
ಹಂಡೇವಜೀರ” ಸಮಾಜದ ವಿದ್ಯಾರ್ಥಿಗಳಿಗೆ 2ಎ ಜಾತಿ-ಆದಾಯ ಪ್ರಮಾಣ ಪತ್ರ ನೀಡಲು ಆಗ್ರಹ

ಎಸ್ ಎಫ್ ಐ ಸಂಘಟನೆ ಮತ್ತು ಪಾಲಕರಿಂದ ಹೋರಾಟ.
ಗಜೇಂದ್ರಗಡ:ಸತ್ಯಮಿಥ್ಯ (ಎ -22)
“ಹಂಡೇವಜೀರ್” ಸಮಾಜದ ವಿದ್ಯಾರ್ಥಿಗಳು, ಪಾಲಕರು ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ಗಜೇಂದ್ರಗಡ ತಾಲೂಕು ಸಮಿತಿಯ ನೇತೃತ್ವದಲ್ಲಿ ಇಂದು ತಹಶಿಲ್ದಾರರ ಕಚೇರಿ ಎದುರು 2A ಜಾತಿ ಪ್ರಮಾಣ ಪತ್ರ ನೀಡಲು ಒತ್ತಾಯಿಸಿ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಎಸ್ ಎಫ್ ಐ ನ ರಾಜ್ಯ ಉಪಾಧ್ಯಕ್ಷರಾದ ಗಣೇಶ್ ರಾಠೋಡ ಮಾತನಾಡಿ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿ ಸುಮಾರು ನೂರಾರು ಕುಟುಂಬಗಳು “ಹಂಡೇವಜೀರ” ಎಂಬ ಹಿಂದೂ ಲಿಂಗಾಯತ/ ಲಿಂಗವಂತ ಜಾತಿಯ ಉಪಜಾತಿಗೆ ಸೇರಿದವರಾಗಿರುತ್ತಾರೆ. “ಹಂಡೇವಜೀರ” ಎಂಬ ಉಪಜಾತಿಗೆ ಸೇರಿದ ಜನರು ನೂರಾರು ವರ್ಷಗಳಿಂದಲೂ ಕೂಡಾ ಗದಗ ಜಿಲ್ಲೆಯ ಅಖಂಡ ರೋಣ ತಾಲ್ಲೂಕಿನಲ್ಲಿ ವಾಸಿಸುತ್ತಿದ್ದಾರೆ. ಇವರ ಕುಟುಂಬಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಹಿಂದುಳಿದಿರುತ್ತದೆ ಅದನ್ನು ಪರಿಗಣಿಸಿ ರಾಜ್ಯ ಸರ್ಕಾರ “ಹಂಡೇವಜೀರ” ಉಪಜಾತಿಗೆ ಸೇರಿದ ಸಮುದಾಯದವರಿಗೆ ಪ್ರವರ್ಗ ೨ಎ ಎಂದು ವರ್ಗೀಕರಣ ಮಾಡಿ ಪ್ರಮಾಣಪತ್ರವನ್ನು ಒದಗಿಸುತ್ತಾ ಬಂದಿದೆ. ಕಳೆದ ೩೦ ವರ್ಷಗಳಿಂದಲೂ ಕರ್ನಾಟಕ ಸರ್ಕಾರ ರಾಜ್ಯ ಪತ್ರ ಆದೇಶ ಅನುಸಾರದಲ್ಲಿ ಬರುವ ಉಪ ಜಾತಿ ಕ್ರಮ ಸಂಖ್ಯೆ 37ರಲ್ಲಿ ಹಿಂದೂ ಲಿಂಗಾಯತ/ ಲಿಂಗವಂತ ಉಪಜಾತಿಗೆ ಸೇರಿದ “ಹಂಡೆವಜೀರ” ಸಮಾಜಕ್ಕೆ 2ಎ ಜಾತಿ ಪ್ರಮಾಣಪತ್ರವನ್ನು ಒದಗಿಸುತ್ತಾ ಬಂದಿದ್ದಾರೆ ಅದರ ಭಾಗವಾಗಿ ಈ ಸಮಾಜದ ವಿದ್ಯಾರ್ಥಿಗಳು ಆ ಮೀಸಲಾತಿ ಪಡೆದು ಶಿಕ್ಷಣ ಮತ್ತು ಉದ್ಯೋಗ ಪಡೆದಿದ್ದಾರೆ. ಗಜೇಂದ್ರಗಡದಲ್ಲೂ ತಹಶಿಲ್ದಾರರು ಕಳೆದ ಎರಡೂ ವರ್ಷಗಳ ಹಿಂದೆ ಇದೆ ಪ್ರಮಾಣ ಪತ್ರ ನೀಡಿದ್ದಾರೆ.
