
ಸಂಭ್ರಮದಿಂದ ಜರುಗಿದ ಜಾನಪದ ಉತ್ಸವ.
ಗಜೇಂದ್ರಗಡ:ಸತ್ಯಮಿಥ್ಯ (ಏ-07).
ನಗರದ ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ನಮ್ಮ ಸಂಸ್ಕೃತಿ – ನಮ್ಮ ಹೆಮ್ಮೆ ಶೀರ್ಷಿಕೆಯಡಿ “ಜಾನಪದ ಉತ್ಸವ -2025”ನ್ನು ಸಂಭ್ರಮದಿಂದ ಆಚರಿಸಲಾಯಿತು.ಇಂದಿನ ಪಾಶ್ಚಾತ್ಯ ಶೈಲಿಯ ಆಧುನಿಕ ಜೀವನದಲ್ಲಿ ದೇಸೀ ಸಂಸ್ಕೃತಿಯು ತನ್ನ ಹಿಂದಿನ ವೈಭವವನ್ನು ಕಳೆದುಕೊಳ್ಳುತ್ತಿರುವ ಕಾರಣ ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿ ಮತ್ತು ಜನಪದದ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಡೊಳ್ಳು ವಾದನದೊಂದಿಗೆ ಎತ್ತಿನ ಬಂಡಿ ಮತ್ತು ಕುಂಭ ಮೆರವಣಿಗೆ ಆಯೋಜಿಸಲಾಗಿತ್ತು.
ಕಾಲೇಜು ಆವರಣದಲ್ಲಿ ಕಣ ನಿರ್ಮಾಣ ಮತ್ತು ರಾಶಿ ಪೂಜೆ ನೆರವೇರಿಸಲಾಯಿತು. ನಂತರ ವಿದ್ಯಾರ್ಥಿಗಳು ಜನಪದ ಹಾಡು ಮತ್ತು ನೃತ್ಯ ಪ್ರದರ್ಶನ ನೀಡಿದರು.
ಈ ವೇಳೆ ಮಹಾವಿದ್ಯಾಲಯಕ್ಕೆ ಭೂಮಿ ದಾನ ನೀಡಿದ ಸಿಂಹಾಸನದ ಕುಟುಂಬದ ಶ್ರೀ ಮಲ್ಲಪ್ಪ ಸಂಕಪ್ಪ ಸಿಂಹಾಸನದ ಮತ್ತು ಪ್ರಾಂಶುಪಾಲರಾದ ಮಹೇಂದ್ರ ಜಿ ಇವರು ಡೊಳ್ಳು ಬಾರಿಸುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಇತಿಹಾಸ ವಿಭಾಗದ ಶ್ರೀ ಸಿದ್ದೇಶ ಕೆ ಇವರು ಆಧುನಿಕ ಮಾಹಿತಿ ತಂತ್ರಜ್ಞಾನ ಮತ್ತು ಮೊಬೈಲ್ ಹಾವಳಿಯಿಂದಾಗಿ ಮರೆಯಾಗುತ್ತಿರುವ ಜನಪದವನ್ನು ಉಳಿಸಿ ಬೆಳೆಸುವುದರ ಮಹತ್ವವನ್ನು ಕುರಿತು ಮಾತನಾಡುತ್ತಾ ಜನಪದ ಅಧ್ಯಯನ ನಡೆದು ಬಂದ ಇತಿಹಾಸದ ಕುರಿತು ವಿವರಿಸಿದರು.
ಈ ಸಮಾರಂಭದಲ್ಲಿ ಕಾಲೇಜಿಗೆ ಭೂದಾನ ಮಾಡಿದ ಶ್ರೀ ಮಲ್ಲಪ್ಪ ಸಂಕಪ್ಪ ಸಿಂಹಾಸನದ ಇವರಿಗೆ ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಕಾಲೇಜು ಅಭಿವೃದ್ಧಿ ಸದಸ್ಯರಾದ ಸುರೇಂದ್ರಸಾ ರಾಯಬಾಗಿ ಭಾಗಿಯಾಗಿದ್ದರು ಹಾಗೂ ವಿದ್ಯಾರ್ಥಿಗಳಿಗೆ ಹಿತನುಡಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹೇಂದ್ರ ಅವರು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕಿವಿಮಾತು ನುಡಿದರು. ಕಾರ್ಯಕ್ರಮದ ಅಂಗವಾಗಿ ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೂ ಸಾಂಪ್ರದಾಯಿಕ ಉಡುಗೆ ಧರಿಸಿದ್ದರು. ಮಧ್ಯಾಹ್ನ ದೇಸೀ ಆಹಾರದ ಸವಿಯನ್ನು ವಿದ್ಯಾರ್ಥಿಗಳು ಸವಿದರು. ಹನುಮೇಶ, ಸಂಚಾಲಕರು, IQAC, ಡಾ. ಜೆಟ್ಟಣ್ಣವರ್, ಮುಖ್ಯಸ್ಥರು, ಭೂಗೋಳಶಾಸ್ತ್ರ, ಡಾ. ವಿಶ್ವನಾಥ, ಮುಖ್ಯಸ್ಥರು ಇತಿಹಾಸ ಹಾಗೂ ಡಾ. ಸಾವಿತ್ರಿ ಪವಾರ ಇವರಲ್ಲದೇ ಮಹಾವಿದ್ಯಾಲಯದ ಸಕಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ : ಸುರೇಶ ಬಂಡಾರಿ.