ತಾಲೂಕು

ಹಿರಿಯ ಶ್ರೀಗಳು ಜೋಳಿಗೆ ಹಾಕಿ ಅನ್ನದಾನೇಶ್ವರ ಸಂಸ್ಥೆ ಕಟ್ಟಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ – ಮುಪ್ಪಿನ ಬಸವಲಿಂಗ ಶ್ರೀ.

Share News

ಹಿರಿಯ ಶ್ರೀಗಳು ಜೋಳಿಗೆ ಹಾಕಿ ಅನ್ನದಾನೇಶ್ವರ ಸಂಸ್ಥೆ ಕಟ್ಟಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ – ಮುಪ್ಪಿನ ಬಸವಲಿಂಗ ಶ್ರೀ.

ಗದಗ ಜಿಲ್ಲೆಯ ಹಿರಿಮೆ ಕಾಪಾಡಿದ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆ : ಡಿಡಿಪಿಯು

ಗಜೇಂದ್ರಗಡ:‌ಸತ್ಯಮಿಥ್ಯ ( ಜುಲೈ -15)

ನಮ್ಮ ಮಠದ ಹಿರಿಯ ಗುರುಗಳು ಹಣ ಗಳಿಸುವ ಸಂಸ್ಥೆಗಳನ್ನು ಸ್ಥಾಪಿಸದೇ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದಾರೆ. ಜೋಳಿಗೆ ಹಾಕಿ ಗ್ರಾಮೀಣ ಭಾಗದ ಬಡ ಪ್ರತಿಭಾ ಸಂಪನ್ನ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಿದ್ದಾರೆ. ಮಠಕ್ಕೆ ದಾನ ಧರ್ಮಹರಿದು ಬರುವ ದಿನಗಳಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗಿದೆ. ಈಗ ಕಾಲಕ್ಕೆ ತಕ್ಕಂತೆ ಕಡಿಮೆ ಫೀನಲ್ಲಿ ಉತ್ತಮ ಶಿಕ್ಷಣ ನೀಡಿ, ಶಿಕ್ಷಕರಿಗೆ ಗೌರವ ವೇತನ ನೀಡಲಾಗುತ್ತದೆ ಎಂದು ನರೇಗಲ್‌ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷರಾದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್‌ ಬಳಿ ಇರುವ ಶ್ರೀ ಅನ್ನದಾನೇಶ್ವರ ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಪ್ರಸಕ್ತ ಸಾಲಿನ ವಿವಿಧ ಸಾಂಘಿಕ ಚಟುವಟಿಕೆಗಳ ಉದ್ಘಾಟನ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪಿಯು ಶಿಕ್ಷಣ ಹಂತಕ್ಕೆ ಬಂದಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಕನಸುಗಳನ್ನು ಕಾಣುವಲ್ಲಿ ಮಗ್ನರಾಗುತ್ತಾರೆ. ಆದರೆ ಜೀವನವನ್ನು ಹಾಳು ಮಾಡಿಕೊಳ್ಳುವ ಕನಸು ಕಾಣದೆ ಸಾಧನೆ ಮಾಡುವಂತ ಆದರ್ಶದ ಕನಸು ಕಾಣಬೇಕು.ಉತ್ತಮ ಜ್ಞಾನ ಹೊಂದಿದವರು ಎಂದಿಗೂ ಸೋಲುವದಿಲ್ಲ. ಅಕ್ಷರ ಜ್ಞಾನ ಸಂಪಾದನೆ ಮೂಲಕ ವಿಭಿನ್ನವಾಗಿ ನಾಲ್ಕು ಜನಕ್ಕೆ ಆದರ್ಶವಾಗಿ ಬದುಕಲು ಕಲಿಯಿರಿ ಎಂದರು .

ನಿರಂತರ ಅಧ್ಯಯನ, ಚಂಚಲತೆ ಮುಕ್ತ ವಿದ್ಯಾಭ್ಯಾಸ, ಸತತ ಪ್ರಯತ್ನದಿಂದ ಜೀವನದ ಶ್ರೇಷ್ಠ ಸಾಧನೆಯತ್ತ ನಿಮ್ಮ ಚಿತ್ ವಿರಲಿ.ಬದುಕು ಸಾಧನೆಯಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗದಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ (ಪಿಯು) ಉಪನಿರ್ದೇಶಕ ಜಿ. ಎನ್.‌ ಕುರ್ತಕೋಟಿ, ಅನ್ನದಾನೇಶ್ವರ ಶಿಕ್ಷಣ ಸಂಸ್ಥೆ ಎನ್ನುವುದು ಕೇವಲ ಕಾಲೇಜಾಗಿರದೆ ಅದೊಂದು ಜಾಗೃತಿ ಸ್ಥಳವಾಗಿ ಪ್ರಸಿದ್ದಿ ಪಡೆದಿದೆ. ದ್ವಿತೀಯ ಪಿಯು ಫಲಿತಾಂಶದಲ್ಲಿ ಗದಗ ಜಿಲ್ಲೆ ಕೊನೆಯ ಸ್ಥಾನಕ್ಕೆ ಕುಸಿದಾಗ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ನರೇಗಲ್‌-ಗಜೇಂದ್ರಗಡ ಕಾಲೇಜಿನವರು ಉತ್ತಮ ಫಲಿತಾಂಶ ನೀಡುವ ಮೂಲಕ ಜಿಲ್ಲೆಯ ಹಿರಿಮೆಯನ್ನು ಕಾಪಾಡಿದರು ಎಂದರು. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಶಿಕ್ಷಣ ಸಂಸ್ಥೆ, ಊರು, ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿಯು ಚೇರಮನ್ನ ವಿ. ವಿ. ವಸ್ತ್ರದ, ಫಲಿತಾಂಶ ಸುಧಾರಣೆಗಾಗಿ ಆರಂಭದಿಂದಲೇ ವಿವಿಧ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು, ಕಠಿಣ ವಿಷಯಗಳನ್ನು ಸರಳೀಕರಣಗೊಳಿಸಲು ವಿಶೇಷ ವರ್ಗ ಮತ್ತು ತರಬೇತಿ ಶಿಬಿರ, ಕಾರ್ಯಾಗಾರಗಳನ್ನು ಆಯೋಜಿಸಲಾಗಿತ್ತು. ಹಾಗಾಗಿ ಉಪನ್ಯಾಸಕರ ಪರಿಶ್ರಮಕ್ಕೆ ತಕ್ಕಂತೆ ಉತ್ತಮ ಫಲಿತಾಂಶ ಸಿಕ್ಕಿದೆ. ಆದರೂ, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಫಲಿತಾಂಶ ತರಲು ಶ್ರಮ ಮೀರಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ವಸಂತರಾವ್‌ ಗಾರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮೆಲ್ಮನಿ ಉಪನ್ಯಾಸ ನೀಡಿದರು. ಇದೇ ವೇಳೆ ಕಾಲೇಜಿನಲ್ಲಿ ಅಳವಡಿಸಲಾದ ʼಅಗ್ನಿ ನಂದಿಸುವ ಉಪಕರಣದʼ ಉದ್ಘಾಟನೆ ನೆರವೇರಿತು. ರೋಣ ತಾಲ್ಲೂಕು ಅಗ್ನಿಶಾಮಕ ದಳದ ಸಿಬ್ಬಂದಿಯವರಿಂದ ಅಗ್ನಿಸ್ಪರ್ಶದ ಪೂರ್ವ ಹಾಗೂ ನಂತರದ ಸೂಕ್ತ ಕ್ರಮಗಳ ಕುರಿತು ಪ್ರಾತ್ಯಕ್ಷಿಕ ಕಾರ್ಯಕ್ರಮ ನಡೆಯಿತು.

ಈ ವೇಳೆ ಕಳೆದಬಾರಿಯ ದ್ವಿತೀಯ ಪಿಯು ಫಲಿತಾಂಶದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಶೇ 100 ರಷ್ಟು ಫಲಿತಾಂಶ ನೀಡಿದ ಉಪನ್ಯಾಸಕರನ್ನು ಹಾಗೂ ರೋಣ ಅಗ್ನಿಶಾಮಕ ದಳದ ಠಾಣಾಧಿಕಾರಿ ಮಂಜುನಾಥ ಮೆಲ್ಮನಿಯವರನ್ನು ಸನ್ಮಾನಿಸಲಾಯಿತು. ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಆಡಳಿತಾಧಿಕಾರಿ ಎನ್.‌ ಆರ್.‌ ಗೌಡರ, ಕುಮಾರೇಶ್ವರ ಪದವಿ ಕಾಲೇಜಿನ ಚೇರಮನ್ನ ಎಸ್.‌ ಎಸ್.‌ ಪಟ್ಟೇದ, ಪಿಯು ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಸದಾಶಿವ ಕರಡಿ, ಶೈಕ್ಷಣಿಕ ಸಲಹೆಗಾರ ಶಿವಾನಂದ ಮಠದ, ಎಂ. ಜಿ. ಸೋಮನಕಟ್ಟಿ, ಎಂ. ಪಿ. ಪಾಟೀಲ, ಪಿ. ಎನ್.‌ ಚವಡಿ, ಎಸ್.‌ ಸಿ. ಚಕ್ಕಡಿಮಠ, ಬಿ. ಎಸ್.‌ ಹಿರೇಮಠ, ಮಂಜುನಾಥ ಕಾಡದ ಇದ್ದರು.

ವರದಿ :ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!