ರಾಜ್ಯ ಸರ್ಕಾರದ ನಿರ್ಲಕ್ಯದಿಂದ ಟಿಬಿ ಡ್ಯಾಮ್ ಸಮಸ್ಯೆ ಎದುರಾಗಿದೆ: ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ ಬಸವರಾಜ ಬೊಮ್ಮಾಯಿ
ರಾಜ್ಯ ಸರ್ಕಾರದ ನಿರ್ಲಕ್ಯದಿಂದ ಟಿಬಿ ಡ್ಯಾಮ್ ಸಮಸ್ಯೆ ಎದುರಾಗಿದೆ: ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ ಬಸವರಾಜ ಬೊಮ್ಮಾಯಿ
ರಾಜ್ಯ ಸರ್ಕಾರ ತುಂಗಭದ್ರಾ ಅಣೆಕಟ್ಟು ಹಾಗೂ ಜನರ ಸುರಕ್ಷತೆಗೆ ಗಮನ ನೀಡಬೇಕು: ಬಸವರಾಜ ಬೊಮ್ಮಾಯಿ.
ಬೆಂಗಳೂರು:ಸತ್ಯಮಿಥ್ಯ (ಆಗಸ್ಟ್ -11)
ರಾಜ್ಯ ಸರ್ಕಾರ ತುಂಗಭದ್ರಾ ಅಣೆಕಟ್ಟೆಯ ಡ್ಯಾಮ್ ಮ್ಯಾನೇಜ್ ಮೆಂಟ್ ಕಮಿಟಿ ನೀಡಿರುವ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದರಿಂದ ಡ್ಯಾಮ್ ನ ಕ್ರಸ್ಟ್ ಗೇಟ್ ಮುರಿದು ಸಮಸ್ಯೆ ಎದುರಿಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಡ್ಯಾಂ ಸ್ವತಂತ್ರ ಪೂರ್ವದಲ್ಲಿ ನಿರ್ಮಾಣ ಆಗಿದೆ. ಅದು ಕಾಲ ಕಾಲಕ್ಕೆ ಹಲವಾರು ಸಮಸ್ಯೆ ಎದುರಿಸುತ್ತಾ ಬಂದಿದೆ. ಹೂಳು ತುಂಬಿರುವ ಬಗ್ಗೆ ಬಹಳ ದೊಡ್ಡ ಸಮಸ್ಯೆ ಆಗಿತ್ತು. ಹೀಗಾಗಿ ಸಮಾನಾಂತರವಾದ ಅಣೆಕಟ್ಟು ಕಟ್ಟಬೇಕು ಅಂತ ನಮ್ಮ ಅವಧಿಯಲ್ಲಿ ಡಿಪಿಆರ್ ಮಾಡಿ ಸಿದ್ಧತೆ ಮಾಡಲಾಗಿತ್ತು. ಡ್ಯಾಂ ಮ್ಯಾನೇಜ್ ಮೆಂಟ್ ಕಮಿಟಿ ಕೇಂದ್ರ ಸರ್ಕಾರದಿಂದ ಬಂದು ಹಲವು ಸಲಹೆ ಕೊಟ್ಟಿರುತ್ತಾರೆ. ಅವರ ಸಲಹೆಗಳನ್ನು ರಾಜ್ಯ ಸರ್ಕಾರ ಒತ್ತು ಕೊಟ್ಟು ಜಾರಿ ಮಾಡಬೇಕು. ಆದರೆ, ಸರ್ಕಾರ ಗಂಭೀರವಾಗಿ ಅವರ ಸಲಹೆ ತೆಗೆದುಕೊಂಡಿಲ್ಲ ಅನಿಸುತ್ತದೆ. ಅವರ ಸಲಹೆ ಗಂಭೀರವಾಗಿ ಪರಿಗಣಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.
ಸರ್ಕಾರ ಈ ಕೂಡಲೇ ಚೈನ್ ಅಷ್ಟೇ ಅಲ್ಲ, ಸಂಪೂರ್ಣ ಗೇಟ್ ಭದ್ರಗೊಳಿಸಬೇಕು. ಹಣ ಬಿಡುಗಡೆ ಮಾಡಿ ಗೇಟ್ ದುರಸ್ತಿ ಕೆಲಸ ಮಾಡಬೇಕು. ಡ್ಯಾಂ ಹಾಗೂ ಜನರ ಸುರಕ್ಷತೆಯನ್ನು ಸರ್ಕಾರ ಗಮನಿಸಬೇಕು. ಸರ್ಕಾರದ ನಿರ್ಲಕ್ಷ್ಯತನದಿಂದಲೇ ಹೀಗೆ ಆಗಿರಬಹುದು. ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಹಣಕಾಸು ಅಥವಾ ತಾಂತ್ರಿಕ ಸಮಸ್ಯೆ ಆಗಿರಬಹುದು. ನೋಡೋಣ ಏನಾಗಿದೆ ಎಂದು ಗೊತ್ತಾಗುತ್ತದೆ. ಡ್ಯಾಂನಲ್ಲೇ ಇಂಜಿಜಿಯರ್ ಗಳು, ತಾಂತ್ರಿಕ ತಜ್ಞರು ಇದ್ದರು. ಅವರೆಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿತ್ತು. ಈ ವರ್ಷ ಅತೀ ಹೆಚ್ಚು ಮಳೆ ಬರುತ್ತದೆ ಅಂತ ಮೊದಲೇ ಹವಾಮಾನ ತಜ್ಞರು ಹೇಳಿದ್ದರು. ಅದನ್ನು ಅರ್ಥ ಮಾಡಿಕೊಂಡು ಇವರು ಕೆಲಸ ಮಾಡಬೇಕಿತ್ತು. ಆದರೆ ಸರಿಯಾದ ನಿರ್ವಹಣೆ ಮಾಡದೇ ಈ ಸಮಸ್ಯೆ ಆಗಿದೆ. ಈ ಬಗ್ಗೆ ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ ಎಂದು ಹೇಳಿದರು.
ವರದಿ : ಮುತ್ತು.