ಸ್ಥಳೀಯ ಸುದ್ದಿಗಳು

ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕು – ಶ್ರೀ ರಂಭಾಪುರಿ ಜಗದ್ಗುರುಗಳು

Share News

ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕು – ಶ್ರೀ ರಂಭಾಪುರಿ ಜಗದ್ಗುರುಗಳು.

ನರೇಗಲ್ಲ:ಸತ್ಯಮಿಥ್ಯ (ಅ.05).

ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಅತ್ಯಂತ ಪಾವಿತ್ರ್ಯತೆಯನ್ನು ಹೊಂದಿದೆ. ಭೌತಿಕ ಬದುಕಿಗೆ ಸಂಪತ್ತಷ್ಟೇಷಮುಖ್ಯವಲ್ಲ. ಅದರೊಂದಿಗೆ ಧರ್ಮ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆ ಬೆಳೆದುಕೊಂಡು ಬರಬೇಕಾಗಿದೆ. ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಗುರುವಾರ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಆವರಣದಲ್ಲಿ ನಿರ್ಮಿಸಿದ ಮಾನವ ಧರ್ಮ ಮಂಟಪದಲ್ಲಿ ೩೩ನೇ ವರ್ಷದ ದಸರಾ ಧರ್ಮ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಶಿವನನ್ನು ಬಿಟ್ಟು ಶಕ್ತಿ ಶಕ್ತಿಯನ್ನು ಬಿಟ್ಟು ಶಿವನಿಲ್ಲ. ಶಕ್ತಿಯುಕ್ತನಾದ ಪರಮಾತ್ಮನನ್ನು ಪೂಜಿಸುವವರೇ ವೀರಶೈವರು. ಶಕ್ತಿ ವಿಶಿಷ್ಟ ಜೀವನಿಗೂ ಶಕ್ತಿ ವಿಶಿಷ್ಟ ಶಿವನಿಗೂ ಸಾಮರಸ್ಯವನ್ನು ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಿಸುತ್ತದೆ. ಪಾರ್ವತಿ ಪರಮೇಶ್ವರರು ಶಬ್ದಾರ್ಥದಂತೆ ಸತ್ಯ ಸಂಬಂಧದಿಂದ ಇರುತ್ತಾರೆ. ಶಬ್ದ ಬಿಟ್ಟು ಅರ್ಥ ಅರ್ಥವನ್ನು ಬಿಟ್ಟು ಶಬ್ದ ಹೇಗೆ ಇರುವುದಿಲ್ಲವೋ ಹಾಗೆಯೇ ಶಿವಶಕ್ತಿ ಸಂಬಂಧ ಇರುತ್ತದೆ. ಪರಶಿವನ ಜ್ಞಾನ ಶಕ್ತಿ ಕ್ರಿಯಾಶಕ್ತಿ ಇಚ್ಚಾಶಕ್ತಿ ರೂಪದಿಂದ ಜಗತ್ತನ್ನು ಪ್ರಕಾಶನ ಪಡಿಸುತ್ತಿರುವ ಮಹಾನ್ ಶಕ್ತಿಯನ್ನು ಪೂಜಿಸುವ ಸತ್ಸಂಪ್ರದಾಯವಿದೆ. ಶಿವನ ಆರಾಧನೆ ಎಷ್ಟು ಪ್ರಾಚೀನವೋ ಅಷ್ಟೇ ಶಕ್ತಿ ಆರಾಧನೆ ಪ್ರಾಚೀನವಾದುದು. ದುಷ್ಟರ ಸಂಹಾರ ಶಿಷ್ಟರ ಪರಿಪಾಲನೆಗಾಗಿ ದೇವಿ ಅವತಾರ ತಾಳಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಮಾಜದ ಎಲ್ಲ ರಂಗಗಳಲ್ಲಿ ಹೆಚ್ಚುತ್ತಿರುವ ಸಂಘರ್ಷ ನಿಂತು ಶಾಂತಿ ನೆಮ್ಮದಿ ಸಾಮರಸ್ಯ ಬೆಳೆಸಿಕೊಂಡು ಬರುತ್ತಿರುವುದಕ್ಕೆ ಶ್ರೀ ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ಸಮಾರಂಭ ಸಾಕ್ಷಿಯಾಗಿದೆ. ನವರಾತ್ರಿ ಮೊದಲ ದಿನ ಶೈಲ ಪುತ್ರಿ ನಾಮಾಂಕಿತದಲ್ಲಿ ದೇವಿಯನ್ನು ಪೂಜಿಸುತ್ತಾರೆ. ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೇ ಆತ್ಮಜ್ಞಾನ ಪಡೆಯಲು ಮುಂದಾಗಬೇಕು. ಶೈಲ ಪುತ್ರಿ ಶಕ್ತಿ ಆರಾಧನೆಯಿಂದ ಕೆಟ್ಟ ಪರಿಣಾಮ ಮತ್ತು ಅಪಶಕುನ ದೂರಾಗಿ ಬದುಕಿನಲ್ಲಿ ಶಾಂತಿ ಸಂತೃಪ್ತಿ ಉಂಟಾಗುವುದೆಂದರು.

