
ಕೆಲವೊಂದು ಸಂಬಂಧಗಳು ಮುಖವಾಡವಿದ್ದಂತೆ: ಮೇಲೆ ಸಿಂಪತಿ – ಒಳಗೆ ಕಿತಾಪತಿ.

ಕೆಲವೊಂದು ಸಂಬಂಧಗಳು ಮುಖವಾಡವಿದ್ದಂತೆ (ನಕಲಿ ಸಂಬಂಧಗಳು – ಸ್ವಾರ್ಥ ಸಂಬಂಧಗಳು) ಎನ್ನುವುದು ಜೀವನದಲ್ಲಿ ಪ್ರತಿಯೊಬ್ಬರೂ ಅನುಭವಿಸುವ ಕಟು ಸತ್ಯ. ಇಂತಹ ಸಂಬಂಧಗಳು ಹೊರನೋಟಕ್ಕೆ ತುಂಬಾ ಪ್ರೀತಿಯಿಂದ, ಕಾಳಜಿಯಿಂದ (ಮೇಲೆ ಸಿಂಪತಿ) ಇರುವಂತೆ ನಟಿಸುತ್ತವೆಯಾದರೂ, ಒಳಗೆ ಮಾತ್ರ ಸ್ವಾರ್ಥ ಮತ್ತು ದ್ವೇಷ, ಹಗೆತವನ್ನು (ಒಳಗೆ ಕಿತಾಪತಿ) ಹೊಂದಿರುತ್ತಾರೆ.
ನಿಮ್ಮ ಮುಖದ ಮುಂದೆ ಸಿಹಿ ಮಾತನಾಡುತ್ತಾರೆ, ಆದರೆ ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತಾರೆ. ನಿಮ್ಮಿಂದಲೇ ಅವರು ಬೇಕಾದಷ್ಟು ಸಹಾಯ, ಸಹಕಾರ ಪಡೆದುಕೊಂಡರು ಸಹ, ನಿಮ್ಮ ಬಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ. ಕೊನೆಯದಾಗಿ ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ.
ಇಂತಹ ಸಂಬಂಧಗಳು ಕೇವಲ ಅವರ ಸ್ವಾರ್ಥ, ಲಾಭ ಅಥವಾ ಅಗತ್ಯಕ್ಕಾಗಿ ಮಾತ್ರ ನಿಮ್ಮೊಂದಿಗೆ ಇರುತ್ತವೆ. ನಿಮ್ಮ ಕೆಲಸ ಮುಗಿದ ನಂತರ ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಾರೆ. ಅದಕ್ಕಾಗಿ ಇಂತಹ ನಕಲಿ ಜನರನ್ನು ನಂಬಿ ಕಾಲ ಕಳೆಯುವುದರಿಂದ ಕೊನೆಗೆ ನಮಗೆ ಮಾನಸಿಕವಾಗಿ ನೋವು ಮತ್ತು ನಿರಾಶೆ ಮಾತ್ರ ಗ್ಯಾರಂಟಿ ಉಳಿಯುತ್ತದೆ, ಎನ್ನುವುದು ಮಾತ್ರ ಕಹಿ ಸತ್ಯ.
ಮುಖವಾಡದ ಸಂಬಂಧಗಳು: ಮೇಲೆ ಸಿಂಪತಿ – ಒಳಗೆ ಕಿತಾಪತಿ,ಇದು ಇಂದಿನ ಸಮಾಜದ ಕಹಿ ಸತ್ಯ. ನಗುನಗುತ್ತಾ ಮಾತಾಡೋರು, ಹೆಗಲ ಮೇಲೆ ಕೈ ಹಾಕಿ “ನಾನಿದ್ದೀನಿ” ಅನ್ನೋರು, ಕಷ್ಟ ಅಂದ್ರೆ “ಅಯ್ಯೋ ಪಾಪ” ಅಂತ ಸಿಂಪತಿ ತೋರಿಸೋರು – ಮನಸ್ಸಿನೊಳಗೆ ಕಿತಾಪತಿ ಮಾಡಿ, ಮೋಸ, ಅನ್ಯಾಯ, ವಂಚನೆ ಮಾಡುವವರು. ಅಂತಿಮ ಸಮಯದಲ್ಲಿ ಕೈ ಕೊಡುವವರು.
