
ಬೀದಿ ಬದಿ ವ್ಯಾಪಾರಸ್ಥರಲ್ಲಿ ಒಡಕು ಮೂಡಿಸುತ್ತಿರುವ ಪುರಸಭೆಯ ಆಡಳಿತ ವರ್ಗದ ನೀತಿಗೆ ವಿರೋಧ.
ಗಜೇಂದ್ರಗಡ: ಸತ್ಯಮಿಥ್ಯ (ಜ -25).
ಪುರಸಭೆಯ ಅಧಿಕಾರಿಗಳ ಒಡೆದಾಳುವ ನೀತಿಯನ್ನು ಖಂಡಿಸಿ ನಗರದಲ್ಲಿಂದು ಬೀದಿ ಬದಿ ವ್ಯಾಪಾರಸ್ಥರು ದುರ್ಗಾ ಸರ್ಕಲ್ ನಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಸಭೆ ನಡೆಸಿದರು.
ಈ ವೇಳೆ ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ ನಗರದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ತಳ್ಳುವ ಗಾಡಿ ಹಾಗೂ ಗುರುತಿನ ಚೀಟಿಯನ್ನು ವಿತರಣೆ ಕಾರ್ಯಕ್ರಮವನ್ನು ಬೀದಿ ಬದಿ ವ್ಯಾಪಾರಸ್ಥರಿಗೆ ತಿಳಸದೆ ಹಮ್ಮಿಕೊಂಡಿರುವುದು ಸಂವಿಧಾನ ವಿರೋಧಿ ನೀತಿಯಾಗಿದೆ.
ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆಯ ಪ್ರಕಾರ ಒಂದು ವ್ಯಾಪಾರಸ್ಥರ ಸಮಿತಿ ಹಾಗೂ ಕುಂದು ಕೊರತೆಗಳ ಸಮಿತಿ ರಚನೆ ಮಾಡಬೇಕಿತ್ತು ಆದರೆ ಇದನ್ನು ರಚಿಸದೆ ಕಾಯಿದೆ ಉಲ್ಲಂಘಿಸಿ ಕಾರ್ಯಕ್ರಮ ಮಾಡುತ್ತಿರುವುದು ಖಂಡನೀಯ. ಬೀದಿ ಬದಿ ವ್ಯಾಪಾರಸ್ಥರು ಕಳೆದ 3 ತಿಂಗಳಿಂದ ಅವರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದು ಹೋರಾಟಕ್ಕೆ ಮಾನ್ಯ ಮುಖ್ಯಾಧಿಕಾರಿಗಳು ಪುರಸಭೆ, ಮಾನ್ಯ ತಹಶಿಲ್ದಾರರು, ಹಾಗೂ ಪೋಲಿಸ್ ಅಧಿಕಾರಿಗಳು ಸೇರಿ ಹೋರಾಟಗಾರರ ಜೊತೆಗೆ ಜಂಟಿ ಸಭೆ ಮಾಡಿ 31/01/2025 ರಂದು ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೆವೆಂದು ಲಿಖಿತ ಭರವಸೆ ನೀಡಿ ಹೋರಾಟ ಹಿಂಪಡೆಯಲು ಹೇಳಿದ್ದರು.
ಅದರಂತೆ ನಾವು ಹೋರಾಟವನ್ನು ಹಿಂಪಡೆದುಕೊಂಡೆವು ಆದರೆ ಪುರಸಭೆ ಆಡಳಿತ ಹಾಗೂ ಸ್ಥಳೀಯ ಈ ಕ್ಷೇತ್ರದ ಶಾಸಕರು ಕೂಡಿಕೊಂಡು ಕೆಲವೇ ಕೆಲವು ಬೀದಿ ಬದಿ ವ್ಯಾಪಾರಸ್ಥರಿಗೆ ತಳ್ಳುಗಾಡಿ ಹಾಗೂ ಗುರುತಿನ ಚೀಟಿ ವಿತರಣೆ ಮಾಡುವ ಮೂಲಕ ಬೀದಿ ಬದಿ ವ್ಯಾಪಾರಸ್ಥರಲ್ಲಿ ಒಡಕು ಉಂಟುಮಾಡುತ್ತಿದ್ದಾರೆ.
ಇದನ್ನು ನಾವು ವಿರೋಧಿಸುತ್ತೇವೆ ಇದರಲ್ಲಿ ಯಾವುದೇ ಬೀದಿ ಬದಿ ವ್ಯಾಪಾರಸ್ಥ ಸದಸ್ಯರು ಭಾಗವಹಿಸಬಾರದೆಂದು ಬಹಿಷ್ಕರಿಸಿದ್ದೇವೆ. ಎಲ್ಲಾ ಬೀದಿ ಬದಿ ವ್ಯಾಪಾರಸ್ಥರಿಗೆ ತಳ್ಳುವ ಗಾಡಿ ಹಾಗೂ ಗುರುತಿನ ಚೀಟಿ ಹಾಗೂ ಸ್ಥಳವನ್ನು ಗುರುತಿಸಿ ನೆಮ್ಮದಿಯಿಂದ ವ್ಯಾಪಾರ ಮಾಡಿಕೊಳ್ಳಲಿಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಅಧ್ಯಕ್ಷರಾದ ಶಾಮೀದ ಅಲಿ ದಿಂಡವಾಡ ಅವರು ಮಾತನಾಡಿ ಬೀದಿ ಬದಿ ವ್ಯಾಪಾರಸ್ಥರು ಯಾವುದೇ ಗೊಂದಲಕ್ಕೆ ಹೋಗದೆ ಸಮಾಧಾನದಿಂದ ಇರಬೇಕು ಹಾಗೂ ನಮಗೆ ಕೊಟ್ಟ ದಿನಾಂಕ 31/01/2025 ರಂದು ನಮಗೆ ಗುರುತಿನ ಚೀಟಿ ಹಾಗೂ ಸ್ಥಳ ಹಾಗೂ ತಳ್ಳುವ ಗಾಡಿಗಳನ್ನು ವಿತರಣೆ ಮಾಡಬೇಕು ಬೀದಿ ಬದಿ ವ್ಯಾಪಾರಸ್ಥರ ಮಧ್ಯ ಒಣ ರಾಜಕಾರಣವನ್ನು ಬೆರೆಸಬಾರದು ನಮ್ಮ ಬೇಡಿಕೆಗಳು ಗಜೇಂದ್ರಗಡ ನಗರದ ಜನರ ಬೇಡಿಕೆ ಆಗಿದೆ ಜನರು ಕೂಡಾ ನಮ್ಮ ಹೋರಾಟಕ್ಕೆ ಬೆಂಬಲವನ್ನು ಕೋಡುತ್ತಿದ್ದಾರೆ. ಮಾನ್ಯ ಶಾಸಕರು ಕೇವಲ ಮುಂದಾಳುಗಳ ಮಾತು ಕೇಳಿ ಜನರಿಗೆ ವಿರೋಧವಾದ ಆಡಳಿತ ಮಾಡುವುದು ಸರಿಯಲ್ಲಾ ಹೀಗೆ ಮುಂದುವರಿದರೆ ಸುಪ್ರೀಂ ಕೋರ್ಟ್ ಆದೇಶ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಕಾಯಿದೆ ಅಡಿಯಲ್ಲಿ ನಾವು ಕಾನೂನು ಮೋರೆ ಹೋಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಬಾಲು ರಾಠೋಡ ಮಾತನಾಡಿ ಬೀದಿ ಬದಿಯ ವ್ಯಾಪಾರಸ್ಥರು ಹೋರಾಟ ಮಾಡಿದ ಭಾಗವಾಗಿ ಅಧಿಕಾರಿಗಳು ಜಂಟಿ ಸಭೆ ಮಾಡಿ ದಿನಾಂಕ ಜನವರಿ ೩೧ ರಂದು ನಿರ್ಣಯಿಸುತ್ತೇವೆ ಎಂದಿದ್ದರು ಆದರೆ ಈಗ ಸಭೆ ಮಾಡುವ ಮುನ್ನವೇ ತಳ್ಳುವ ಗಾಡಿ ಹಾಗೂ ಗುರುತಿನ ಚೀಟಿ ವಿತರಣೆ ಮತ್ತು ಸ್ಥಳವನ್ನು ಗುರುತಿಸುವಾಗ, ಸಿಐಟಿಯು ಸಂಘಟನೆ ಸಂಯೋಜಿತ ಸಂಘವಾದ ಬೀದಿ ಬದಿ ವ್ಯಾಪಾರಸ್ಥರ ಸಂಘವನ್ನು ದೂರ ಇಟ್ಟು ಕೆಲಸ ಮಾಡುತ್ತಿರುವುದು ಖಂಡನೀಯ ಹಾಗೂ ಮುಂಬೈಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಇದೆ ರೀತಿ ತೊಂದರೆ ಕೊಟ್ಟಾಗ 2004 ರಲ್ಲಿ ಮುಂಬೈ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ಜಾರಿಗೊಳಿಸಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಮರೇಶ ಚವ್ಹಾಣ, ಮುತ್ತು ರಾಠೋಡ, ಮಂಜುಳಾ ಪವಾರ, ಚೌಡಮ್ಮ ಯಲ್ಪೊ, ರೇಣವ್ವ ರಾಠೋಡ, ಅನ್ವರ್ ಹೀರೆಕೊಪ್ಪ, ವಿಷ್ಣು ಚಂದನಕರ್, ಕಳಕೇಶ ಮಾಳೋತ್ತರ, ದಾನಪ್ಪ ರಾಠೋಡ, ಮುತ್ತಣ್ಣ ರಾಠೋಡ, ಬಾಷಾಸಾಬ್ ಮಾಲಾದ್ದಾರ್, ಶಂಕರಪ್ಪ ಪಾತರೊಟ್ಟಿ, ಮಾರುತಿ ಗೊಂದೆ, ರೇಣವ್ವ ಕಲಾಲ, ಬಸಮ್ಮ ಕಾಟಾಪುರ, ಹಸೀನಾ ಬೇಗಂ ಬಳ್ಳೊಳ್ಳಿ, ನಾಗರಾಜ ದಿವಾನದ್, ಗಂಗವ್ವ ಸವನೂರು, ಕಾಳವ್ವ ಚವ್ಹಾಣ, ಪಾರವ್ವ ಪಮ್ಮಾರ್, ಶಾರವ್ವ ರಾಠೋಡ, ಜ್ಯೋತಿ ಜಾಟೋತ್ತರ, ಲಕ್ಷ್ಮವ್ವ ಪಮ್ಮಾರ್, ಶಾರದಾ ಮಾಳೋತ್ತರ, ಸುನೀಲ್ ಕುಂಬಾರ್, ಸುರೇಶ ಅಕ್ಕಸಾಲಿಗ, ಪಿರೋಜಾ ಮತ್ತು ಇತರರು ಹಾಜರಿದ್ದರು.
ವರದಿ : ಚನ್ನು. ಎಸ್.