
ಮಂಗಳೂರಿನಲ್ಲಿ ಮಕ್ಕಳ ಹಕ್ಕು, ಮಕ್ಕಳ ಪರವಾದ ಕಾನೂನುಗಳ ಜಾಗೃತಿ
ಕುಕನೂರು:ಸತ್ಯಮಿಥ್ಯ ( ಜುಲೈ -24)
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಂಗಳೂರು ಗ್ರಾಮ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಪರವಾದ ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮವು ಜುಲೈ 23ರಂದು ಕುಕನೂರ ತಾಲೂಕಿನ ಮಂಗಳೂರು ಗ್ರಾಮದಲ್ಲಿನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆಯಿತು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಹಾಂತಸ್ವಾಮಿ ಪೂಜಾರ ಅವರು ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯವಿವಾಹ ಮಾಡಲು ತಯಾರಿ ಮಾಡಿದ ಬಗ್ಗೆ ಮಾಹಿತಿಯು ಮಕ್ಕಳ ಸಹಾಯವಾಣಿ-1098ಗೆ ಬರುತ್ತಿವೆ. ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವು (ಪ್ರಕರಣ ಸಂಖ್ಯೆ 382-2013ರಲ್ಲಿ) ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗಿನ ಲೈಂಗಿಕ ಚಟುವಟಕೆಗಳು ಸಹ ಲೈಂಗಿಕ ಅಪರಾಧಗಳೆಂದು ಪರಿಗಣಿಸುವಂತೆ ಆದೇಶಿಸಿದೆ. ಯಾರೂ ಸಹ ಬಾಲ್ಯವಿವಾಹವನ್ನು ಮಾಡಬಾರದು. ಒಂದು ವೇಳೆ ಅಪ್ರಾಪ್ತ ವಯಸ್ಸಿನ ಬಾಲಕಿಯು ಬಾಲ್ಯವಿವಾಹದಿಂದಲೇ ಗರ್ಭಿಣಿಯಾದಲ್ಲಿ, ಅಂತಹ ಬಾಲಕಿಯನ್ನು ಮದುವೆಯಾದ ಪುರುಷ, ಬಾಲಕಿಯ ಮತ್ತು ಪುರುಷನ ತಂದೆ-ತಾಯಿಗಳ ವಿರುದ್ದ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ಮತ್ತು ತಿದ್ದುಪಡಿ ಕಾಯ್ದೆ-2019ರನ್ವಯ ಪ್ರಕರಣ ದಾಖಲಾಗುತ್ತದೆ. ಬಾಲ್ಯವಿವಾಹಗಳಲ್ಲಿ ಭಾಗವಹಿಸಬಾರದು. ಬಾಲ್ಯವಿವಾಹ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತಲ್ಲಿ, ಕೂಡಲೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಬೇಕು. ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿವಲೀಲಾ ವನ್ನೂರು ಅವರು ಮಾತನಾಡಿ, ರಾಜ್ಯವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸುವ ಹಿನ್ನಲೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ-2006ನ್ನು ಜಾರಿಗೆ ತಂದಿದ್ದು, ಈ ಕಾಯ್ದೆಯನ್ನು ಕರ್ನಾಟಕ ರಾಜ್ಯ ಸರಕಾರವು ತಿದ್ದುಪಡಿಯನ್ನು-2016ರಲ್ಲಿ ಮಾಡಿದೆ. ಇದರನ್ವಯ 03 ಮಾರ್ಚ 2018ರ ನಂತರದ ಎಲ್ಲಾ ಬಾಲ್ಯವಿವಾಹಗಳು ಅಸಿಂಧು ವಿವಾಹಗಳಾಗಿವೆ. ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕವು ಶಿಕ್ಷಾರ್ಹ ಅಪರಾಧವಾಗಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ರನ್ವಯ ಕನಿಷ್ಠ 10 ವರ್ಷಗಳ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಈರೇಶಪ್ಪ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೆಹಬೂಬ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕ ರವಿ ಬಡಿಗೇರ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ : ಚೆನ್ನಯ್ಯ ಹಿರೇಮಠ.