ಆದರೆ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡಿ ಸಮಾಜವನ್ನು ಗುರಿ ಮಾಡಿ ಜಾತಿ-ಆದಾಯ ಪ್ರಮಾಣ ಪತ್ರ ನೀಡದೆ, ಒಪ್ಪಿತವಲ್ಲದ ಕಾರಣಗಳನ್ನು ಕೊಟ್ಟು ಅರ್ಜಿಗಳನ್ನು ತಿರಸ್ಕರಿಸೋದು ಮತ್ತು ಆ ಸಮುದಾಯದ ಅರ್ಜಿಯನ್ನೇ ಸ್ವೀಕರಿಸಲು ನಿರಾಕರಿಸೋದು ಅಧಿಕಾರಶಾಹಿ ಧರ್ಪ ಅಲ್ಲದೇ ಮತ್ತೇನೆ? ಎಂಬ ಪ್ರಶ್ನೆ ಕಾಡುತ್ತದೆ.
ಇದು ಒಂದು ರೀತಿಯ ನಿರಾಕರಣೆ ಎಂಬ ಅಸ್ಪೃಶ್ಯತೆಯನ್ನು ತೋರುತ್ತದೆ. ಸರ್ಕಾರಿ ಅಧಿಕಾರಿಯಾಗಿ ಸಾರ್ವಜನಿಕ ಹಿತ ಕಾಪಾಡುವುದು, ಸರ್ಕಾರದ ಸೇವೆ ಜನರಿಗೆ ತಲುಪಿಸುವುದು ಆದ್ಯ ಕರ್ತವ್ಯ ಆಗಿರಬೇಕು ಎಂದು ಆಗ್ರಹಿಸಿದರು.

ನಂತರ ಎಸ್ ಎಫ್ ಐನ ಜಿಲ್ಲಾಧ್ಯಕ್ಷರಾದ ಚಂದ್ರು ರಾಠೋಡ ಮಾತನಾಡಿ ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿರುವ ವೀರಶೈವ ಲಿಂಗಾಯತ ಜಾತಿ ಮತ್ತು ಉಪಜಾತಿಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ನೀಡಿರುವ ಪ್ರಸ್ತಾವನೆಯು ಕೇಂದ್ರ ಸರ್ಕಾರದ ಶಿಪಾರಸ್ಸಿಗೆ ಪರಿಶೀಲನೆಯಲ್ಲಿರುತ್ತದೆ. ಎಂಬ ಮಾಹಿತಿಯನ್ನು ಮಾನ್ಯ ವಿಧಾನ ಸಭೆ ಸದಸ್ಯರ ಚುಕ್ಕಿ ಗುರುತಿಲ್ಲದ ಸಂಖ್ಯೆ 1699 ಹಿಂವಕ 172 ಬಿಸಿಎ 2022 ಉ) ವಿಧಾನ ಸಭೆಯಲ್ಲಿ ಸದಸ್ಯರು ಕೇಳಿದಾಗ ಸರ್ಕಾರವೇ ನೀಡದ ಉತ್ತರ ಈ ಮೇಲಿನಂತೆ ಇತ್ತು. ತಾವುಗಳು ಈ ಕುರಿತು ಹಿಂಬರಹ ಒದಗಿಸಿದ್ದಿರಿ. ಈ ಪ್ರಸ್ತಾವನೆ ಹೋದ ನಂತರವೂ ರಾಜ್ಯದಲ್ಲಿ ಹಿಂದು ಲಿಂಗಾಯತಗೆ ಸೇರಿದ ಕೆಲ ಉಪ ಜಾತಿಗಳಿಗೆ ೨ಎ ಮೀಸಲಾತಿ ಜಾತಿ ಪ್ರಮಾಣ ಪತ್ರವನ್ನು ಕಲ್ಪಿಸಲಾಗಿದೆ. ಆದರೆ ಕೇವಲ “ಹಂಡೇವಜೀರ” ಸಮುದಾಯವನ್ನು ಮಾತ್ರ ಈ ರೀತಿ ಗುರಿಯಾಗಿಸಿ ಕೇಂದ್ರ ಸರ್ಕಾರದ ಶಿಪಾರಸ್ಸಿಗೆ ಪ್ರಸ್ತಾವನೆ ಹೋಗಿದೆ. ಆ ಶಿಪಾರಸ್ಸು ಬರೋತನಕ ಜಾತಿ-ಆದಾಯ ಪ್ರಮಾಣ ಪತ್ರ ನೀಡಲ್ಲ ಎನ್ನುವುದು ಸರಿಯಾದ ಕ್ರಮವಲ್ಲ. ಪಕ್ಕದ ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಷ್ಟಗಿ ತಾಲೂಕಿನಲ್ಲಿರುವ ನಮ್ಮ ಸಂಬಂಧಿಸಿಕರು ಈ ಜಾತಿ- ಆದಾಯ ಪ್ರಮಾಣ ಪತ್ರ ಪಡೆಯುತಿದ್ದು ನಮಗೆ ನಿರಾಕರಣೆ ಮಾಡಲಾಗುತಿದೆ. ತಹಶಿಲ್ದಾರರಿಗೆ ಸಂದೇಹ ಇದ್ದರೆ ಅವರ ತಂದೆ ದಾಖಲೆ ಪಡೆಯಲಿ ಆದರೆ 1993 ರ ನಂತರವೇ ಈ ಹಂಡೇವಜೀರ ಜಾತಿ ಕಾಲಂನಲ್ಲಿ ಹೆಚ್ಚು ಬಳಕೆಗೆ ಬಂದಿರೋದು ಇದಕ್ಕೂ ಮೊದಲು ಇವರು ಹಿಂದೂ ಲಿಂಗಾಯತ ಎಂದೆ ಜಾತಿ ಕಾಲಂನಲ್ಲಿ ಇರೋದರಿಂದ ಇಂತಹ ಪ್ರಕರಣಗಳಲ್ಲಿ ಸ್ಥಾನಿಕ ಚೌಕಾಸಿ ‘ಮಹಜರ್’ ಮಾಡಿ ಜಾತಿ-ಆದಾಯ ಪ್ರಮಾಣ ಪತ್ರ ನೀಡಲು ಅವಕಾಶವಿದೆ ಆದರೆ ಅದನ್ನು ಮಾಡದೆ ವಿನಾಕಾರಣ ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿರುವುದು ಉದ್ದೇಶ ಪೂರ್ವಕವಾಗಿ ಈ ಸಮುದಾಯವನ್ನು ಗುರಿ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ದೂರಿದರು.