ಸಮಾರಂಭ ಉದ್ಘಾಟಿಸಿದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವ್ಹಿ. ಸೋಮಣ್ಣ ಮಾತನಾಡಿ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಉದ್ಘಾಟನೆ ಮಾಡಿದ ಸೌಭಾಗ್ಯ ನನ್ನ ಪಾಲಿಗೆ ಪ್ರಾಪ್ತವಾಗಿರುವುದು ಗುರು ಹಿರಿಯರ ಆಶೀರ್ವಾದ ಎಂದು ಹರುಷ ವ್ಯಕ್ತಪಡಿಸಿದ ಅವರು ಸಮಾಜದ ವೈರುದ್ಧ್ಯಗಳನ್ನು ತಿದ್ದಿ ತೀಡಿ ಸನ್ಮಾರ್ಗದಲ್ಲಿ ಜನ ಸಮುದಾಯವನ್ನು ಕೊಂಡೊಯ್ಯುವಲ್ಲಿ ಇಂಥ ಸಮಾರಂಭಗಳ ಅವಶ್ಯಕತೆ ಬಹಳಷ್ಟಿದೆ. ರಾಜ್ಯದ ರಾಜಧಾನಿ ೨೦೧೧ರಲ್ಲಿ ಬೆಂಗಳೂರಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಮಹೋತ್ಸವ ನಡೆದಿರುವುದನ್ನು ನಾನು ಮರೆಯುವಂತಿಲ್ಲ. ಶ್ರೀ ರಂಭಾಪುರಿ ಧರ್ಮ ಪೀಠದ ದಸರಾ ಮೈಸೂರಿನ ದಸರಾದಷ್ಟೇ ಪ್ರಸಿದ್ಧವಾದುದು. ಪ್ರತಿ ವರುಷ ಈ ದಸರಾ ಮಹೋತ್ಸವ ರಾಜ್ಯದಬೇರೆ ಬೇರೆ ಪ್ರಾಂತ ಪ್ರದೇಶಗಳಲ್ಲಿ ವೈಭವದಿಂದ ಜರುಗುತ್ತಾ ಬರುತ್ತಿದೆ. ಶ್ರೀ ಪೀಠ ಕೇವಲ ಧಾರ್ಮಿಕ ಮಾತ್ರವಲ್ಲದೇ ಸಾಮಾಜಿಕ ಶೈಕ್ಷಣಿಕ ಕಾರ್ಯಗಳನ್ನು ಮಾಡುತ್ತ ಮುನ್ನಡೆದಿದೆ. ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಜರುಗುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಜರುಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ನೇತೃತ್ವ ವಹಿಸಿದ್ದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮೈಸೂರಿನಲ್ಲಿ ಅರಮನೆಯ ದಸರಾ ನಡೆದರೆ ಅಬ್ಬಿಗೇರಿಯಲ್ಲಿ ಗುರು ಪೀಠದ ದಸರಾ ನಡೆಯುತ್ತಿದೆ. ಈ ಸಮಾರಂಭದಿಂದ ಜನ ಸಮುದಾಯದಲ್ಲಿ ಆಧ್ಯಾತ್ಮ ಜ್ಞಾನ ಸಾಮರಸ್ಯ ಸದ್ಭಾವನೆ ಬೆಳೆದುಕೊಂಡು ಬರುವುದರಲ್ಲಿ ಯಾವುದೇ ಸಂದೇಹವಿಲ್ಲವೆಂದರು. ಸಮ್ಮುಖ ವಹಿಸಿದ್ದ ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಆದರ್ಶ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದೆ. ಆಡುವ ಮಾತಿನಂತೆ ನಡೆಯುವುದೇ ನಿಜವಾದ ಧರ್ಮವೆಂದರು. ಸಿದ್ಧರಬೆಟ್ಟ ಕ್ಷೇತ್ರ-ಅಬ್ಬಿಗೇರಿ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸಂಕಲ್ಪ ನುಡಿಗಳನ್ನಾಡುತ್ತ ಲಿಂ. ಸೋಮಶೇಖರ ಶ್ರೀಗಳವರ ಸತ್ಯ ಸಂಕಲ್ಪ ಸಾಕಾರಗೊಂಡ ಸುದಿನ ನಮ್ಮೆಲ್ಲರಿಗೂ ಪ್ರಾಪ್ತವಾಗಿದೆ. ಹತ್ತು ದಿನಗಳ ಕಾಲ ಜರುಗುವ ಸಮಾರಂಭದಲ್ಲಿ ಸರ್ವರೂ ಪಾಲ್ಗೊಂಡು ಪುನೀತರಾಗಬೇಕೆಂದರು.

