ತಾಲೂಕು

ನೀಟ್ ರದ್ದುಪಡಿಸಿ – ಎಸ್ ಎಫ್ ಐ ಆಗ್ರಹ.

ನೀಟ್ ರದ್ದುಪಡಿಸಿ, ಹಾಸ್ಟೇಲ್ ಪ್ರಾರಂಬಿಸಿ, ಬಸ್ ಸಮಸ್ಯೆ ಬಗೆಹರಿಸಿ ಎಸ್ ಎಫ್ ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಆಕ್ರೋಶ

Share News

ನೀಟ್ ರದ್ದುಪಡಿಸಿ, ಹಾಸ್ಟೇಲ್ ಪ್ರಾರಂಬಿಸಿ, ಬಸ್ ಸಮಸ್ಯೆ ಬಗೆಹರಿಸಿ ಎಸ್ ಎಫ್ ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಆಕ್ರೋಶ

ಗಜೇಂದ್ರಗಡ:ಸತ್ಯಮಿಥ್ಯ (ಜೂಲೈ -06)

ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ ಎಫ್ ಐ) ಸಂಘಟನೆ ನೇತೃತ್ವದಲ್ಲಿ ಇಂದು ವಿದ್ಯಾರ್ಥಿಗಳು ನೀಟ್ ರದ್ದುಪಡಿಸಿ, ಹಾಸ್ಟೇಲ್ ಪ್ರಾರಂಬಿಸಿ, ಬಸ್ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಪುರಸಭೆಯಿಂದ ಹೋರಾಟದ ಮೆರವಣಿಗೆ ಪ್ರಾರಂಭಿಸಿ ಮೈಸೂರು ಮಠ, ದುರ್ಗಾ ಸರ್ಕಲ್, ಮಾರ್ಗವಾಗಿ ಕೆ ಕೆ ಸರ್ಕಲ್ ನಲ್ಲಿ ಮಾನವ ಸರಪಳಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್ ಎಫ್ ಐ ನ ರಾಜ್ಯ ಪದಾಧಿಕಾರಿಗಳಾದ ಗಣೇಶ ರಾಠೋಡ್ ಮಾತನಾಡಿNEET ಪರೀಕ್ಷೆ ರದ್ದುಪಡಿಸಲು ಮತ್ತು NEET, NET ಪರೀಕ್ಷೆಯಲ್ಲಿ ನಡೆದ ಹಗರಣವನ್ನು ನಿಪಕ್ಷಪಾತ ತನಿಖೆಗೆ ಒತ್ತಾಯಿಸಿದರು.

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವುಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ನಿನ್ನೆ ದಿನ ವಿದ್ಯಾರ್ಥಿಗಳ ಮುಷ್ಕರದಲ್ಲಿ ರಾಜ್ಯದ ವಿದ್ಯಾರ್ಥಿಗಳು ಮುಷ್ಕರದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ ಅದರಂತೆ ಎಸ್ ಎಫ್ ಐ ಗಜೇಂದ್ರಗಡ ತಾಲ್ಲೂಕು ಸಮಿತಿಯು ಇಂದು ಬೃಹತ್ ಪ್ರತಿಭಟನೆ ಮಾಡಿ ಮನವಿ ಸಲ್ಲಿಸುತ್ತಿದೆ.

ಕಳೆದ ಕೆಲವು ವಾರಗಳಿಂದ ನಡೆದ ಘಟನೆಗಳನ್ನು ಗಮನಿಸಿದಾಗ ಮತ್ತೊಮ್ಮೆ ರಾಷ್ಟೀಯ ಪರೀಕ್ಷಾ ಪ್ರಾಧಿಕಾರ ರಾಷ್ಟ್ರ ಮಟ್ಟದ ಪರೀಕ್ಷೆಗಳನ್ನು ನಡೆಸಲು ಅಸಮರ್ಥತೆಯನ್ನು ಪ್ರದರ್ಶಿಸಿದೆ. ನೆಟ್ ಮರು ಪರೀಕ್ಷೆ, ನೀಟ್ ಪರೀಕ್ಷೆಯ ಪ್ರೆಶ್ನೆಪತ್ರಿಕೆ ಸೋರಿಕೆ ರಾಷ್ಟ್ರಾದ್ಯಂತ ಸುದ್ದಿ ಮಾಡಿದೆ.

ಜೂನ್ 4 ರಂದು ಘೋಷಿಸಲಾದ ನೀಟ್ ಪರೀಕ್ಷೆಯ ಫಲಿತಾಂಶಗಳು ಸರಿಯಾದ ಪಾರದರ್ಶಕತೆ ಇಲ್ಲದೆ ಮತ್ತು ಪೇಪರ್ ಸೋರಿಕೆಯಂತಹ ದೂರುಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಭಾದಿತರಾಗಿದ್ದರು.

ಇದರ ಜೊತೆಗೆ, ಲಕ್ಷಗಟ್ಟಲೆ ವಿದ್ಯಾರ್ಥಿಗಳು ಹಾಜರಾಗಿದ್ದ ಯುಜಿಸಿ ನೆಟ್ ಪರೀಕ್ಷೆಯು ಪೇಪರ್ ಸೋರಿಕೆ ವರದಿಗಳಿಂದ ರದ್ದುಗೊಳಿಸಲಾಯಿತು. ಇದಲ್ಲದೆ, ನೇರವಾಗಿ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ (NBE) ಸಹ ಪ್ರೆಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಬಗ್ಗೆ ಉಲ್ಲೇಖಿಸಿ NEET-PG ಮರು ಪ್ರವೇಶ ಪರೀಕ್ಷೆಗಳನ್ನು ಕೊನೆಯ ಕ್ಷಣದಲ್ಲಿ ಮುಂದೂಡಲು ನಿರ್ಧರಿಸಲಾಗಿದೆ.

ಕೋಚಿಂಗ್ ಸೆಂಟರ್ ಗಳ ಪ್ರೋತ್ಸಾಹಿಸುವಿಕೆಯನ್ನು ಸಿಯುಇಟಿ, ನೀಟ್ ನಂತಹ ಕೇಂದ್ರೀಕೃತ ಪರೀಕ್ಷೆಗಳ ಪಾಲಿಸಿಗಳಿಂದ ಶಿಕ್ಷಣದ ಖಾಸಗೀಕರಣ ಹೆಚ್ಚುತ್ತಿದೆ. ಇದರಿಂದ ಕೋಟ್ಯಾಂತರ ತಳ ಸಮುದಾಯದ ಹಾಗೂ ಮಾಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದುಬಾರಿಯಾಗಿದೆ.

‘ಒಂದು ರಾಷ್ಟ್ರ, ಒಂದು ಪರೀಕ್ಷೆ’ ಎಂಬ ಘೋಷಣೆಯ ಅಡಿಯಲ್ಲಿ, ಇಡೀ ಪರೀಕ್ಷಾ ವ್ಯವಸ್ಥೆಯು ಕುಸಿದಿದೆ ಮತ್ತು ಅನಿರ್ದಿಷ್ಟಾವಧಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ.

‘ದಿ ಟೆಲಿಗ್ರಾಫ್ ‘ ಪತ್ರಿಕೆಯ ವರದಿಯ ಪ್ರಕಾರ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು 25 ಸಾರ್ವಜನಿಕ ಪರೀಕ್ಷೆಗಳನ್ನು 25 ಕ್ಕಿಂತ ಕಡಿಮೆ ಖಾಯಂ ಸಿಬ್ಬಂದಿಗಳೊಂದಿಗೆ ನಿರ್ವಹಿಸುತ್ತದೆ, ಎನ್ ಟಿ ಎ ಪುನರಾವರ್ತಿತ ವೈಫಲ್ಯಗಳು ವಿದ್ಯಾರ್ಥಿಗಳಿಗೆ ಆತಂಕವನ್ನು ಸೃಷ್ಟಿಸಿವೆ. ಲಕ್ಷಾಂತರ ವಿದ್ಯಾರ್ಥಿಗಳ ಅಮೂಲ್ಯ ಸಮಯ, ಶ್ರಮ ಮತ್ತು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವ್ಯರ್ಥ ಮಾಡುತ್ತಿದೆ. ವಿದ್ಯಾರ್ಥಿಗಳ ಬಗ್ಗೆ ತೋರುವ ನೀರ್ದಾಕ್ಷೀಣ್ಯ ನಿರ್ಲಕ್ಷ್ಯವು ಅಕ್ರಮಗಳ ಬಗ್ಗೆ ಪಾರದರ್ಶಕತೆ, ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸುತ್ತದೆ. ಹಾಗೆಯೇ ಶಿಕ್ಷಣ ಸಚಿವಾಲಯದಲ್ಲಿನ ರಚನಾತ್ಮಕ ಬದಲಾವಣೆಯನ್ನು ಆಗ್ರಹಿಸುತ್ತದೆ.

