ಗಂಗಾವತಿ : ಅಂಜನಾದ್ರಿ ಅಭಿವೃದ್ಧಿ ಕುರಿತ ಸಭೆ – ವಿಳಂಬಕ್ಕೆ ಆಕ್ರೋಶ, ಕಾಮಗಾರಿ ವೇಗಕ್ಕೆ ಸೂಚನೆ :ಸಚಿವ ಎಚ್.ಕೆ.ಪಾಟೀಲ.

ಗಂಗಾವತಿ : ಅಂಜನಾದ್ರಿ ಅಭಿವೃದ್ಧಿ ಕುರಿತ ಸಭೆ – ವಿಳಂಬಕ್ಕೆ ಆಕ್ರೋಶ, ಕಾಮಗಾರಿ ವೇಗಕ್ಕೆ ಸೂಚನೆ :ಸಚಿವ ಎಚ್.ಕೆ.ಪಾಟೀಲ.
ಗಂಗಾವತಿ:ಸತ್ಯಮಿಥ್ಯ (ಜೂ-17)
‘ಅಂಜನಾದ್ರಿ ಅಭಿವೃದ್ಧಿ ವಿಳಂಬ ವಿಚಾರದಲ್ಲಿ ಜನ ಆಕ್ರೋಶಗೊಂಡಿದ್ದು, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಕಾಮಗಾರಿ ಪಡೆದ ಏಜೆನ್ಸಿಯವರು ನಿಗದಿತ ಅವಧಿಯ ಒಳಗೆ ನಿರ್ದಿಷ್ಟ ಕಾಮಗಾರಿ ಮುಗಿಯುವಂತೆ ನೋಡಿಕೊಳ್ಳಬೇಕು’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಸೂಚಿಸಿದರು.
ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಹೋಟೆಲ್ನಲ್ಲಿ ಸೋಮವಾರ ಅಂಜನಾದ್ರಿ ಅಭಿವೃದ್ಧಿ ಕುರಿತ ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡಿ ಮಾತನಾಡಿ ‘ಡಿಸೆಂಬರ್ 15ರ ಒಳಗಾಗಿ ವಸತಿ ಸಮುಚ್ಚಯ, ಮಾರ್ಚ್ 31ರ ಒಳಗೆ ಕೇಬಲ್ ಕಾರ್ ಕಾಮಗಾರಿ ಪೂರ್ಣಗೊಳಿಸಬೇಕು. ಕಳೆದ 15 ವರ್ಷಗಳಿಂದ ಅಂಜನಾದ್ರಿಬೆಟ್ಟ ಅಭಿವೃದ್ಧಿಯೇ ಆಗಿಲ್ಲ. ಸರಿಯಾಗಿ ಶೌಚಾಲಯ, ಕುಡಿಯುವ ನೀರು, ತುರ್ತು ಚಿಕಿತ್ಸಾ ಘಟಕ, ಸ್ವಚ್ಚತೆ, ಸ್ನಾನಗೃಹ ವ್ಯವಸ್ಥೆ ಇಲ್ಲದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.
‘ಈ ಹಿಂದಿನ ಬಿಜೆಪಿ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ ₹100ಕೋಟಿ ಅನುದಾನ ಘೋಷಿಸಿದೆ. ಎಷ್ಟು ಹಣ ಬಿಡುಗಡೆ ಮಾಡಿದೆಯೊ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ಹಿಂದಿನ ಸಾಲಿನಲ್ಲಿ ₹100 ಕೋಟಿ ಘೋಷಿಸಿ ಅನುದಾನಕ್ಕೆ ತಕ್ಕಂತೆ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಿದೆ’ ಎಂದು ತಿಳಿಸಿದರು.
ಪಿಪಿಟಿ ಪ್ರಾತ್ಯಕ್ಷಿಕೆ: ಅಧಿಕಾರಿಗಳು ಅಂಜನಾದ್ರಿ ಅಭಿವೃದ್ಧಿ ಕುರಿತ ಪ್ರಾತ್ಯಕ್ಷಿಕೆ ತೋರಿಸಿ ಬಿಜೆಪಿ ಸರ್ಕಾರದ ₹100 ಕೋಟಿ, ಕಾಂಗ್ರೆಸ್ ಸರ್ಕಾರದ ₹100 ಕೋಟಿ ಕಾಮಗಾರಿಗಳ ವಿವರ ಮತ್ತು ಅದಕ್ಕೆ ಬಳಸುವ ಅನುದಾನ, ಭೂಸ್ವಾಧೀನ ಪ್ರಕ್ರಿಯೆಗೆ ಬೇಕಾಗುವ ಭೂಮಿ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ ‘ಪ್ರದಕ್ಷಿಣ ಪಥದಲ್ಲಿ ಮತ್ತೊಂದು ವ್ಯವಸ್ಥೆ ಕಲ್ಪಿಸುವ ಅಗತ್ಯವಿಲ್ಲ. ಹನುಮಮಾಲಾ, ಹನುಮಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಕಾರಣ ಈ ಪಥದಲ್ಲಿ ಸ್ನಾನಗೃಹ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಹೆಚ್ಚಾಗಿ ಕಲ್ಪಿಸುವ ಯೋಜನೆ ರೂಪಿಸಿ. ಕಡೆಬಾಗಿಲು, ಆನೆಗೊಂದಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಶೌಚಾಲಯಗಳ ಅಗತ್ಯವಿದೆ’ ಎಂದು ಹೇಳಿದರು.
ಸಂಸದ ಕೆ. ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ನಳಿನ್ ಆತುಲ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊಲೀಸ್ ಪಾಟೀಲ, ಪ್ರವಾಸೋದ್ಯಮ ಇಲಾಖೆ ಆಯುಕ್ತ ರಾಜೇಂದ್ರ ಕೆ.ವಿ, ಕಾರ್ಯದರ್ಶಿ ಸಲ್ಮಾ ಫಾಹಿಮಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪುರ, ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವ ರಾಯಲು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್ ಶ್ರೀನಾಥ, ಅಂಜನಾದ್ರಿ ದೇವಸ್ಥಾನದ ಇಒ ಪ್ರಕಾಶರಾವ್, ಆನೆಗೊಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹುಲಿಗೆಮ್ಮ ಹೊನ್ನಪ್ಪ ನಾಯಕ, ದೇವಸ್ಥಾನದ ವ್ಯವಸ್ಥಾಪಕ ವೆಂಕಟೇಶ ಮಡಿವಾಳ ಇದ್ದರು.
ಎಚ್.ಕೆ. ಪಾಟೀಲ ಪ್ರವಾಸೋದ್ಯಮ ಇಲಾಖೆ ಸಚಿವಅಂಜನಾದ್ರಿಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು.
ವರದಿ :ಮುತ್ತು ಗೋಸಲ.