ನವರಾತ್ರಿಯಲ್ಲಿ ಶಕ್ತಿ ಆರಾಧನೆ ಕುರಿತು ಮಾತನಾಡಿದ ಲಕ್ಷ್ಮೇಶ್ವರ ಡಾ|| ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ಅವರು ಮಾತನಾಡಿ ಎಲ್ಲ ಹಬ್ಬಗಳಲ್ಲಿ ನವರಾತ್ರಿ ಹಬ್ಬ ಬಹು ದೊಡ್ಡ ಹಬ್ಬ. ಆದಿಶಕ್ತಿ ದೇವಿಯನ್ನು ಆರಾಧಿಸುವ ಹೆಣ್ಣು ಮಕ್ಕಳ ವಿಶೇಷ ಹಬ್ಬ. ನವರಾತ್ರಿಯಲ್ಲಿ ನವಶಕ್ತಿಯನ್ನು ಆರಾಧಿಸುವ ಪರಿಪಾಠ ಬೆಳೆದುಕೊಂಡು ಬಂದಿದೆ. ಶ್ರೀ ರಂಭಾಪುರಿ ಪೀಠದ ದಸರಾ ಮಹೋತ್ಸವ ಜನ ಸಮುದಾಯದ ಮೇಲೆ ಆಗಾಧ ಪರಿಣಾಮವನ್ನು ಬೀರುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕೊಣಂದೂರು ಕೆ.ಪ್ರಕಾಶ, ಗ್ರಾ.ಪಂ.ಅಧ್ಯಕ್ಷ ನೀಲಪ್ಪ ದ್ವಾಸಲ, ಉಪಾಧ್ಯಕ್ಷೆ ಅಕ್ಕಮ್ಮ ಡೊಳ್ಳಿನ, ಗದಗಿನ ತೋಟಪ್ಪ (ರಾಜು) ಕುರಡಗಿ, ಐ.ಎಸ್.ಪಾಟೀಲ ಭಾಗವಹಿಸಿದ್ದರು. ವೇದಿಕೆಯಲ್ಲಿ ಎಡೆಯೂರು, ಮಳಲಿ, ದೊಡ್ಡಸಗರ, ನಾಗವಂದ, ತಮ್ಮಡಿಹಳ್ಳಿ, ಹಿರೇವಡ್ಡಟ್ಟಿ, ಸವಡಿ, ಅಬ್ಬಿಗೇರಿ ಬಸವರಾಜ ಶರಣರು ಇದ್ದರು.

ಗುರುರಕ್ಷೆ: ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯರು, ಹಿರೇಮಠ, ಬೆನಹಾಳದ ಸದಾಶಿವ ಮಹಾಂತ ಶಿವಾಚಾರ್ಯರು, ಜಿಗೇರಿಯ ಗುರುಸಿದ್ಧೇಶ್ವರ ಶಿವಾಚಾರ್ಯರು, ರೋಣದ ಶಿವಣ್ಣ ಪಲ್ಲೇದ, ಅನ್ನದಾನ ಶಾಸ್ತ್ರೀಗಳು ಗುಡೂರು, ವೀರೇಶ ಪಾಟೀಲ ಹುಬ್ಬಳ್ಳಿ, ಶ್ರೀನಿವಾಸ ರೆಡ್ಡಿ ಬೆಂಗಳೂರು, ಮಹೇಶ್ವರ ಸ್ವಾಮಿಗಳು ಅಡವೀಂದ್ರಸ್ವಾಮಿಮಠ ಗದಗ, ಕೌಜಗೇರಿ ಜಾನಪದ ಕಲಾವಿದ ಈರಣ್ಣ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ-ಶಾಸಕ ಜಿ.ಎಸ್.ಪಾಟೀಲ ಸರ್ವರನ್ನು ಸ್ವಾಗತಿಸಿ ಮಾತನಾಡಿ ಹತ್ತು ದಿ ನಗಳ ಈ ದಸರಾ ಧರ್ಮ ಸಮ್ಮೇಳನ ಅಬ್ಬಿಗೇರಿಯಲ್ಲಿ ಜರುಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಮತ್ತೆ ದಸರಾ ಸಮಾರಂಭವನ್ನು ಇಲ್ಲಿ ಕಾಣಲು ಸಾಧ್ಯವಿಲ್ಲ. ಹತ್ತೂ ದಿನಗಳ ಸಮಾರಂಭದಲ್ಲಿ ಜನತೆ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡು ಇದರ ಪ್ರಯೋಜನ ಪಡೆಯಬೇಕು. ರೇಲ್ವೆ ಸಚಿವರು ಗದಗ-ವಾಡಿ ರೇಲ್ವೆ ಯೋಜನೆಯನ್ನು ಜಾರಿಗೊಳಿಸುವುದರಿಂದ ಗದಗ ಜಿಲ್ಲೆಗೆ ಅನುಕೂಲ ಆಗುತ್ತದೆ. ಇದರ ಜೊತೆಗೆ ಈ ಭಾಗದ ಕುಡಿಯುವ ನೀರಿನ ಯೋಜನೆಗಳನ್ನು ಕೇಂದ್ರದಿಂದ ಮಂಜೂರು ಮಾಡಿಸಿಕೊಡುವಂತೆ ತಿಳಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಇವರಿಂದ ಸಂಗೀತ ಮತ್ತು ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆಯಿತು.

ಇಷ್ಟಲಿಂಗ ಮಹಾಪೂಜಾ: ಬೆಳಿಗ್ಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ವಿಶ್ವಶಾಂತಿ ಹಾಗೂ ಲೋಕಕಲ್ಯಾಣಕ್ಕಾಗಿ ಇಷ್ಟಲಿಂಗ ಮಹಾಪೂಜೆ ನಡೆಸಿದರು ಸಹಸ್ರಾರು ಜನ ಪಾಲ್ಗೊಂಡು ಶ್ರೀ ಜಗದ್ಗುರುಗಳ ಅಶೀರ್ವಾದ ಪಡೆದರು.

ದಾಸೋಹ ಸೇವೆ: ಸಿದ್ಧಯ್ಯ ಅರಳೆಲೆಮಠ, ಶಿವಪ್ಪ ವೀರಪ್ಪ ನೀರಲೋಟ, ಮಲ್ಲಪ್ಪ ಬಸಪ್ಪ ಹಳ್ಳಿ ಸಹೋದರರು, ಸೋಮನಗೌಡ ಕಣವಿ, ಧಾರವಾಡದ ಸಿ.ಕೆ.ಮಾಳಶೆಟ್ಟಿ ಇವರಿಂದ ದಾಸೋಹ ಸೇವೆ ಜರುಗಿತು.

ವರದಿ : ಸಂಗಮೇಶ ಮೆಣಸಗಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!