ಮುಂದೆ ಹೊಗಳಿ, ಹಿಂದೆ ತೆಗಳೋರು. ನಿನ್ನ ಕಷ್ಟಕ್ಕೆ ಕಣ್ಣೀರು ಹಾಕಿ, ನಿನ್ನ ಏಳಿಗೆಗೆ ಹೊಟ್ಟೆಕಿಚ್ಚು ಪಡೋರು. “ನಿನ್ನ ಒಳಿತಿಗಾಗಿಯೇ ಹೇಳ್ತಿದ್ದೀನಿ” ಅಂತ ಹೇಳಿ ನಿನ್ನನ್ನೇ ಹಳ್ಳಕ್ಕೆ ತಳ್ಳೋರು – ಇವರೇ ಮುಖವಾಡದ ಮನುಷ್ಯರು,ಮಾನವೀಯತೆಯ ಇಲ್ಲದ ಮೃಗಗಳು.
ಎಲ್ಲಿ ಸಿಗ್ತಾರೆ ಈ ಮುಖವಾಡಗಳು?
ಮದುವೆ- ಸಮಾರಂಭಗಳಿರಲಿ “ನಮ್ಮ ಆತ್ಮೀಯರು” ಅಂತ ಅಪ್ಪಿಕೊಳ್ತಾರೆ. ಸಹಾಯ ಮಾಡುವ ಸಂದರ್ಭ ಬಂದಾಗ “ಅವನು ಯಾರೋ” ಗೊತ್ತೇ ಇಲ್ಲ ಅಂತಾರೆ.
ಇನ್ನು ಸ್ನೇಹಿತರಲ್ಲಿ: “ಬ್ರೋ, ನೀನಿಲ್ಲಾಂದ್ರೆ ನಾನಿಲ್ಲ” ಅಂತಾರೆ. ಆದರೆ ನಿನ್ನ ಸೀಕ್ರೆಟ್ ಎಲ್ಲರಿಗೂ ಹೇಳಿರ್ತಾರೆ. ನಿನ್ನ ಕೆಲಸ ಹಾಳು ಮಾಡಿ ತಾವೇ ಹೀರೋ ಆಗೋಕೆ ನೋಡ್ತಾರೆ. ನಿನ್ನ ವೈಫಲ್ಯದಲ್ಲಿ ಇವರ ಯಶಸ್ಸು ಕಾಣ್ತಾರೆ.
ಅದೇ ರೀತಿ ಕೆಲಸದ ಜಾಗದಲ್ಲಿ, ಬಾಸ್ ಮುಂದೆ ನಿನ್ನನ್ನು ಹೊಗಳ್ತಾರೆ, ಸಹೋದ್ಯೋಗಿಗಳ ಮುಂದೆ ನಿನ್ನನ್ನು ತುಳಿತಾರೆ. “ಟೀಮ್ ವರ್ಕ್” ಅಂತ ಹೇಳಿ ಕ್ರೆಡಿಟ್ ಎಲ್ಲಾ ತಾವೇ ತಗೊಳ್ತಾರೆ. ರಾಜಕೀಯದಲ್ಲಿ, ಜನರ ಮುಂದೆ ಕೈ ಮುಗಿತಾರೆ, ತೆರೆಮರೆಯಲ್ಲಿ ಜನರನ್ನೇ ಏಮಾರಿಸುತ್ತಾರೆ. ಸುಳ್ಳು ಹೇಳುತ್ತಾರೆ. “ಜನಸೇವೆ” ಅಂತಾರೆ, ಸ್ವಂತಕ್ಕಾಗಿ – ಸ್ವಾರ್ಥಕ್ಕಾಗಿ ಅವರು ಅವರ “ಜೇಬು ಸೇವೆ” ಮಾಡ್ಕೋತಾರೆ.
ಮುಖವಾಡ ಗುರುತಿಸುವುದು ಹೇಗೆ?
ಮಾತು-ಕೃತಿ ತಾಳೆ ಆಗಲ್ಲ: ಬಾಯಲ್ಲಿ “ನಿನ್ನ ಒಳ್ಳೆಯದಕ್ಕೇ” ಅಂತಾರೆ, ಆದರೆ ಕೆಲಸ ಮಾಡೋದು ನಿನ್ನ ಕೆಟ್ಟದ್ದಕ್ಕೇ. ನಿನ್ನ ಯಶಸ್ಸಿಗೆ ಖುಷಿ ಪಡಲ್ಲ: ನೀನು ಗೆದ್ದ ಸುದ್ದಿ ಹೇಳಿದಾಗ ಮುಖ ಸಪ್ಪಗಾಗುತ್ತೆ. ಸೂತಾಗ ಮನಸ್ಸಿನ ಒಳಗೊಳಗೆ ಖುಷಿ ಪಡುತ್ತಾರೆ.
