ತಾಲೂಕು

ಗ್ರಾಮಮಟ್ಟದ ಅಧಿಕಾರಿಗಳು ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಬೇಕು:ಜಿಲ್ಲಾಧಿಕಾರಿ ನಲಿನ್ ಅತುಲ್.

Share News

ಗ್ರಾಮಮಟ್ಟದ ಅಧಿಕಾರಿಗಳು ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಬೇಕು:ಜಿಲ್ಲಾಧಿಕಾರಿ ನಲಿನ್ ಅತುಲ್.

ಕೊಪ್ಪಳ– ಸತ್ಯಮಿಥ್ಯ (ಜುಲೈ 23 )

ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಲು ‘ಜನಸ್ಪಂದನ’ದ ಮೂಲಕ ಜಿಲ್ಲಾಡಳಿತವು ಗ್ರಾಮಸ್ಥರ ಮನೆ ಬಾಗಿಲಿಗೆ ಬಂದಿದೆ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.

ಕುಕನೂರ ತಾಲೂಕಿನ ಮಂಗಳೂರ ಗ್ರಾಮದ ಬಾಪೂಜಿ ಡಿಎಡ್ ಕಾಲೇಜ್ ಆವರಣದಲ್ಲಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿ ಜುಲೈ 23ರಂದು ನಡೆದ ಜನಸ್ಪಂದನ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಕಾಲಕಾಲಕ್ಕೆ ಸಭೆ ನಡೆಸಿ ಸಾರ್ವಜನಿಕರಿಗೆ ಆಸರೆಯಾಗುವ ಪ್ರತಿಯೊಂದು ಯೋಜನೆಗಳ ಆರ್ಥಿಕ ಭೌತಿಕ ಸಾಧನೆಗಳ ಬಗ್ಗೆ ಪರಿಶೀಲಿಸಿ, ಆಯಾ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುತ್ತಿದೆ. ಇನ್ನು ಹೆಜ್ಜೆ ಮುಂದೆ ಹೋಗಿ ಸರ್ಕಾರದ ನಿರ್ದೇಶನದಂತೆ ಗ್ರಾಮ ಮತ್ತು ಹೋಬಳಿಗೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ತೆರಳಿ ಜನಸ್ಪಂದನ ಕಾರ್ಯಕ್ರಮ ನಡೆಸಿ ಗ್ರಾಮಸ್ಥರ ಅಹವಾಲು ಆಲಿಸಲಾಗುತ್ತದೆ ಎಂದರು. ಗ್ರಾಮ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಕುಕನೂರ ತಾಲೂಕಿನಲ್ಲಿ 23,781 ಮಂಗಳೂರ ಹೋಬಳಿಯಲ್ಲಿ 8026 ಜನರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಕುಕನೂರ ತಾಲೂಕಿನಲ್ಲಿ 26,626 ಜನರು ಮತ್ತು ಮಂಗಳೂರ ಹೋಬಳಿಯಲ್ಲಿ 3993 ಜನರು ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಯಲುಬರ್ಗಾ ಮತ್ತು ಕುಕನೂರ ತಾಲೂಕಿನಲ್ಲಿ 745 ಅಭ್ಯರ್ಥಿಗಳು ಯುವನಿಧಿ ಯೋಜನೆಯಡಿ ಸ್ಟೈಪಂಡ್ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಕೊಪ್ಪಳ ಜಿಲ್ಲೆಗೆ ಅನ್ನಭಾಗ್ಯ ಯೋಜನೆಯಡಿ ಜುಲೈ 2023 ರಿಂದ ಏಪ್ರಿಲ್ 2024ರವರೆಗೆ ಅರ್ಹ ಫಲಾನುಭವಿಗಳಿಗೆ ಅನುದಾನವನ್ನು ಡಿಬಿಟಿ ತಂತ್ರಾಂಶದ ಮೂಲಕ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.

ರೈತರಲ್ಲಿ ಮನವಿ: ಇದೆ ವೇಳೆ ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್.ಅವರು ಮಾತನಾಡಿ, ಇದೆ ಜುಲೈ 31 ರೊಳಗೆ ಖುದ್ದು ರೈತರು ಅಥವಾ ಖಾಸಗಿ ನಿವಾಸಿಗಳ ಮೂಲಕ ಬೆಳೆ ಸಮೀಕ್ಷೆಯನ್ನು ಕಡ್ಡಾಯವಾಗಿ ಆಪ್ ಮೂಲಕ ಮಾಡಿಕೊಳ್ಳಲು ಮನವಿ ಮಾಡಿದರು. ಬೆಳೆ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಬ್ಯಾಂಕಿನ ಬೆಳೆ ಸಾಲ ಪಡೆಯಲು ಈ ಬೆಳೆ ಸಮೀಕ್ಷೆಯ ಡಾಟಾ ಅತೀ ಅವಶ್ಯಕತೆಯಾಗಿರುತ್ತದೆ ಎಂದು ವಿವರಿಸಿದರು.

ಹಲವಾರು ಮನವಿಗಳು: ಕುಕನೂರ- ಮಂಗಳೂರ ಮತ್ತು ಮಂಗಳೂರ- ಮುಂಡರಗಿಗೆ ಹೆಚ್ಚುವರಿ ಬಸ್ ಓಡಿಸಬೇಕು ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಮುಸ್ಲಿಂ ಸಮುದಾಯಕ್ಕೆ ಖಬರಸ್ಥಾನ ಬೇಕು ಎಂದು ಅಂಜುಮನ್ ಕಮೀಟಿ ಅಧ್ಯಕ್ಷರು ಮನವಿ ಸಲ್ಲಿಸಿದರು. ತಮಗೆ ಭೂಮಿ ಮಂಜೂರಿ ಮಾಡಬೇಕು ಎಂದು ನಬಿಸಾಬ ಹುಸೇನಸಾಬ ಅವರು, ಆಶ್ರಯ ಯೋಜನೆಯಡಿ ಮನೆ ಮಂಜೂರಿ ಮಾಡಬೇಕು ಎಂದು ಲಲಿತಮ್ಮ ಪೂಜಾರ ಅವರು, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ರಸ್ತೆ ನಿರ್ಮಿಸಿಕೊಡುವ ಬಗ್ಗೆ ಉಮಚಗಿಯ ಗವಿಸಿದ್ದಪ್ಪ ಛಟ್ಟಿ ಅವರು ಮನವಿ ಸಲ್ಲಿಸಿದರು. ಪೂರ್ವ ಮುಂಗಾರು ಬರ ಘೋಷಣೆ ಮಾಡಬೇಕು ಎಂದು ಶರಣಪ್ಪ ಬಸಪ್ಪ ಅವರು, ಕೆಪಿಎಸ್ ಶಾಲೆಯ ಶಾಲಾ ಸುಧಾರಣಾ ಸಮಿತಿ ಸಭೆಯ ಕರೆಯುತ್ತಿಲ್ಲ ಎಂದು ಶರಣಪ್ಪ ಹ್ಯಾಟಿ ಅವರು, ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡಬೇಕು ಎಂದು ಈರಮ್ಮ ತೋಟದ ಅವರು, ಎನ್‌ಎಎಂಎಸ್ ಪರೀಕ್ಷೆಯ ಮರು ಅರ್ಜಿಯನ್ನು ನವೀಕರಣ ಮಾಡಿಲ್ಲ ಎಂದು ಮೈಲಾರಪ್ಪ ಕೀರ್ತಿಗೌಡ ಮತ್ತು ಜ್ಯೋತಿ ಕೊರವರ ಅವರು, ಮಂಗಳೂರ ಗ್ರಾಮದಲ್ಲಿ ಹೋಬಳಿ ಮಟ್ಟದ ಕ್ರೀಡಾಂಗಣ ನಿರ್ಮಿಸಬೇಕು ಎಂದು ಮಂಜುನಾಥ ವಿವೇಕಿ ಅವರು ಮನವಿ ಸಲ್ಲಿಸಿದರು. ಮನೇ ಮಂಜೂರಾತಿ ಮಾಡವೇಕು ಎಂದು ಸಂಗಮ್ಮ ಕಂಬಾರ ಅವರು, ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಸ್ಥಳ ನಿಗದಿ ಮಾಡಬೇಕು ಎಂದು ಜಾವೇದ್ ಬಾಷಾಸಾಬ್, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲನ್ನು ಅಗಲೀಕರಣ ಮಾಡಬೇಕು ಎಂದು ಮರಿಸ್ವಾಮಿ ಪೂಜಾರ ಅವರು, ಗಂಗಾ ಕಲ್ಯಾಣ ಯೋಜನೆಯ ಜಮೀನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಅಶೋಕ ದಳವಾಯಿ ಅವರು, ವಿಕಲಚೇತನ ಯಂತ್ರ ಚಾಲಿತ ದ್ವಿಚಕ್ರ ವಾಹನ ಕಲ್ಪಿಸಬೇಕು ಎಂದು ಚಾಂದಹುಸೇನ್ ಮಕನದಾರ ಅವರು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆವಿಮಾ ಪರಿಹಾರ ಒದಗಿಸಿಕೊಡಬೇಕು ಎಂದು ರುದ್ರಗೌಡ ಪಾಟೀಲ ಅವರು, ಹೊಲಕ್ಕೆ ಹೋಗಲು ಬಂಡಿ ಜಾಡು ನೀಡಬೇಕು ಎಂದು ಮೌಲಾಸಾಬ್ ವಣಗೇರಿ ಅವರು, ಸರ್ವೆ ನಂಬರ್ 230ಕ್ಕೆ ಹೋಗಲು ದಾರಿ ಮಾಡಿಕೊಡಬೇಕು ಎಂದು ಭೀಮಣ್ಣ ವಾಲ್ಮೀಕಿ ಅವರು ಮನವಿ ಸಲ್ಲಿಸಿದರು.

ಹಿರಿಯ ಪತ್ರಕರ್ತರ ಮನವಿ: ಜನಸ್ಪಂದನ ಉತ್ತಮ ಕಾರ್ಯಕ್ರಮವಾಗಿದೆ. ಇಲ್ಲಿ ಸಲ್ಲಿಕೆಯಾಗುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳಿಗೆ ಜಿಲ್ಲಾಡಳಿತದಿಂದ ಬೇಗನೇ ಸ್ಪಂದನೆ ಸಿಗಬೇಕು ಎಂದು ಹಿರಿಯ ಪತ್ರಕರ್ತರಾದ ಕೊಟ್ರಪ್ಪ ತೋಟದ ಅವರು ಸಲಹೆ ಮಾಡಿದರು. ಮಂಗಳೂರು ದೊಡ್ಡ ಊರು. ಇಲ್ಲಿ ವಿಸ್ತಾರವಾದ ರಸ್ತೆ ಆಗಬೇಕು. ಪರಿಶಿಷ್ಟ ಜಾತಿ ಸಮುದಾಯದ ಕಾಲೋನಿಗಳು ಸೇರಿದಂತೆ ಎಲ್ಲಾ ಕಡೆಗಿನ ಪ್ರಮುಖ ಒಳ ರಸ್ತೆಗಳ ಸುಧಾರಣೆಗೆ ಒತ್ತು ಕೊಡಬೇಕು ಎಂದು ಸಲಹೆ ಮಾಡಿದರು.

ಪ್ರಾಣಿವಧೆ ತಡೆಯಿರಿ: ಹುಲಿಗಿ ಸೇರಿದಂತೆ ವಿವಿಧೆಡೆ ಅವ್ಯಾಹತವಾಗಿ ನಡೆಯುವ ಪ್ರಾಣಿವಧೆಯನ್ನು ತಡೆಯಬೇಕು ಎಂದು ಮುಖಂಡರಾದ ಎಂ.ಬಿ.ಅಳವಂಡಿ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರರಾದ ಪ್ರಾಣೇಶ, ತಾಪಂ ಇಓ ಸಂತೋಷ ಬಿರಾದಾರ ಪಾಟೀಲ, ಕುಕನೂರ ಪಿಎಸ್‌ಐ ಗುರುರಾಜ, ಬೇವೂರ ಪಿಎಸ್‌ಐ ಪ್ರಾಶಾಂತ, ಗ್ರಾಮ ಪಂಚಾಯತಿಯ ಸದಸ್ಯರಾದ ಸಕ್ರಪ್ಪ ಚಿನ್ನೂರ, ಶರಣಪ್ಪ ಎಂ.ಎ ಹಾಗೂ ಇತರರು ಇದ್ದರು. ಮಂಗಳೂರ ಗ್ರಾಮದ ಪಿಡಿಓ ನೀಲಮ್ಮ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ವರದಿ : ಚೆನ್ನಯ್ಯ ಹಿರೇಮಠ್.

 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!