ಉನ್ನತ ಶಿಕ್ಷಣದಲ್ಲಿನ ಸಮಸ್ಯೆಗಳು ಅಷ್ಟೇ ಅಲ್ಲದೆ, ಶಾಲಾ ಶಿಕ್ಷಣದ ಸಮಸ್ಯೆಗಳನ್ನು ಪ್ರತ್ಯೇಕಿಸುವಂತಿಲ್ಲ. ಬಿಜೆಪಿ ನೇತೃತ್ವದ ಎನ್ ಡಿ ಎ ಅವಧಿಯಲ್ಲಿ ಶಿಕ್ಷಣಕ್ಕೆ ಸಂಭಂದಪಟ್ಟ ಇಲಾಖೆಗಳಿಗೆ ಬಜೆಟ್ ನಲ್ಲಿ ಹಣ ಕಡಿತ ಮಾಡಿರುವುದು, ಸರ್ಕಾರಿ ಶಾಲೆಗಳನ್ನು ಮುಚ್ಚುವುದು, ಶಿಕ್ಷಕರ ಕೊರತೆ, ವಿದ್ಯಾರ್ಥಿಗಳ ಒಟ್ಟು ದಾಖಲಾತಿಯಲ್ಲಿ ಕುಸಿದಿರುವುದನ್ನು ಕಾಣಬಹುದಾಗಿದೆ. 2018-19 ಮತ್ತು 2021-22 ರ ನಡುವೆ ಭಾರತದಲ್ಲಿ ಒಟ್ಟು ಸರ್ಕಾರಿ ಶಾಲೆಗಳ ಸಂಖ್ಯೆ 61885 ರಷ್ಟು ಕಡಿಮೆಯಾಗಿವೆ.

ಒಟ್ಟು 15,51,000 ಶಾಲೆಗಳಿಂದ 14,89,115 ಶಾಲೆಗಳಿಗೆ ಕುಸಿದಿದೆ. ಒಟ್ಟು 61361 ಶಾಲೆಗಳನ್ನು ಮುಚ್ಚಲಾಗಿದೆ. ಸರ್ಕಾರಿ ಶಾಲೆಗಳ ಸಂಖ್ಯೆಯಲ್ಲಿ ವಿಪರೀತ ಕುಸಿತ ಹಾಗೂ ಖಾಸಗಿ ಶಾಲೆಗಳ ಸಂಖ್ಯೆಯಲ್ಲಿ ಅಗಾಧ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಬಡ – ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ವಂಚಿಸುವ ಹುನ್ನಾರವಾಗಿದೆ. ಅತಿಯಾದ ಖಾಸಗೀಕರಣದಿಂದ ವಿದ್ಯಾರ್ಥಿಗಳು ಶುಲ್ಕವನ್ನು ಬರಿಸಲು ಸಾಧ್ಯವಾಗದೇ ಶಿಕ್ಷಣದಿಂದ ದೂರ ಉಳಿಯುತ್ತಾರೆ

ದೇಶಾದ್ಯಂತ ನಡೆದ ವಿದ್ಯಾರ್ಥಿಗಳ ಮುಷ್ಕರದಲ್ಲಿ ರಾಜ್ಯದ ವಿದ್ಯಾರ್ಥಿಗಳೂ ಭಾಗವಹಿಸಿ ಶಾಲಾ- ಕಾಲೇಜುಗಳನ್ನು ಬಹಿಷ್ಕರಿಸಿ ವಿದ್ಯಾರ್ಥಿಗಳ ಮುಷ್ಕರವನ್ನು ಯಶಸ್ವಿಗೊಳಿಸಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಸಂಘಟನೆ ನೇತೃತ್ವದಲ್ಲಿ ರಾಷ್ಟ್ರ ಮತ್ತು ರಾಜ್ಯದಾದ್ಯಂತ ವಿದ್ಯಾರ್ಥಿಗಳು ತೀವ್ರ ಹೋರಾಟ ಮಾಡುತ್ತಾರೆ ಮುಂದಿನ ಎಲ್ಲಾದಕ್ಕೂ ಕೇಂದ್ರ ಸರ್ಕಾರವೇ ನೇರ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಸಿ ಈ ಮನವಿಯನ್ನು ಸಲ್ಲಿಸುತ್ತಿದ್ದೆವೆ ಎಂದರು.

ನಂತರ ಎಸ್ ಎಫ್ ಐ ನ ಜಿಲ್ಲಾ ಮುಖಂಡರಾದ ಚಂದ್ರು ರಾಠೋಡ್ ಮಾತನಾಡಿ ಗಜೇಂದ್ರಗಡ ನಗರವು ಶಿಕ್ಷಣ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರವಾಗಿದ್ದು ಹಾಗೂ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನಗರಕ್ಕೆ ಬರುತ್ತಿರುವ ಕಾರಣ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಪ್ರಾರಂಭಿಸಬೇಕು. ಗ್ರಾಮೀಣ ಪ್ರದೇಶಗಳಿಂದ ಶಿಕ್ಷಣಕ್ಕಾಗಿ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಗಜೇಂದ್ರಗಡದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರ ಪ್ರಾರಂಭಿಸಬೇಕು. ಗಜೇಂದ್ರಗಡ ತಾಲ್ಲೂಕು ಘೋಷಣೆ ಆಗಿ 5-6 ವರ್ಷಗಳಾದರು ಇನ್ನೂ ತನಕ ಸರಿಯಾಗಿ ಎಲ್ಲಾ ತಾಲ್ಲೂಕು ಕಚೇರಿಗಳನ್ನು ಪ್ರಾರಂಭಿಸಿಲ್ಲಾ ತಕ್ಷಣ ಪ್ರಾರಂಭಿಸಬೇಕು.

ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭಗೊಂಡಿದ್ದು ಶಾಲಾ ಕಾಲೇಜಿನಲ್ಲಿ ಶೈಕ್ಷಣಿಕ ವಾತಾವರಣ ಇಲ್ಲದೆ ನರಳುತ್ತಿವೆ. ರಾಜ್ಯದ ಸಿದ್ದಾರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರವು ರಾಜ್ಯದ ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಲು ಮುಂದಾಗಬೇಕು ಮತ್ತು ಶೈಕ್ಷಣಿಕ ವಲಯದಲ್ಲಿ ಕೊರತೆ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್ ಎಫ್ ಐ) ಸಂಘಟನೆಯು ಸರ್ಕಾರವನ್ನು ಒತ್ತಾಯಿಸುತ್ತದೆ ಎಂದರು.

ಹೋರಾಟದ ಸ್ಥಳಕ್ಕೆ ಮಾನ್ಯ ತಹಶಿಲ್ದಾರರು ಗಜೇಂದ್ರಗಡ ಅವರು ಬಂದು ಮನವಿ ಸ್ವೀಕರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸುತ್ತೆವೆ ಮತ್ತು ಸ್ಥಳೀಯ ಸಮಸ್ಯೆಗಳ ಕುರಿತು ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಮತ್ತು ಡಿಪೋ ಮ್ಯಾನೇಜರ್ ಅವರನ್ನು ಒಳಗೊಂಡು ಸಭೆ ಕರೆದು ವಿದ್ಯಾರ್ಥಿ ಮುಖಂಡರ ಜೊತೆ ಸಭೆ ಮಾಡಿ ಬಗೆಹರಿಸಲು ತಕ್ಷಣವೇ ಸಭೆ ಕರೆಯುತ್ತೆವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಸ್ ಎಫ್ ಐ ನ ತಾಲ್ಲೂಕು ಕಾರ್ಯದರ್ಶಿ ಶರಣು ಎಂ, ಮುಖಂಡರಾದ ಮಾಂತೇಶ, ಬಸವರಾಜ, ಅನೀಲ್, ಸುನೀಲ್, ಗುರು, ಭೀಮ, ನಂದಿನಿ, ಲಕ್ಷ್ಮೀ, ವಿಜಯಕುಮಾರ್, ಬಸು ಪಾಟೀಲ್, ಅಕ್ಷತಾ, ಬಾನು, ಉಮೇಶ್, ದ್ಯಾಮಣ್ಣ, ಕಿರಣ ರಾಠೋಡ್ ಹಾಗೂ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!