
ಮೈಸೂರು ಮಠದ ಶ್ರೀಗಳ ವಿರುದ್ಧ ಮಂಜುಳಾ ರೇವಡಿ ಗಂಭೀರ ಆರೋಪ..!

ಗಜೇಂದ್ರಗಡ:ಸತ್ಯಮಿಥ್ಯ (ಜೂ -24)
ಗಜೇಂದ್ರಗಡ ಮೈಸೂರು ಮಠದ ಶ್ರೀಗಳು ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಗದಗ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳಾ ರೇವಡಿಯವರ ನಡುವೆ ಉಂಟಾಗಿರುವ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ.

ಈ ಕುರಿತು ಮಠದ ಶ್ರೀಗಳ ಕಾರ್ಯವೈಖರಿಯ ವಿರುದ್ಧ ಗಂಭೀರ ಆರೋಪಗಳನ್ನು ಮಂಜುಳಾ ರೇವಡಿಯವರು ಮಾಡಿದ್ದಾರೆ.
ನಗರದ ಮೈಸೂರು ಮಠದಲ್ಲಿನ ಮುಂಭಾಗದಲ್ಲಿ ಏಕಾಂಗಿಯಾಗಿ ಶಾಂತಿಯುತ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನನ್ನನ್ನು ಮತ್ತು ನನ್ನ ಕುಟುಂಬವನ್ನು ಶ್ರೀಮಠಕ್ಕೆ ಸೇರಿಸಬೇಡಿ ಎಂದು ಸಮಾಜದ ಅನೇಕ ಮುಖಂಡರುಗಳ ಮುಂದೆ ನಮ್ಮ ಕುಟುಂಬವನ್ನು ಅಲ್ಲಗಳೆದು ಶ್ರೀಗಳು ಮಾತನಾಡಿದ್ದಾರೆ. ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಎನ್ನುವ ಬಗ್ಗೆ ನಮ್ಮಗೆ ಸ್ಪಷ್ಟಣೆಯನ್ನು ಶ್ರೀಗಳು ನೀಡಬೇಕು. ನಮ್ಮ ಕುಟುಂಬದಿಂದ ಮಠಕ್ಕೆ ಅಥವಾ ಸಮಾಜಕ್ಕೆ ಯಾವ ರೀತಿಯ ಅನ್ಯಾಯವಾಗಿದೆ ಎಂಬುದನ್ನು ವಿಜಯಮಹಾಂತ ಮಹಾಸ್ವಾಮಿಗಳು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು. ಕಾರಣವಿಲ್ಲದೆ ನಮ್ಮನ್ನು ಸಮಾಜದಿಂದ ದೂರವಿಡುವ ಪ್ರಯತ್ನ ನಡೆಸಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಶ್ರೀಗಳು ಕೆಲವು ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಹಲವು ವರ್ಷಗಳಿಂದ ಶ್ರೀಮಠಕ್ಕೆ ನಮ್ಮ ಕುಟುಂಬವೂ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಾ ಬಂದಿದ್ದೇವೆ , ನಮ್ಮನ್ನು ಶ್ರೀ ಮಠದವರು ಕಡೆಗಣಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಮಠಕ್ಕೆ ವಿಧಿಸಲಾಗಿರುವ ನಿರ್ಬಂಧದಿಂದ ನಮ್ಮ ಭಕ್ತಿಗೆ, ಧಾರ್ಮಿಕ ಚಟುವಟಿಕೆಗಳಿಗೆ ಅನೇಕ ಅಡಚಣೆ ಉಂಟಾಗಿದ್ದು, ನಮ್ಮ ಕುಟುಂಬದ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಅವರು ಹೇಳಿದರು. ಮಠದ ಶ್ರೀಗಳ ಆಡಳಿತದ ಕ್ರಮಗಳಿಂದ ನಮ್ಮಗೆ ಗೊಂದಲ ಮತ್ತು ಅಸಮಾಧಾನ ಉಂಟಾಗಿದ್ದು, ಈ ಕುರಿತು ಪೂಜ್ಯರು ಹಾಗೂ ಸಂಬಂಧಪಟ್ಟವರು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಂಡೇ ವಜಿರ್ ಸಮಾಜದ ತಾಲೂಕಾ ಅಧ್ಯಕ್ಷರಾದ ಬಸವರಾಜ ಅಡೂರರಾಜೂರ ಮಾತನಾಡಿ. ನಮ್ಮ ಸಮಾಜದ ಮಹಿಳಾ ಮುಖಂಡರಾದ ಮಂಜುಳಾ ರೇವಡಿಯವರಿಗೆ ಮಠಕ್ಕೆ ಬರಬಾರದು ಎನ್ನುವ ಶ್ರೀಗಳ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಪೂಜ್ಯ ಸ್ಥಾನದಲ್ಲಿರುವ ಶ್ರೀಗಳು ನಾವ್ಯಾರಾದರು ಭಕ್ತರು ತಪ್ಪು ಮಾಡಿದರೆ ಬುದ್ದಿ ಹೇಳಿ ಸರಿಪಡಿಸಲಿ. ಈ ವಿಷಯವನ್ನು ಶ್ರೀಗಳು ಮುತುವರ್ಜಿ ವಹಿಸಿ ಹಿರಿಯರ ಸಮ್ಮುಖದಲ್ಲಿ ಸುಖಾಂತ್ಯಗೊಳಿಸಲಿ ಎಂದರು.
ಇನ್ನೊಂದೆಡೆ, ಮಂಜುಳಾ ರೇವಡಿ ಅವರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮೈಸೂರು ಮಠದ ಶ್ರೀಗಳು ಪತ್ರಿಕೆಯೊಂದಿಗೆ ಮಾತನಾಡಿ ನಾವೂ ಯಾರಿಗೂ ಮಠದ ಪ್ರವೇಶವನ್ನು ನಿರ್ಭಂದ ಹೇರಿಲ್ಲ, ಮಠಕ್ಕೆ ಭಕ್ತರಂತೆ ಬಂದು ಹೋಗಲು ನಮ್ಮ ಯಾವುದೇ ತಕರಾರು ಇಲ್ಲ, ಎಲ್ಲಾ ಸಾರ್ವಜನಿಕರು ಬರಬಹುದು ಎಂದು ಪ್ರತಿಕ್ರೀಯಿಸಿದರು.
ಇನ್ನೂ ಈ ಬೆಳವಣಿಗೆ ಸ್ಥಳೀಯ ಸಾರ್ವಜನಿಕರು ಹಾಗೂ ಭಕ್ತರ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿಸಿದೆ.