ನಿನ್ನ ಬಗ್ಗೆ ಇತರರಿಗೆ ಕೆಟ್ಟದಾಗಿ ಹೇಳ್ತಾರೆ: “ಅವನಿಗೆ ಹೇಳ್ಬೇಡ” ಅಂತ ನಿನ್ನ ಬಗ್ಗೆ ಗಾಸಿಪ್ ಹಬ್ಬಿಸ್ತಾರೆ.
ಕಷ್ಟದಲ್ಲಿ ಮಾಯ: ನಿನ್ನ ದುಡ್ಡು, ಅಧಿಕಾರ ಇದ್ದಾಗ ಸುತ್ತ ಇರ್ತಾರೆ. ಕಷ್ಟ ಬಂದಾಗ ಫೋನ್ ಸ್ವಿಚ್ ಆಫ್ ಇರುತ್ತದೆ.
ಬಸವಣ್ಣನವರ ಎಚ್ಚರಿಕೆ ಮಾತು:
“ಮನವಿಲ್ಲದವರ ಮಾತು ನಂಬಲಾಗದು, ತನುವಿಲ್ಲದವರ ತೋರಿಕೆ ನಂಬಲಾಗದು” ಎಂದರು ಬಸವಣ್ಣನವರು. ಮನಸ್ಸಿಲ್ಲದೆ ಮಾತಾಡೋರು, ಆತ್ಮಸಾಕ್ಷಿ ಇಲ್ಲದೆ ನಡೆದುಕೊಳ್ಳೋರು – ಇವರನ್ನು ನಂಬಿದರೆ ನೋವು ಕಟ್ಟಿಟ್ಟ ಬುತ್ತಿ.
“ಕಳ್ಳನ ಮನಸ್ಸು ಹುಳ್ಳಗೆ” ಎಂಬಂತೆ, ಒಳಗೆ ಕಿತಾಪತಿ ಇರೋರ ಕಣ್ಣಲ್ಲಿ ಯಾವಾಗಲೂ ಭಯ. ಅದಕ್ಕೆ ಅತಿಯಾಗಿ ನಗ್ತಾರೆ, ಅತಿಯಾಗಿ ಹೊಗಳ್ತಾರೆ. ನಿಜವಾದ ಪ್ರೀತಿ ಇರೋರು ಕಡಿಮೆ ಮಾತಾಡ್ತಾರೆ, ಹೆಚ್ಚು ಕೆಲಸ ಮಾಡಿ, ಪ್ರಾಮಾಣಿಕತೆ – ಪ್ರಬುದ್ಧತೆ ತೋರಿಸ್ತಾರೆ.
ಇಂತಹ ಸಂಬಂಧಗಳಿಂದ ಹೊರಬರುವುದು ಹೇಗೆ ? ಅಂದರೆ: ಅವರ ಮಾತುಗಳಿಗಿಂತ ಅವರ ನಡವಳಿಕೆ ಮತ್ತು ಕ್ರಿಯೆಗಳಿಗೆ ಹೆಚ್ಚು ಮಹತ್ವ ಕೊಡಿ, ತಾಳ್ಮೆಯಿಂದ ಗಮನಿಸಿ. ಆದಷ್ಟು ದೂರವಿರಿ: ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವ ಕಡೆ, ಹೆಚ್ಚು ಸಮಯ ನೀಡಬೇಡಿ. ಕಡ್ಡಾಯವಾಗಿ ಮಿತಿಗಳನ್ನು ಇಟ್ಟುಕೊಳ್ಳಿ: ಎಲ್ಲರನ್ನೂ ನಂಬುವುದು ಬಿಟ್ಟು ಬಿಡಿ, ಇದು ಸ್ವಾರ್ಥಿಗಳ ಲೋಕ ಎಂಬುದು ಅರಿತುಕೊಳ್ಳಿ.
