
ತಳವಗೇರದಲ್ಲಿ ಶಾಲಾ ದಾಖಲಾತಿ ಹಾಗೂ ಹಾಜರಾತಿ ಆಂದೋಲನಕ್ಕೆ ಚಾಲನೆ

ಹನಮಸಾಗರ:ಸತ್ಯಮಿಥ್ಯ (ಜೂ 12)
ಸಮೀಪದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಳವಗೇರದಲ್ಲಿ ಶಾಲಾ ದಾಖಲಾತಿ ಮತ್ತು ಹಾಜರಾತಿ ಆಂದೋಲನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಕೊಪ್ಪಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ಕಲಿಕೆ-ಟಾಟಾ ಟ್ರಸ್ಟ್ಸ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾ ಸಿಬ್ಬಂದಿ ಹಾಗೂ ಕಲಿಕೆ ಸಂಸ್ಥೆಯ ಸಂಯೋಜಕರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ ಒಂದನೇ ತರಗತಿಗೆ ದಾಖಲಾಗಿರುವ ಮಕ್ಕಳಿಗೆ ಹೂಗುಚ್ಛ, ನೋಟ್‌ಬುಕ್ ಮತ್ತು ಪೆನ್ನುಗಳನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ನಂತರ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಲಿಕೆ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ಶ್ರೀ ಬಸವರಾಜ ನಾಗಣ್ಣವರ ಮಾತನಾಡಿ, ಸರ್ಕಾರಿ ಶಾಲೆಗೆ ದಾಖಲಾಗಿರುವ ಮಕ್ಕಳನ್ನು ಪೋಷಕರು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಭಾರತದ ಸಂವಿಧಾನದ ಪರಿಚ್ಛೇದ 45ರ ಆಶಯದಂತೆ 3 ರಿಂದ 6 ವರ್ಷದೊಳಗಿನ ಮಕ್ಕಳನ್ನು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹಾಗೂ 86ನೇ ಸಂವಿಧಾನ ತಿದ್ದುಪಡಿಯಂತೆ 6 ರಿಂದ 14 ವರ್ಷದೊಳಗಿನ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಅಗತ್ಯ ಎಂದು ತಿಳಿಸಿದರು. ಸರ್ಕಾರ ಹಾಗೂ ಕಲಿಕೆ ಸಂಸ್ಥೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳ ಶ್ರೇಯೋಭಿವೃದ್ಧಿಗೆ ಪೋಷಕರು ಸಹಕರಿಸಬೇಕು ಎಂದು ಕರೆ ನೀಡಿದರು.
ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರಾಮಣ್ಣ ಸಕ್ರಿ ಮಾತನಾಡಿ, ಪ್ರತಿಯೊಂದು ಮಗು ಶಾಲೆಯತ್ತ ಮುಖ ಮಾಡಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಪೋಷಕರ ಜವಾಬ್ದಾರಿಯಾಗಿದ್ದು, ಶಿಕ್ಷಣವು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಅವಶ್ಯಕವಾಗಿದೆ ಎಂದರು. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳಿದ್ದು, ಶಿಕ್ಷಣ ಕ್ಷೇತ್ರಕ್ಕೆ ಕಲಿಕೆ-ಟಾಟಾ ಟ್ರಸ್ಟ್ಸ್ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ ಎಂದು ಹೇಳಿದರು. ದಾಖಲಾತಿ ಹಾಗೂ ಹಾಜರಾತಿ ಆಂದೋಲನದ ಉದ್ದೇಶವನ್ನು ವಿವರಿಸಿ, ಅರ್ಹ ವಯಸ್ಸಿನ ಎಲ್ಲ ಮಕ್ಕಳು ಶಾಲೆಗೆ ದಾಖಲಾಗುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಅಮೀನಸಾಬ ಮಾತನಾಡಿ, ಅರ್ಹ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಿ ನಿಯಮಿತ ಹಾಜರಾತಿ ಹೊಂದಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವಲ್ಲಿ ಪೋಷಕರು ಹಾಗೂ ಶಿಕ್ಷಣ ಇಲಾಖೆಯ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಕಲಿಕೆ-ಟಾಟಾ ಟ್ರಸ್ಟ್ಸ್ ಕಾರ್ಯಕ್ರಮಗಳು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿದ್ದು, ಮುಂದೆಯೂ ಸಮುದಾಯದ ಎಲ್ಲ ವರ್ಗಗಳ ಸಹಭಾಗಿತ್ವದೊಂದಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಕಲಿಕೆ-ಟಾಟಾ ಟ್ರಸ್ಟ್ಸ್ ಸಂಸ್ಥೆಗೆ ಎಲ್ಲರೂ ಅಭಿನಂದನೆ ಸಲ್ಲಿಸಿದರು.




