ವೀರರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿ ತೆರವಿಗೆ ಮುಂದಾದ ತಾಲೂಕಾಡಳಿತ – ಸಾರ್ವಜನಿಕರ ತೀವ್ರ ಆಕ್ರೋಶ, ಅಧಿಕಾರಿಗಳ ಅಮಾನತ್ತಿಗೆ ಆಗ್ರಹ

ಗಜೇಂದ್ರಗಡ: ತಡರಾತ್ರಿ ವೀರರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿ ತೆರವು ಕಾರ್ಯಾಚರಣೆ – ಸಾರ್ವಜನಿಕರ ತೀವ್ರ ಆಕ್ರೋಶ, ಮಾಜಿ ಸಚಿವ ಕಳಕಪ್ಪ ಬಂಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಸತ್ಯಮಿಥ್ಯ ಸುದ್ದಿಮೂಲ ಗಜೇಂದ್ರಗಡ:
ನಗರದ ಕುಷ್ಟಗಿ ರಸ್ತೆಯಲ್ಲಿರುವ ಐತಿಹಾಸಿಕ ಚೆನ್ನಮ್ಮ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮನವರ ಮೂರ್ತಿಯನ್ನು ತಡರಾತ್ರಿ ಅಧಿಕಾರಿಗಳು ತೆರವುಗೊಳಿಸಲು ಮುಂದಾದ ಘಟನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ತಹಸೀಲ್ದಾರ್, ಪುರಸಭೆ ಮುಖ್ಯಧಿಕಾರಿ ಹಾಗೂ ಪಿಎಸ್ಐ ಅವರ ನಡೆ ಖಂಡಿಸಿ ನಾಗರಿಕರು ಹಾಗೂ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ಆರಂಭಿಸಿವೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಕಳಕಪ್ಪ ಬಂಡಿ ಅವರು ಪ್ರತಿಭಟನೆಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಅವರೊಂದಿಗೆ ಕನ್ನಡ ಪರ ಹಾಗೂ ದಲಿತ ಪರ ಸಂಘಟನೆಗಳು ಸಾಥ್ ನೀಡಿದ್ದು, ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

ಅಧಿಕಾರಿಗಳ ನಡೆ ಮೂರ್ಖತನದ ಪರಮಾವಧಿ: ಕಳಕಪ್ಪ ಬಂಡಿ ಆಕ್ರೋಶ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕಳಕಪ್ಪ ಬಂಡಿ, “ಮೇಲಧಿಕಾರಿಗಳ ಒತ್ತಡದಿಂದ ಮೂರ್ತಿ ತೆರವುಗೊಳಿಸುತ್ತಿದ್ದೇವೆ ಎಂದು ಹೇಳುವ ಅಧಿಕಾರಿಗಳು, ಆ ಮೇಲಧಿಕಾರಿ ಯಾರೆಂಬುದನ್ನು ಬಹಿರಂಗಪಡಿಸಬೇಕು. ಈ ವೃತ್ತಕ್ಕೆ ರಾಣಿ ಚೆನ್ನಮ್ಮ ವೃತ್ತ ಎಂದು ನಾಮಕರಣ ಮಾಡಿದ್ದು ಯಾವುದೇ ಮಂತ್ರಿ ಅಥವಾ ಮುಖ್ಯಮಂತ್ರಿಯಲ್ಲ. ಸುಮಾರು 40 ವರ್ಷಗಳ ಹಿಂದೆ ಜನಸಾಮಾನ್ಯರ ಅಭಿಪ್ರಾಯದಂತೆ ಈ ಹೆಸರು ಬಂದಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿಯೂ ಸಾರ್ವಜನಿಕರು ತಮ್ಮ ಸ್ವಂತ ಹಣದಿಂದ ಈ ವೃತ್ತವನ್ನು ನಿರ್ಮಿಸಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಾಣಿಯ ಮೂರ್ತಿಯನ್ನು ಹೀಗೆ ರಾತ್ರೋರಾತ್ರಿ ತೆರವುಗೊಳಿಸಲು ಬಂದಿದ್ದು ಮೂರ್ಖತನದ ಪರಮಾವಧಿ. ಅಧಿಕಾರಿಗಳ ಈ ನಡೆ ಸರ್ಕಾರಕ್ಕೆ ಕಳಂಕ ತಂದಿದೆ. ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಹೋರಾಟ ಹಿಂಪಡೆಯುವುದಿಲ್ಲ” ಎಂದು ಎಚ್ಚರಿಸಿದರು.

ಕೊಟ್ಟ ಮಾತು ತಪ್ಪಿದ ಅಧಿಕಾರಿಗಳು: ಪ್ರಭು ಚವಡಿ ಆರೋಪ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕಾ ಅಧ್ಯಕ್ಷ ಮುಖಂಡ ಪ್ರಭು ಚವಡಿ ಮಾತನಾಡಿ, “ನಿನ್ನೆ ನಡೆದ ಸಭೆಯಲ್ಲಿ ಕ್ಷೇತ್ರದಲ್ಲಿ ಶಾಸಕರು ಹಾಗೂ ಮಾಜಿ ಶಾಸಕರು ಊರಿನಲ್ಲಿ ಇಲ್ಲದ ಕಾರಣ, ನಾಲ್ಕು ದಿನ ಸಮಯ ಕೇಳಲಾಗಿತ್ತು. ಅವರು ಬಂದ ನಂತರ ಚರ್ಚಿಸಿ, ಅಗತ್ಯ ಪರವಾನಗಿ ಪಡೆದು ಉದ್ಘಾಟಿಸುವುದೋ ಅಥವಾ ಮುಂದಿನ ಕ್ರಮ ಕೈಗೊಳ್ಳುವುದೋ ಎಂದು ತೀರ್ಮಾನಿಸುವುದಾಗಿ ಒಪ್ಪಿಕೊಳ್ಳಲಾಗಿತ್ತು. ಆದರೆ, ಅಧಿಕಾರಿಗಳು ಆ ಮಾತನ್ನು ಗಾಳಿಗೆ ತೂರಿ ರಾತ್ರೋರಾತ್ರಿ ಕಾರ್ಯಾಚರಣೆಗೆ ಇಳಿದಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಬರಲು 4 ಗಂಟೆ ಕಾಲಾವಕಾಶ ಕೇಳಿದ ಅಧಿಕಾರಿಗಳು
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ, ಪ್ರತಿಭಟನಾ ನಿರತರನ್ನು ಶಾಂತಗೊಳಿಸಲು ಪ್ರಯತ್ನಿಸಿದ ಅಧಿಕಾರಿಗಳು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳಕ್ಕೆ ಕರೆಸಲು 4 ಗಂಟೆಗಳ ಕಾಲಾವಕಾಶ ಕೋರಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಧಾವಿಸುತ್ತಿದ್ದು, ಚನ್ನಮ್ಮ ವೃತ್ತದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ.