ಅಗತ್ಯಕ್ಕೆ ತಕ್ಕಷ್ಟು ಮಾತ್ರ ಅವರೊಂದಿಗೆ ವ್ಯವಹರಿಸಿ. ಎಲ್ಲರನ್ನೂ ದೂರ ಇಡಬೇಡಿ, ಆದರೆ ಎಲ್ಲರನ್ನೂ ಹತ್ತಿರ ಸೇರಿಸಬೇಡಿ. Distance maintain ಮಾಡಿ. ನಿನ್ನ ವೈಯಕ್ತಿಕ ವಿಷಯ, ದುಡ್ಡಿನ ವಿಷಯ, ಕುಟುಂಬದ ವಿಷಯದ ಎಲ್ಲರಿಗೂ ಹೇಳಬೇಡಿ.ಮಾತು ಬೆಳ್ಳಿ, ಮೌನ ಬಂಗಾರ. “ಸರಿ” ಅನ್ನೋರನ್ನ ನಂಬಿ, ಆದರೆ ಯಾವಾಗಲೂ”ಹೌದೌದು” ಅನ್ನೋರನ್ನ ಖಂಡಿತವಾಗಿಯೂ ನಂಬಬೇಡಿ. ನಿನ್ನ ತಪ್ಪು ತಿದ್ದೋನೇ ನಿಜವಾದ ಹಿತೈಷಿ. ಸಮಯವೇ ದೊಡ್ಡ ಟೆಸ್ಟ್: ಕಷ್ಟ ಬಂದಾಗ ಯಾರು ಜೊತೆಗಿರ್ತಾರೋ ಅವರೇ ನಿಜವಾದ ಸಂಬಂಧಿಕರು/ಆತ್ಮೀಯರು/ಗೆಳೆಯರು. ಉಳಿದವರೆಲ್ಲ ಮುಖವಾಡದ ಸ್ವಾರ್ಥಿಗಳು, ಇಂಥವರ ಬಗ್ಗೆ ಆದಷ್ಟು ಎಚ್ಚರಿಕೆಯಂದಿರದು ಒಳ್ಳೆಯದು.
ಕೊನೆ ಮಾತು :ಮುಖವಾಡ ಹಾಕೊಂಡು ಬದುಕೋರಿಗೆ ಒಂದು ದಿನ ಮುಖವೇ ಇಲ್ಲದಂತಾಗುತ್ತದೆ. ಕಿತಾಪತಿ ಮಾಡಿ ನಾನು ಒಳ್ಳೆಯವನು ಇದ್ದೀನಿ ಎಂದು ತೋರ್ಪಡಿಸಿಕೊಳ್ಳುವವರು, ಖಂಡಿತವಾಗಿಯೂ ಕೊನೆಗೆ ಒಂಟಿಯಾಗುತ್ತಾರೆ.
ನೀನು ನಿಜವಾಗಿರು. ನಿನ್ನ ಸಂಬಂಧಗಳು ಕಡಿಮೆ ಇದ್ದರೂ ಪರವಾಗಿಲ್ಲ – ಚಿಂತಿಲ್ಲ, ಸತ್ಯದ ಸನ್ಮಾರ್ಗದಲ್ಲಿ ಸಾಗು, ಯಾರಿಗೂ ಯಾವತ್ತೂ ಕೆಟ್ಟದನ್ನು ಮಾಡಬೇಡ್ – ಬಯಸಬೇಡ. ಒಂದು ನೂರು ಸುಳ್ಳು ಹೇಳುವ ಸ್ನೇಹಿತರಿಗಿಂತ ಒಬ್ಬನೇ ನಿಜವಾದ ಮಿತ್ರ ಮೇಲು ಎಂಬುದನ್ನು ನೆನಪಿರಲಿ.
ಎಚ್ಚರಿಕೆ ಮಾತು: ಸಿಂಪತಿ ತೋರಿಸೋರೆಲ್ಲ ಸ್ನೇಹಿತರಲ್ಲ. ಕಿತಾಪತಿ ಮಾಡೋರೆಲ್ಲ ಶತ್ರುಗಳೂ ಅಲ್ಲ – ಕೆಲವರು ನಮ್ಮವರೇ ಆಗಿರ್ತಾರೆ. ಅದಕ್ಕೆ ಎಚ್ಚರ. ಇದು ಮಾನವೀಯತೆಯ ಇಲ್ಲದ ಆಧುನಿಕ ಜಗತ್ತು.

ಲೇಖನ : ಸಂಗಮೇಶ ಎನ್ ಜವಾದಿ – ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ




