ಸಹ ತುರ್ತಾಗಿ ನಗರಸಭೆ ಅಧಿಕಾರಿಗಳು ತೆರಳಿ ರಾತ್ರಿ ವೇಳೆಯಲ್ಲಿ ಕಾರ್ಯನಿರ್ವಹಿಸಿ ಎಲ್ಲಾ ಮನೆಗಳ ನೀರನ್ನು ಹೊರಹಾಕಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಿದರು.
ಕಲ್ಯಾಣನಗರ, ಗಣೇಶನಗರಗಳಿಗೆ ಸಹ ನಗರಸಭೆ ಸಿಬ್ಬಂದಿಯು ಜಿಸಿಬಿ ಮತ್ತು ಸಕ್ಕಿಂಗ್ ಮಷಿನಗಳೊಂದಿಗೆ ತೆರಳಿ ಕಾರ್ಯಪ್ರವೃತ್ತರಾಗಿ ನೀರನ್ನು ಪರ್ಯಾಯವಾಗಿ ಬೇರೆ ಕಡೆಗೆ ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿದರು. ಮಳೆ ನೀರು ಮನೆಗಳಿಗೆ ಹೊಕ್ಕು ಸಮಸ್ಯೆ ಉಂಟಾದ ಕಡೆಗೆ ಸಹ ನಗರಸಭೆ ಅಧಿಕಾರಿಗಳು ತೆರಳಿ ಕಾರ್ಯಪ್ರವೃತ್ತರಾಗಿ ನೀರನ್ನು ಮನೆಯಿಂದ ಹೊರ ಹಾಕಿದರು.
ಸಾಕಷ್ಟು ಮುಂಜಾಗ್ರತೆ : ಮಳೆಯಿಂದ ಸಾರ್ವಜನಿಕರಿಗೆ ಅನಾನೂಕೂಲವಾಗದಂತೆ ಕೊಪ್ಪಳ ನಗರಸಭೆಯಿಂದ ಮುಂಜಾಗೃತಾ ಕ್ರಮ ವಹಿಸಲಾಗಿದೆ. ಹಾನಿಗೊಳಗಾದ ಪ್ರದೇಶ, ವಾರ್ಡಗಳಿಗೆ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರನ್ನು ಹೊರತೆಗೆಯುವ ಕಾರ್ಯಕ್ಕಾಗಿ ಸಕ್ಕಿಂಗ್ ಮಷಿನಗಳನ್ನು ಬಳಸಲಾಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಅಗತ್ಯ ಕ್ರಮವಹಿಸಲು ನಗರಸಭೆಯ ಪೌರಕಾರ್ಮಿಕರಿಂದ ಹಾಗೂ ಜೆಸಿಬಿಗಳಿಂದ ಚರಂಡಿಗಳ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶ, ವಾರ್ಡ್ಗಳಿಗೆ ಸಂಸದರು ಹಾಗೂ ಶಾಸಕರು ಮತ್ತು ನಗರಸಭೆ ಸದಸ್ಯರೊಂದಿಗೆ ಅಧಿಕಾರಗಳ ತಂಡವು ಭೇಟಿ ನೀಡಿ ಆಗಿರುವ ತೊಂದರೆ,ಹಾನಿ ಕುರಿತು ಪರಿಶೀಲನೆ ಮಾಡಿದೆ ಹಾಗೂ ಅಗತ್ಯ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೌರಾಯುಕ್ತರಾದ ಗಣೇಶ ಪಾಟೀಲ ಅವರು ತಿಳಿಸಿದ್ದಾರೆ.
ಸಿಬ್ಬಂದಿ ನಿಯೋಜನೆ : ಯಾವುದೇ ರೀತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂದೆಯು ಕೂಡ ಕಟ್ಟುನಿಟ್ಟಾಗಿ ಕ್ರಮವಹಿಸಲು ನಿಂತಿರುವ ನೀರನ್ನು ಪರ್ಯಾಯ ವ್ಯವಸ್ಥೆ ಮೂಲಕ ಹರಿಸಲು ಕ್ರಮವಹಿಸಿದ್ದು, ಮಳೆಯಿಂದಾಗಿ ಮನೆಗಳು ಬಿದ್ದಲ್ಲಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಂದ ಪರಿಶೀಲಿಸಿ ವರದಿ ಪಡೆದುಕೊಳ್ಳಲು ಹಾನಿಗೊಳಗಾದ ಪ್ರದೇಶಗಳಿಗೆ ಹಾಗೂ ವಾರ್ಡಗಳಿಗೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ವರದಿ : ಹಿರೇಮಠ್.