
ಗದಗ ರೈಲ್ವೆ ನಿಲ್ದಾಣದಲ್ಲಿ 2 ಲಕ್ಷ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದ ರೈಲ್ವೆ ಪೊಲೀಸರು
ಗದಗ:ಸತ್ಯಮಿಥ್ಯ (ಜು 03)
ಗದಗ ರೈಲ್ವೆ ನಿಲ್ದಾಣದಲ್ಲಿ 2 ಲಕ್ಷ ರೂ. ಮೌಲ್ಯದ ಅಂದಾಜು 2 ಕೆಜಿಯಷ್ಟು ಗಾಂಜಾವನ್ನು ರೈಲ್ವೆ ಪೋಲಿಸರು ವಶಪಡಿಸಿಕೊಂಡಿದ್ದಾರೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ್ ಕಣ್ಣಮಣಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗದಗ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ 1ರಲ್ಲಿ ನಿಂತಿದ್ದ ವಾಸ್ಕೋಡಿಗಾಮ ಅಮರಾವತಿ ಎಕ್ಸ್ ಪ್ರೆಸ್ ರೈಲಿನ ಜನರಲ್ ಕೋಚ್ ನ ಬೋಗಿಯಲ್ಲಿ ವಾರಸುದಾರರಿಲ್ಲದ ಬೂದು ಬಣ್ಣದ ಚೀಲವೊಂದು ಕಂಡು ಬಂದಿತ್ತು. ಪರಿಶೀಲಿಸಿದಾಗ ಕಂದು ಬಣ್ಣದ ಟೇಪ್ನಲ್ಲಿ ಸುತ್ತಿದ ಎರಡು ಬಂಡಲ್ಗಳು ಕಂಡು ಬಂದವು. ಬಂಡಲ್ ನೊಳಗೆ ಗಾಂಜಾ ಇರುವುದು ಪತ್ತೆಯಾಗಿದ್ದು, ಅದನ್ನು ಆರ್ಪಿಎಫ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡಿದ್ದ ಸುಮಾರು ಎರಡು ಲಕ್ಷ ಮೌಲ್ಯದ ಗಾಂಜಾವನ್ನು ಗದಗ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಅವರಿಗೆ ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವರದಿ : ಮುತ್ತು ಗೋಸಲ.