ಅಂದಪ್ಪ, ಚಂದ್ರು, ಶರಣಪ್ಪ, ಕಳಕನಗೌಡ ಸಮಾಜದ ಮುಖಂಡರು ಮತ್ತು ವಿದ್ಯಾರ್ಥಿಗಳು ಹೋರಾಟವನ್ನು ಉದ್ದೇಶಿಸಿ ಮಾತನಾಡಿದರು.ಒಂದು ಕ್ಷುಲ್ಲಕ ಕಾರಣಕ್ಕಾಗಿ ಸುಮಾರು ಎರಡು ವರ್ಷಗಳಿಂದ ಇಡೀ ಸಮುದಾಯವನ್ನು ಗರಿಯಾಗಿಸಿ ಜಾತಿ-ಆದಾಯ ಪ್ರಮಾಣ ಪತ್ರ ನೀಡಲು ಮತ್ತು ನವೀಕರಿಸಲು ಅರ್ಜಿ ಸಲ್ಲಿಸಿದರೆ ಮಾನ್ಯ ತಾಲೂಕು ತಹಶೀಲ್ದಾರರು ಅರ್ಜಿಗಳನ್ನು ರದ್ದುಗೊಳಿಸುತ್ತಿದ್ದಾರೆ. ವಿನಾ ಕಾರಣ ಹೀಗೆ ಕರ್ತವ್ಯ ಲೋಪ ಮಾಡುತ್ತಿರುವ ತಹಶಿಲ್ದಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಈ ಹೋರಾಟದ ಮೂಲಕ ಸಂಘಟಕರು ಒತ್ತಾಯಿಸಿದರು.
ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ರೋಣ ತಾಲ್ಲೂಕಿನ ತಹಶಿಲ್ದಾರರಾದ ನಾಗರಾಜ ಕೆ ಅವರ ಮಾತನಾಡಿ ಈಗ ಗಜೇಂದ್ರಗಡ ತಹಶಿಲ್ದಾರರು ರಜೆ ಇರುವ ಕಾರಣ ಇಲ್ಲಿ ನನಗೆ ಪ್ರಬಾರಿ ಜವಾಬ್ದಾರಿ ಇದೆ ಸರ್ಕಾರದ ಸುತ್ತೋಲೆ ಆದೇಶಗಳನ್ನು ಆದರಿಸಿ ನಾವು ಪ್ರಮಾಣ ಪತ್ರ ನೀಡುತ್ತವೆ ಈ ಪ್ರತಿಭಟನೆಯ ಮೂಲಕ ಸ್ಥಾನಿಕ ಚೌಕಾಸಿ ಮಹಜರ್ ಮಾಡಲು ಕೇಳಿದ್ದಿರಿ.ತಲಾಠಿ ಮತ್ತು ಆರ್,ಐ ಅವರಿಗೆ ಸ್ಥಾನಿಕ ಚೌಕಾಸಿ ‘ಮಹಜರ್’ ಮಾಡಲು ಆದೇಶ ಮಾಡುತ್ತೆನೆ ಮತ್ತು ಸರ್ಕಾರ ಮಟ್ಟದ ನಿಮ್ಮ ಮನವಿಯನ್ನು ತಲುಪಿಸುತ್ತೆನೆ ಎಂದು ಭರವಸೆ ನೀಡಿದ ಮೇಲೆ ಮನವಿ ನೀಡಿ ಹೋರಾಟವನ್ನು ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಎಸ್ ಎಫ್ ಐ ನ ಮುಖಂಡರಾದ ಅನಿಲ್ ಆರ್, ಶರಣು ಎಂ, ಗುರು ಕಿರಣ, ಕೆಪಿಆರ್ ಎಸ್ ರೈತ ಮುಖಂಡರಾದ ರೂಪಲೇಶ, ಚನ್ನಪ್ಪ, ಸಿಐಟಿಯು ಕಾರ್ಮಿಕ ಮುಖಂಡರಾದ ಮೈಬೂ ಹವಾಲ್ದಾರ್, ಹಂಡೇವಜೀರ ಸಮುದಾಯದ ಮುಖಂಡರಾದ ನೂರಾರು ಜನ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ವರದಿ : ಸುರೇಶ ಬಂಡಾರಿ.




