ಹಿರಿಯರ ಮಾರ್ಗದರ್ಶನ ಯುವ ಪೀಳಿಗೆಗೆ ಅವಶ್ಯ-ಕಟ್ಟೇಗೌಡರ.
ಹಾನಗಲ್ಲ:ಸತ್ಯಮಿಥ್ಯ(ಸ -16)
ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ಬೆಳೆಸಲು ಸಹಕಾರಿಯಾಗಿದ್ದು ಯುವ ಜನಾಂಗ ಹಿರಿಯರ ಮಾರ್ಗದರ್ಶನದೊಂದಿಗೆ ಸಂಘಟನೆ, ಸಹಕಾರ ಹಾಗೂ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರಗೌಡ ಕಟ್ಟೇಗೌಡರ ಹೇಳಿದರು.
ಪಟ್ಟಣದ ಶ್ರೀ ಛತ್ರಪತಿ ಶಿವಾಜಿ ಯುವಕ ಮಂಡಳ ಶಿವಾಜಿನಗರ ವತಿಯಿಂದ ಗಜಾನನೋತ್ಸವ 2024 ಅಂಗವಾಗಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಸಮಂಜರಿ ಕಾರ್ಯಕ್ರಮದಿಂದ ಕಲಾವಿದರಿಗೆ ಹಾಗೂ ಪ್ರತಿಭಾವಂತ ಯುವ ಪ್ರತಿಭೆಗಳಿಗೆ ವೇದಿಕೆ ದೊರೆಯುತ್ತದೆ. ನಿತ್ಯ ಬದುಕಿನ ಜಂಜಾಟದಲ್ಲಿದ್ದ ಮನಸ್ಸಿಗೆ ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮಗಳು ಮನಸ್ಸಿಗೆ ಸಂತಸ ನೀಡುತ್ತವೆ. ಯುವಕರು ಸಮಾಜದಲ್ಲಿ ಸಮಾಜಮುಖಿ ಕೆಲಸ ಮಾಡಲು ಮುಂದಾಗಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಭಟ್ಕಳದ ಸಂಜನಾ ಡ್ಯಾನ್ಸ್ ಅಕಾಡೆಮಿ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕಲಾವಿದರ ಸಂಗೀತ, ಮಿಮಿಕ್ರಿ ಹಾಗೂ ಡ್ಯಾನ್ಸ್ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದರು .
ವೇದಿಕೆಯಲ್ಲಿ ಶ್ರೀ ಛತ್ರಪತಿ ಶಿವಾಜಿ ಯುವಕ ಮಂಡಳದ ಅಧ್ಯಕ್ಷರು, ಉಪಾಧ್ಯಕ್ಷರು,ಪದಾಧಿಕಾರಿಗಳು, ಗಣ್ಯ ವ್ಯಕ್ತಿಗಳು, ಮತ್ತು ಯುವಕರು ಉಪಸ್ಥಿತರಿದ್ದರು.
ವರದಿ : ಗಣೇಶ. ಕೆ.