ಟ್ರೆಂಡಿಂಗ್ ಸುದ್ದಿಗಳು

ಹೆಲಿಕಾಪ್ಟರ್ ದುರಂತದಲ್ಲಿ ಸಿಸಿಬಿ ಅಧಿಕಾರಿ ಅರುಣ ಸಾಳುಂಕೆ ದುರ್ಮರಣ : ತವರು ಗ್ರಾಮ ಅರಟಾಳದಲ್ಲಿ ನೀರವ ಮೌನ

Share News

ಹೆಲಿಕಾಪ್ಟರ್ ದುರಂತದಲ್ಲಿ ಸಿಸಿಬಿ ಅಧಿಕಾರಿ ಅರುಣ ಸಾಳುಂಕೆ ದುರ್ಮರಣ : ತವರು ಗ್ರಾಮ ಅರಟಾಳದಲ್ಲಿ ನೀರವ ಮೌನ

ಬಡತನದ ಬದುಕಿನಿಂದ ಪೊಲೀಸ್ ಇಲಾಖೆಯ ಉನ್ನತ ಹುದ್ದೆಯವರೆಗೆ – ಅರಟಾಳದ ಹೆಮ್ಮೆಯ ಪುತ್ರ ಅರುಣ ಮನೋಹರ ಸಾಳುಂಕೆ

ವರದಿ: ಸಚೀನ ಆರ್ ಜಾಧವ 

ಸತ್ಯಮಿಥ್ಯ ಸುದ್ದಿಮೂಲ ಜಮಖಂಡಿ ಗ್ರಾಮೀಣ:

ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಮೂಲದ ಬೆಂಗಳೂರಿನ ಅಪರಾಧ ತನಿಖಾ ದಳದ (ಸಿಸಿಬಿ) ಪೊಲೀಸ್ ಇನ್ಸ್‌ಪೆಕ್ಟರ್ ಅರುಣ ಮನೋಹರ ಸಾಳುಂಕೆ ಅವರು ದುರ್ಮರಣ ಹೊಂದಿದ್ದು, ಅವರ ತವರು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಪ್ರವಾಸ ಮುಗಿಸಿಕೊಂಡು ಮರಳಬೇಕಿದ್ದ ಗ್ರಾಮದ ಹೆಮ್ಮೆಯ ಪುತ್ರನ ಅಕಾಲಿಕ ನಿಧನದ ಸುದ್ದಿ ಕುಟುಂಬಸ್ಥರು, ಬಂಧುಗಳು ಹಾಗೂ ಗ್ರಾಮಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.

ಉನ್ನತ ಪೊಲೀಸ್ ಹುದ್ದೆಯಲ್ಲಿದ್ದರೂ ಅರುಣ ಸಾಳುಂಕೆ ಅವರು ಅತ್ಯಂತ ಸರಳ ಜೀವನಶೈಲಿಯನ್ನು ಮೈಗೂಡಿಸಿಕೊಂಡಿದ್ದರು. ಆಧ್ಯಾತ್ಮಿಕ ಚಿಂತನೆಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು, ತಮ್ಮ ದಿನನಿತ್ಯದ ಬದುಕಿನಲ್ಲಿ ಇಂಚಗೇರಿ ಸಂಪ್ರದಾಯದ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿದ್ದರು. ಎಷ್ಟೇ ದೊಡ್ಡ ಹುದ್ದೆ, ಅಧಿಕಾರ ಹಾಗೂ ಅಂತಸ್ತು ಹೊಂದಿದ್ದರೂ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಗುಣ ಹೊಂದಿದ್ದರು. ಅವರ ಸರಳತೆ, ಸೌಜನ್ಯ ಹಾಗೂ ಆಧ್ಯಾತ್ಮಿಕ ಒಲವು ಕುಟುಂಬದವರು ಮತ್ತು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿತ್ತು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದ ಸಾಮಾನ್ಯ ಬಡ ರೈತ ಕುಟುಂಬದಲ್ಲಿ ಜನಿಸಿದ ಅರುಣ ಮನೋಹರ ಸಾಳುಂಕೆ ಅವರು ಕಡುಬಡತನದ ಸಂಕಷ್ಟಗಳ ನಡುವೆಯೂ ಛಲ, ಪರಿಶ್ರಮ, ಆತ್ಮವಿಶ್ವಾಸ ಹಾಗೂ ಶಿಕ್ಷಣದ ಬಲದಿಂದ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಗೇರಿದ ಸಾಧಕರಾಗಿದ್ದರು. ಅವರ ಜೀವನ ಪಯಣ ಗ್ರಾಮೀಣ ಭಾಗದ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ.

