ವಾರದ ಅತಿಥಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ – ಶಾಲಾ ಅಭಿವೃದ್ಧಿಗೆ ₹5,000 ದೇಣಿಗೆ
ವಾರದ ಅತಿಥಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ – ಶಾಲಾ ಅಭಿವೃದ್ಧಿಗೆ ₹5,000 ದೇಣಿಗೆ

ಮೂಡಲಗಿ : ಸತ್ಯಮಿಥ್ಯ (ಜು -04)
ಸಮೀಪದ ಜೋಕಾನಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯೋಗಿಸಿದ್ದೇಶ್ವರ ತೋಟದಲ್ಲಿ ಆಯೋಜಿಸಲಾಗಿದ್ದ ವಾರದ ಅತಿಥಿ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ. ವಿಶ್ವನಾಥ್ ಹುದ್ದಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಡಾ. ವಿಶ್ವನಾಥ್ ಅವರು ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ವಿಧಾನಗಳು, ಸ್ವಚ್ಛತೆ, ಪೌಷ್ಟಿಕ ಆಹಾರದ ಮಹತ್ವ ಹಾಗೂ ರೋಗಗಳ ತಡೆಗಟ್ಟುವಿಕೆ ಕುರಿತು ಉಪಯುಕ್ತ ಆರೋಗ್ಯ ಸಲಹೆಗಳನ್ನು ನೀಡಿದರು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.

ಶಾಲೆಯ ಅಭಿವೃದ್ಧಿಗೆ ತಮ್ಮ ಸಾಮಾಜಿಕ ಕಳಕಳಿಯ ಸಂಕೇತವಾಗಿ ಡಾ. ವಿಶ್ವನಾಥ್ ಅವರು ₹5,000 ದೇಣಿಗೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಈರಣ್ಣ ನಿಡುಗುಂದಿ ಮಾತನಾಡಿ, “ವಿದ್ಯಾರ್ಥಿಗಳು ಆರೋಗ್ಯವಂತರಾಗಿರಲು ವೈದ್ಯರ ಸಲಹೆ ಹಾಗೂ ನಿಯಮಿತ ಆರೋಗ್ಯ ತಪಾಸಣೆ ಅತ್ಯಂತ ಮುಖ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತವೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನ ಗುರುಮಾತೆ, ಸಿಬ್ಬಂದಿ ವರ್ಗ, ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಸುಲ್ತಾನಪುರ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಯಶ್ರೀ ಪೂಜೆರಿ ನಿರೂಪಿಸಿದರು, ಚೈತ್ರ ಗಿರೆನ್ನವರ ವಂದಿಸಿದರು.
ವರದಿ : ಶಿವಾನಂದ ಮುಧೋಳ



