ಜಕ್ಕಲಿಯಲ್ಲಿ: ಡಾ. ಪಂ. ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ.
ನರೇಗಲ್ಲ:ಸತ್ಯಮಿಥ್ಯ (ಸೆ.೧೮).
ಸಮೀಪದ ಜಕ್ಕಲಿ ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಲಿಂ. ಡಾ. ಪಂ. ಪುಟ್ಟರಾಜ ಗವಾಯಿಯವರ ಪುತ್ಥಳಿಗೆ ಮಂಗಳವಾರ ಸ್ಥಳೀಯ ಕರವೇ ಗ್ರಾಮ ಘಟಕ ಮತ್ತು ಪುಟ್ಟರಾಜ ಗವಾಯಿಗಳವರ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಪಂ. ಪುಟ್ಟರಾಜ ಗವಾಯಿಗಳವರ ೧೪ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.
ಈ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಪುಟ್ಟರಾಜರ ಮೂರ್ತಿಗೆ ವೆ.ಮೂ. ಗುರುಲಿಂಗಯ್ಯ ಮಂಟಯ್ಯನಮಠ ಸ್ವಾಮಿಗಳಿಂದ ಮಹಾ ರುದ್ರಾಭಿಷೇಕ, ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಈ ವೇಳೆ ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿಯವರನ್ನು, ಕಪ್ಪತಗಿರಿ ಫೌಂಡೇಷನ್ ವತಿಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶೆಟ್ಟೆಪ್ಪ ಬಂಡಿವಡ್ಡರ ಹಾಗೂ ದಸರಾ ಕುಸ್ತಿಪಟು ಬಸವರಾಜ ಹಡಪದ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಮೇಶ ಮೇಟಿ, ಮಲ್ಲಿಕಾರ್ಜುನ ಮುಧೋಳ, ವೀರಪ್ಪ ತಳವಾರ, ಪುಂಡಪ್ಪ ಮಡಿವಾಳರ, ಚನ್ನಬಸಪ್ಪ ಸೂಡಿ, ಬಸವರಾಜ ಶಿವಶಿಂಪರ, ಪ್ರಮೋದ ಯಾವಗಲ್ಲ, ರವಿ ಮುಗಳಿ, ಹನಮಂತ ಭಜಂತ್ರಿ, ನಾಗರಾಜ ಸಂಗನಬಶೆಟ್ಟರ, ಕಳಕಪ್ಪ ಬಂಡಿ, ಈರಣ್ಣ ಬುಳ್ಳಾ, ಮಂಜುನಾಥ ಜಂಗಣ್ಣವರ, ದ್ಯಾಮಣ್ಣ ಜಂಗಣ್ಣವರ, ಬಸವರಾಜ ರಂಗಣ್ಣವರ ಸೇರಿದಂತೆ ಗ್ರಾಮದ ಪುಟ್ಟರಾಜ ಸದ್ಭಕ್ತ ವೃಂದದವರು ಇದ್ದರು.
ಪ್ರಕಾಶ ವಾಲಿ ಸ್ವಾಗತಿಸಿದರು, ಮುತ್ತಣ್ಣ ಎಂ. ಮೇಟಿ ನಿರೂಪಿಸಿದರು. ಕಾರ್ಯಕ್ರಮದ ನಿಮಿತ್ಯ ಅನ್ನಸಂತರ್ಪಣೆ ನಡೆಯಿತು.
ವರದಿ:ಸಂಗಮೇಶ ಮೆಣಸಗಿ.