ತಂದೆ ಮನೋಹರ ಸಾಳಂಕೆ ಹಾಗೂ ತಾಯಿ ಸಂಜೀವಿನಿ ಅವರ ಮಡಿಲಲ್ಲಿ ಜನಿಸಿದ ಅರುಣ ಅವರು ಬಾಲ್ಯದಿಂದಲೇ ಆರ್ಥಿಕ ಸಂಕಷ್ಟಗಳ ನಡುವೆ ಬೆಳೆದವರು. ಬಡ ರೈತ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಇವರಿಗೆ ಶಿಕ್ಷಣ ಪಡೆಯುವುದು ಸುಲಭವಾಗಿರಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ, ರಸ್ತೆ ಸಂಪರ್ಕ ಹಾಗೂ ಮೂಲಸೌಕರ್ಯಗಳ ಕೊರತೆ ಇದ್ದ ಕಾಲದಲ್ಲಿಯೂ ಶಿಕ್ಷಣದ ಮೇಲಿನ ಆಸಕ್ತಿ ಮತ್ತು ಸಾಧಿಸುವ ಹಂಬಲವನ್ನು ಅವರು ಎಂದಿಗೂ ಕೈಬಿಡಲಿಲ್ಲ.

ಅರಟಾಳ ಗ್ರಾಮದ ಗ್ರಾಮೀಣ ಪರಿಸರದಲ್ಲಿ ಬೆಳೆದ ಅವರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಐಗಳಿಯ ಶ್ರೀ ಅಪ್ಪಯ್ಯ ಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಪೂರ್ಣಗೊಳಿಸಿದರು. 1998ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದ ಅವರು, ನಂತರ ಜಮಖಂಡಿಯ ಬಿ.ಎಲ್.ಡಿ. ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಮುಗಿಸಿದರು.

ಮುಂದಿನ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ತೆರಳಿದ ಅರುಣ ಅವರು ಪ್ರತಿಷ್ಠಿತ ರಾಮಯ್ಯ ಕಾಲೇಜಿನಲ್ಲಿ ಬಿ.ಎ. ಪದವಿ ಹಾಗೂ ಇಂಜಿನಿಯರಿಂಗ್ ಶಿಕ್ಷಣ ಪಡೆದರು. ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಧಾರವಾಡದಲ್ಲಿಯೂ ತರಬೇತಿ ಪಡೆದರು. ಗ್ರಾಮೀಣ ಹಿನ್ನೆಲೆ ಹಾಗೂ ಆರ್ಥಿಕ ಸಂಕಷ್ಟಗಳು ತಮ್ಮ ಕನಸುಗಳಿಗೆ ಅಡ್ಡಿಯಾಗದಂತೆ ದೃಢ ಸಂಕಲ್ಪದಿಂದ ಮುನ್ನಡೆದರು.

ಇಬ್ಬರು ಸಹೋದರರು ಹಾಗೂ ಒಬ್ಬ ಸಹೋದರಿಯನ್ನು ಒಳಗೊಂಡ ಕುಟುಂಬದಲ್ಲಿ ಬೆಳೆದ ಅರುಣ ಅವರು ಕುಟುಂಬದ ಜವಾಬ್ದಾರಿಗಳ ನಡುವೆಯೂ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ನಿರಂತರ ಪರಿಶ್ರಮ, ತಾಳ್ಮೆ ಹಾಗೂ ಆತ್ಮವಿಶ್ವಾಸದಿಂದ ತಮ್ಮ ಗುರಿಯತ್ತ ಸಾಗಿದರು.

ಶಿಕ್ಷಣದ ನಂತರ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಗುರಿಯೊಂದಿಗೆ ಮುನ್ನಡೆದ ಅವರು, ತಮ್ಮ ಪರಿಶ್ರಮ ಮತ್ತು ಕರ್ತವ್ಯನಿಷ್ಠೆಯಿಂದ ಇಲಾಖೆಯಲ್ಲಿ ಗುರುತಿಸಿಕೊಂಡರು. ಹಂತ ಹಂತವಾಗಿ ಸೇವಾ ಅನುಭವ ಗಳಿಸಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುವ ಮಟ್ಟಕ್ಕೆ ಬೆಳೆದರು.

