
ದೇವಲಗಾಣಗಾಪುರ ಗೌರಿ ಹುಣ್ಣಿಮೆ ಜಾತ್ರೆಗೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್

ವೈಯಕ್ತಿಕ ಜಗಳ, ಗಲಾಟೆಗಳಿಗೆ ಅವಕಾಶವಿಲ್ಲ; ಡಿಜೆ ಸೌಂಡ್ಗೆ ಡೆಸಿಬಲ್ ಮಿತಿ ಕಡ್ಡಾಯ, ಡ್ರೋನ್ ಕ್ಯಾಮೆರಾಗಳ ಮೂಲಕ ನಿಗಾ – ಪಿಎಸ್ಐ ಸಂಗೀತಾ ಶಿಂಧೆ ಎಚ್ಚರಿಕೆ

ಸತ್ಯಮಿಥ್ಯ ಸುದ್ದಿಮೂಲ ಅಫಜಲಪೂರ:
ದೇವಲ ಗಾಣಗಾಪುರದ ಪ್ರಸಿದ್ಧ ಗೌರಿ ಹುಣ್ಣಿಮೆ ಜಾತ್ರೆಯು ಈ ವರ್ಷ ನವೆಂಬರ್ 24 ಮತ್ತು 25ರಂದು ನಡೆಯಲಿದ್ದು, ಜಾತ್ರೆಯನ್ನು ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ಜಾತ್ರೆಗೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ.
ಜಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕರು, ಯುವಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪರಸ್ಪರ ಸಹಕಾರದೊಂದಿಗೆ ನಡೆದುಕೊಳ್ಳಬೇಕು. ಯಾವುದೇ ರೀತಿಯ ವೈಯಕ್ತಿಕ ದ್ವೇಷ, ಜಗಳ ಅಥವಾ ಗಲಾಟೆಗಳಿಗೆ ಅವಕಾಶ ನೀಡಬಾರದು. ಯಾರಾದರೂ ಜಾತ್ರೆಯ ಸಂದರ್ಭದಲ್ಲಿ ವೈಯಕ್ತಿಕ ವಿಚಾರವಾಗಿ ಗಲಾಟೆ ಮಾಡುವುದು ಕಂಡುಬಂದರೆ ಅಂತಹವರ ವಿರುದ್ಧ ಯಾವುದೇ ಮುಲಾಜಿಲ್ಲದೆ ನೇರವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್ಐ ಸಂಗೀತಾ ಶಿಂಧೆ ಎಚ್ಚರಿಕೆ ನೀಡಿದ್ದಾರೆ.
ಜಾತ್ರೆಯಲ್ಲಿ ಡಿಜೆ ಸೌಂಡ್ ಬಳಸುವವರು ನಿಗದಿತ ಡೆಸಿಬಲ್ ಮಿತಿಯನ್ನು ಮೀರಬಾರದು. ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಜಾತ್ರೆಯ ಭದ್ರತೆಗಾಗಿ ಪೊಲೀಸ್ ಇಲಾಖೆಯ ವತಿಯಿಂದ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಜಾತ್ರೆಯ ಒಳಭಾಗದಲ್ಲಿ ಡ್ರೋನ್ ಕ್ಯಾಮೆರಾಗಳ ಮೂಲಕ ಸಂಪೂರ್ಣ ಪ್ರದೇಶದ ಮೇಲೆ ನಿಗಾ ವಹಿಸಲಾಗುವುದು.
ಜಾತ್ರೆಯು ಎಲ್ಲರ ಸಹಕಾರದಿಂದ ನಡೆಯುವ ಸಾರ್ವಜನಿಕ ಉತ್ಸವವಾಗಿದೆ. ಆದ್ದರಿಂದ ಪೊಲೀಸ್ ಇಲಾಖೆ, ದೇವಸ್ಥಾನದ ಆಡಳಿತ ಮಂಡಳಿ, ಸ್ಥಳೀಯ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಸಹಕರಿಸಿ ಜಾತ್ರೆಯನ್ನು ಶಾಂತಿ, ಸೌಹಾರ್ದತೆ ಮತ್ತು ಸಂಭ್ರಮದಿಂದ ಯಶಸ್ವಿಗೊಳಿಸಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
ವರದಿ : ಇಮ್ರಾನ್ ಮನಿಯಾರ್




