ಟ್ರೆಂಡಿಂಗ್ ಸುದ್ದಿಗಳು

ಮಧ್ಯರಾತ್ರಿ ದೇ.ಗಾಣಗಾಪುರಕ್ಕೆ ಜಿಲ್ಲಾಡಳಿತದ ಸರ್ಪ್ರೈಸ್ ವಿಸಿಟ್

Share News

ಮಧ್ಯರಾತ್ರಿ ದೇ.ಗಾಣಗಾಪುರಕ್ಕೆ ಜಿಲ್ಲಾಡಳಿತದ ಸರ್ಪ್ರೈಸ್ ವಿಸಿಟ್

ಸತ್ಯಮಿಥ್ಯ ಸುದ್ದಿಮೂಲ :ದೇ.ಗಾಣಗಾಪುರಕ್ಕೆ

ಜಿಲ್ಲಾಧಿಕಾರಿ ಮೊಹಮ್ಮದ್ ವಿಕ್ರಂ ಶರೀಫ್, ಎಸ್‌ಪಿ ಶ್ರೀನಿವಾಸಲು ಅಡ್ಡೂರ, ಜಿಪಂ ಸಿಇಒ ರಾಹುಲ್ ಸಂಕನೂರ ನೇತೃತ್ವದಲ್ಲಿ ಕ್ಷೇತ್ರದ ಸಮಗ್ರ ಪರಿಶೀಲನೆ

ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಅಫಜಲಪುರ ತಾಲೂಕಿನ ದೇವಲಗಾಣಗಾಪುರಕ್ಕೆ ಕಲಬುರಗಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಗುರುವಾರ ತಡರಾತ್ರಿ ದಿಢೀರ್ ಭೇಟಿ ನೀಡಿ ಕ್ಷೇತ್ರದ ವಿವಿಧ ಭಾಗಗಳಲ್ಲಿನ ವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸಿದರು.

ರಾತ್ರಿ ಸುಮಾರು 12.40ಕ್ಕೆ. ಕಲಬುರಗಿ ಜಿಲ್ಲಾಧಿಕಾರಿ ಮೊಹಮ್ಮದ್ ವಿಕ್ರಂ ಶರೀಫ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ಶ್ರೀನಿವಾಸಲು ಅಡ್ಡೂರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಂಕನೂರ. ತರಬೇತಿ ಐಎಎಸ್ ಅಧಿಕಾರಿ.ಶಿಖರ್ ಮೂಗೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ದೇವಲಗಾಣಗಾಪುರಕ್ಕೆ ಆಗಮಿಸಿದರು.

ದೇವಸ್ಥಾನದಿಂದ ಸಂಗಮದವರೆಗೆ ಪರಿಶೀಲನೆ

ಮೊದಲಿಗೆ.ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಅಧಿಕಾರಿಗಳು ದೇವಸ್ಥಾನದ ಸುತ್ತಮುತ್ತಲಿನ ಪರಿಸರ, ಭಕ್ತರ ಸಂಚಾರ, ಸ್ವಚ್ಛತೆ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಭಕ್ತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸ್ಥಳದಲ್ಲೇ ಅವಲೋಕನ ನಡೆಸಿದರು.

ಬಸ್ ನಿಲ್ದಾಣ, ವಸತಿಗೃಹಕ್ಕೂ ಭೇಟಿ

ಅಧಿಕಾರಿಗಳ ತಂಡವು ದೇವಲಗಾಣಗಾಪುರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಾರ್ವಜನಿಕರು ಹಾಗೂ ಭಕ್ತರ ಸಂಚಾರಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ಪರಿಶೀಲಿಸಿತು. ಬಳಿಕ ಧಾರ್ಮಿಕ ದತ್ತಿ ಇಲಾಖೆಯ ವಸತಿಗೃಹಕ್ಕೆ ತೆರಳಿ ಕೊಠಡಿಗಳ ವ್ಯವಸ್ಥೆ, ಸ್ವಚ್ಛತೆ, ಕುಡಿಯುವ ನೀರು ಹಾಗೂ ಭಕ್ತರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.

ನಂತರ ಭೀಮಾ–ಅಮರಜಾ ಸಂಗಮಕ್ಕೆ. ತೆರಳಿದ ಅಧಿಕಾರಿಗಳು ಸಂಗಮದ ಸುರಕ್ಷತಾ ವ್ಯವಸ್ಥೆ, ಸ್ವಚ್ಛತೆ ಹಾಗೂ ಭಕ್ತರಿಗೆ ಲಭ್ಯವಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.

ಭಕ್ತರ ಸೌಲಭ್ಯಗಳ ಮೇಲೆ ಜಿಲ್ಲಾಡಳಿತದ ಗಮನ

ದೇವಲಗಾಣಗಾಪುರಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳಷ್ಟೇ ಅಲ್ಲದೆ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳಿಂದಲೂ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಕ್ಷೇತ್ರದಲ್ಲಿ ಭದ್ರತೆ, ಸ್ವಚ್ಛತೆ, ಕುಡಿಯುವ ನೀರು, ವಾಹನ ನಿಲುಗಡೆ, ಸಂಚಾರ ವ್ಯವಸ್ಥೆ ಹಾಗೂ ವಸತಿ ಸೌಲಭ್ಯಗಳುಸಮರ್ಪಕವಾಗಿರುವುದು ಅತ್ಯಂತ ಅಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ವಿಕ್ರಂ ಶರೀಫ್ ಸೇರಿದಂತೆ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಮಧ್ಯರಾತ್ರಿಯಲ್ಲೇ ಕ್ಷೇತ್ರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ವಿಶೇಷ ಗಮನ ಸೆಳೆಯಿತು.

ದಿಢೀರ್ ಭೇಟಿ – ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ

ಯಾವುದೇ ಮುನ್ಸೂಚನೆಯಿಲ್ಲದೆ ಮಧ್ಯರಾತ್ರಿ ಕ್ಷೇತ್ರದ ಪ್ರಮುಖ ಸ್ಥಳಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಚೇರಿಯಲ್ಲಿ ಕುಳಿತು ವರದಿ ಪಡೆಯುವುದಕ್ಕಿಂತ ಸ್ಥಳಕ್ಕೆ ತೆರಳಿ ನೈಜ ಪರಿಸ್ಥಿತಿಯನ್ನು ಅರಿಯುವ ಅಧಿಕಾರಿಗಳ ನಡೆ ಗಮನಾರ್ಹವಾಗಿದೆ.

ದೇವಲಗಾಣಗಾಪುರಕ್ಕೆ ಆಗಮಿಸುವ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವುದು, ಕ್ಷೇತ್ರದ ಸ್ವಚ್ಛತೆ ಹಾಗೂ ಭದ್ರತೆಯನ್ನು ಮತ್ತಷ್ಟು ಬಲಪಡಿಸುವುದು ಮತ್ತು ಮೂಲಸೌಕರ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಪರಿಶೀಲನೆ ಮಹತ್ವ ಪಡೆದಿದೆ.

ಮಧ್ಯರಾತ್ರಿಯ ದಿಢೀರ್ ಪರಿಶೀಲನೆಯ ಮೂಲಕ ಕ್ಷೇತ್ರದ ನೈಜ ಪರಿಸ್ಥಿತಿಯನ್ನು ಅರಿತುಕೊಂಡಿರುವ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ನಿರೀಕ್ಷೆ ಭಕ್ತರು ಹಾಗೂ ಸ್ಥಳೀಯರಲ್ಲಿ ಮೂಡಿದೆ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!