ಬೆಂಗಳೂರಿನ ಅಪರಾಧ ತನಿಖಾ ದಳದಲ್ಲಿ (ಸಿಸಿಬಿ) ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಪೊಲೀಸ್ ಇಲಾಖೆಯ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಒಂದು ಕಾಲದಲ್ಲಿ ಶಿಕ್ಷಣ ಪಡೆಯಲು ಅನೇಕ ಕಷ್ಟಗಳನ್ನು ಎದುರಿಸಿದ್ದ ಅರಟಾಳ ಗ್ರಾಮದ ಯುವಕ ಇಂದು ರಾಜ್ಯದ ರಾಜಧಾನಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿತ್ತು.

ಬಡತನದ ಸಂಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆಯ ಶಿಖರವೇರಿದ ಅರುಣ ಸಾಳಂಕೆ ಅವರ ಜೀವನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾದರಿಯಾಗಿತ್ತು. ಗುರಿ ಸಾಧಿಸುವ ಛಲ, ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸವಿದ್ದರೆ ಯಾವುದೇ ಹಿನ್ನೆಲೆಯ ವ್ಯಕ್ತಿಯೂ ಉನ್ನತ ಸ್ಥಾನಕ್ಕೇರಬಹುದು ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದರು.

ಆದರೆ ವಿಧಿಯಾಟಕ್ಕೆ ಅವರ ಬದುಕಿನ ಪಯಣ ಅಕಾಲಿಕವಾಗಿ ಅಂತ್ಯಗೊಂಡಿರುವುದು ಅರಟಾಳ ಗ್ರಾಮಸ್ಥರಲ್ಲಿ ತೀವ್ರ ನೋವುಂಟುಮಾಡಿದೆ. ಗ್ರಾಮದ ಹೆಮ್ಮೆಯ ಪುತ್ರನನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರು, ಬಂಧುಗಳು ಹಾಗೂ ಗ್ರಾಮಸ್ಥರು ಕಂಬನಿ ಮಿಡಿಯುತ್ತಿದ್ದಾರೆ. ಅವರ ಸಾಧನೆ, ಸರಳ ವ್ಯಕ್ತಿತ್ವ ಹಾಗೂ ಸಮಾಜದೊಂದಿಗಿನ ಆತ್ಮೀಯ ಒಡನಾಟ ಮಾತ್ರ ಸದಾ ಸ್ಮರಣೀಯವಾಗಿ ಉಳಿಯಲಿದೆ.

ಬಡತನ ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಗುರಿ ಸಾಧಿಸುವ ಛಲ, ನಿರಂತರ ಪರಿಶ್ರಮ, ತಾಳ್ಮೆ ಹಾಗೂ ಆತ್ಮವಿಶ್ವಾಸವಿದ್ದರೆ ಗ್ರಾಮೀಣ ಭಾಗದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯೂ ಉನ್ನತ ಮಟ್ಟಕ್ಕೆ ಏರಲು ಸಾಧ್ಯ ಎಂಬುದಕ್ಕೆ ಅರುಣ ಮನೋಹರ ಸಾಳುಂಕೆ ಅವರ ಜೀವನವೇ ಸಾಕ್ಷಿಯಾಗಿದೆ. ಅವರ ಸಾಧನೆ ಯುವಜನತೆಗೆ ಸದಾ ಪ್ರೇರಣೆಯಾಗಿರುತ್ತದೆ.

– ಉಮೇಶ್ ಆರ್ ಜಾಧವ -ಸಾವಳಗಿ, ತಾ. ಜಮಖಂಡಿ

ಅರುಣ ಸಾಳಂಕೆ ಅವರ ನಿಧನ ಗ್ರಾಮಕ್ಕೆ ತುಂಬಲಾರದ ನಷ್ಟ:ಅರಟಾಳ ಗ್ರಾಮದ ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿ, ಬಡತನದ ಸಂಕಷ್ಟಗಳನ್ನು ಮೆಟ್ಟಿ ನಿಂತು ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಗೇರಿದ ಅರುಣ ಮನೋಹರ ಸಾಳಂಕೆ ಅವರ ಅಕಾಲಿಕ ನಿಧನ ಇಡೀ ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ. ತಮ್ಮ ಸಾಧನೆ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಹುಟ್ಟೂರಿನ ಕೀರ್ತಿಯನ್ನು ಹೆಚ್ಚಿಸಿದ್ದ ಅಪರೂಪದ ವ್ಯಕ್ತಿಯನ್ನು ಕಳೆದುಕೊಂಡಿರುವುದು ಗ್ರಾಮಸ್ಥರಲ್ಲಿ ತೀವ್ರ ದುಃಖ ಮೂಡಿಸಿದೆ.

– ಹಣಮಂತ ಮಾಡಗ್ಯಾಳ:ಅರಟಾಳ ಗ್ರಾಮಸ್ಥರು


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!