ತಾಲೂಕು

ರೈಲು ಮಾರ್ಗ ನಿರ್ಮಾಣ, ಕೆರೆಗಳಿಗೆ ನೀರು ತುಂಬಿಸುವ ಮೂಲಕ ಈ ಭಾಗದ ಜನತೆಗೆ ಉಪಕಾರ ಮಾಡಿ – ಶಾಸಕ ಜಿಎಸ್ಪಿ ಯಿಂದ ಕೇಂದ್ರ ಸಚಿವ ವಿ. ಸೋಮಣ್ಣಗೆ ಮನವಿ.

Share News

ರೈಲು ಮಾರ್ಗ ನಿರ್ಮಾಣ, ಕೆರೆಗಳಿಗೆ ನೀರು ತುಂಬಿಸುವ ಮೂಲಕ ಈ ಭಾಗದ ಜನತೆಗೆ ಉಪಕಾರ ಮಾಡಿ – ಶಾಸಕ ಜಿಎಸ್ಪಿ ಯಿಂದ ಕೇಂದ್ರ ಸಚಿವ ವಿ. ಸೋಮಣ್ಣಗೆ ಮನವಿ.

ನರೇಗಲ್ಲ ಸತ್ಯಮಿಥ್ಯ (ಅ.೫).

ನರೇಗಲ್ಲ ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಗುರುವಾರ ಸಂಜೆ ಶ್ರೀಮದ್ ಜಗದ್ಗುರು ರಂಭಾಪುರಿ ಶ್ರೀಗಳವರ ಗುರುಮನೆ ಶರನ್ನವರಾತ್ರಿ ದಸರಾ ಅತ್ಯಂತ ವಿಜೃಂಭಣೆ, ಸಡಗರ, ಸಂಭ್ರಮಗಳಿಂದ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕೇಂದ್ರ ಜಲಶಕ್ತಿ ಹಾಗೂ ರೇಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸ್ವಾಗತ ಭಾಷಣ ಮಾಡಿದ ಶಾಸಕ ಜಿ. ಎಸ್. ಪಾಟೀಲ ಸರ್ವರನ್ನೂ ಸ್ವಾಗತಿಸಿ, ಕೇಂದ್ರ ಸಚಿವರ ಸಮ್ಮುಖದಲ್ಲಿ ಈ ಭಾಗದ ಮಹತ್ವದ ಬೇಡಿಕೆಗಳನ್ನು ಇಡುವ ಮೂಲಕ ತಮ್ಮ ಜಾಣ್ಮೆ ಮೆರೆದರು.

ಭಾರತ ಸರಕಾರ ಮಹತ್ವದ ಹುದ್ದೆಗಳ ಸಚಿವರಾಗಿರುವ ಸೋಮಣ್ಣನವರೆ ಈ ಭಾಗದ ಜನ ನಾವು ರೇಲ್ವೆ ಅನುಕೂಲತೆಯಿಂದ ವಂಚಿತರಾಗಿದ್ದೇವೆ. ಇನ್ನೇನು ಈ ಭಾಗಕ್ಕೆ ರೇಲ್ವೆ ಬಂದೇ ಬಿಡ್ತು ಎನ್ನುವಷ್ಟರಲ್ಲಿ ಅದು ಬೇರೆ ಕಡೆಗೆ ತಿರುಗಿಕೊಂಡು ಹೋಯಿತು. ಗದಗ-ವಾಡಿ ರೇಲ್ವೆ ಮಾರ್ಗಕ್ಕೆ ಈ ಹಿಂದೆ ಆಗಿನ ರೇಲ್ವೆ ಸಚಿವರಾಗಿದ್ದ ಲಾಲಬಹಾದ್ದೂರ ಶಾಸ್ತೀಜಿಯವರು ಶಂಕು ಸ್ಥಾಪನೆ ಮಾಡಿದ್ದರು. ಈ ಮಾರ್ಗವು ಕಣಗಿನಹಾಳ, ಕೋಟುಮಚಗಿ, ನರೇಗಲ್ಲ, ಗಜೇಂದ್ರಗಡ, ಹನುಮಸಾಗರ, ಇಳಕಲ್ಲ, ಕುಷ್ಟಗಿ ಮಾರ್ಗವಾಗಿ ವಾಡಿಯನ್ನು ಸೇರಬೇಕಿತ್ತು. ಆದರೆ ಅದು ಈಗ ನಮ್ಮ ಕೈ ತಪ್ಪಿ ಹೋಗಿದೆ. ಈಗ ನೀವು ರೇಲ್ವೆ ಖಾತೆಯ ಸಚಿವರಾಗಿದ್ದು, ಈಗಾಗಲೇ ನಿರ್ಮಾಣಗೊಂಡಿರುವ ರೈಲು ಮಾರ್ಗಕ್ಕೆ ಪರ್ಯಾವಾಗಿ ಈಗ ಮೇಲೆ ಸೂಚಿಸಿದ ಮಾರ್ಗವನ್ನು ರಚಿಸಿ ನಮ್ಮನ್ನು ಕುಷ್ಟಗಿಯವರಗೆ ತಲುಪಿಸಿದರೆ ನಿಮ್ಮನ್ನು ಈ ಭಾಗದ ಜನ ಎಂದಿಗೂ ಮರೆಯಲಾರರು ಎಂದರು.

ಹಾಗೆಯೆ ನಮ್ಮಲ್ಲಿ ಕರೆಕಟ್ಟೆಗಳಿಗೇನೂ ಬರವಿಲ್ಲ. ಆದರೆ ಅವು ನೀರಿಲ್ಲದೆ ಸೊರಗುತ್ತಿವೆ. ಆಲ ಶಕ್ತ ಸಚಿವರೂ ಆಗಿರುವ ನೀವುಗಳು ನಮ್ಮ ಭಾಗದ ಕರೆಗಳನ್ನು ತುಂಬಿಸುವ ಕಾರ್ಯವನ್ನು ಕೈಗೊಂಡರೆ ಈ ಭಾಗದ ರೈತಾಪಿ ಜನಕ್ಕೆ ಬಹಳಷ್ಟು ಅನುಕೂಲವಾಗುತ್ತದೆ. ಆದ್ದರಿಂದ ತಾವುಗಳು ಈ ಕಾರ್ಯವನ್ನೂ ನೆರವೇರಿಸಿಕೊಡಬೇಕೆಂ ಎರಡು ಬೇಡಿಕೆಗಳನ್ನಿರಿಸಿದರು.

ತಮ್ಮ ಉದ್ಘಾಟನಾ ಭಾಷಣದಲ್ಲಿ ಸ್ಪಂದನೆ ನೀಡಿದ ಸಚಿವ ವಿ. ಸೋಮಣ್ಣ ರಾಜ್ಯದ ರೇಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಈಗಾಗಲೆ ೪೩ ಸಾವಿರ ಕೋಟಿ ರೂಪಯಿಗಳ ಕಾಮಗಾರಿ ಈ ಹಿಂದಿನಿಂದಲೂ ಬಾಕಿ ಇದೆ. ಮೊದಲು ಅದನ್ನು ಪೂರ್ಣಗೊಳಿಸಿ ನಿಮ್ಮ ಗದಗ-ಗಜೇಂದ್ರಗಡ-ವಾಡಿ ಯೋಜನೆಯ ಪರ್ಯಾಯ ಮಾರ್ಗಕ್ಕೆ ಸ್ಪಂದಿಸುವೆ ಎಂದರು.

ಅಬ್ಬಿಗೇರಿ ಶ್ರೀ ವೀರಭದ್ರ ಶಿವಾಚಾರ್ಯರ ಜನ್ಮ ಸ್ಥಳ. ಇಲ್ಲಿನ ಕೆರೆಯನ್ನು ಪುನರುಜ್ಜೀವನಗೊಳಿಸಲು ಶ್ರೀಗಳು ತಿಳಿಸಿದ್ದಾರೆ. ನೀವೂ ಸಹ ಅದೇ ಬೇಡಿಕೆಯನ್ನು ಇರಿಸಿದ್ದೀರಿ. ಇನ್ನು ಒಂದು ವಾರದೊಳಗೆ ಈ ಕಾರ್ಯದ ಪರಿಶೀಲನೆಗಾಗಿ ಸಂಬಂಧಿಸಿದ ಅಧಿಕಾರಿಗಳನ್ನು ಅಬ್ಬಿಗೇರಿ ಗ್ರಾಮಕ್ಕೆ ಕಳಿಸುತ್ತೇನೆ ಎಂದು ಸೋಮಣ್ಣ ಭರವಸೆ ನೀಡಿದರು. ಇದರೊಂದಿಗೆ ಅಬ್ಬಿಗೇರಿ ಗ್ರಾಮದಲ್ಲಿ ಮನೆಗಳ ನಿರ್ಮಾಣಕ್ಕೂ, ಸರಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಕೋಣೆಗಳನ್ನು ನಿರ್ಮಿಸುವ ಬಗ್ಗೆಯೂ ಯೋಚಿಸುವುದಾಗಿ ತಿಳಿಸಿದರು. ಒಟ್ಟಿನಲ್ಲಿ ವಿ. ಸೋಮಣ್ಣ ಶರನ್ನವರಾತ್ರಿ ಉತ್ಸವಕ್ಕೆ ಬಂದು ಭರವಸೆ ಮೂಡಿಸಿದ್ದಾರೆ.

ಅದೆಷ್ಟರ ಮಟ್ಟಿಗಿನ ಸಫಲತೆ ಕಾಣುವುದೋ ಕಾದು ನೋಡಬೇಕು ಎಂಬ ಚರ್ಚೆ ಊಟದ ಪೆಂಡಾಲ್‌ನಲ್ಲಿ ನೆರೆದ ಸಾರ್ವಜನಿಕರ ನಡುವೆ ನಡೆದಿತ್ತು.

ವರದಿ : ಸಂಗಮೇಶ ಮೆಣಸಗಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!