
ದಣಿವರಿಯದ ನಾಯಕನಿಗೆ ಸಿಗಬೇಕು ಸಚಿವ ಸ್ಥಾನ – ಅಭಿಮಾನಿಗಳ ಒತ್ತಾಯ.

ರೋಣ : ಸತ್ಯಮಿಥ್ಯ (ಮೇ -29)
ಕರ್ನಾಟಕ ರಾಜ್ಯ ರಾಜಕೀಯ ಆರು ತಿಂಗಳಿಂದ ಬಹು ಚರ್ಚೆಯಲ್ಲಿದ್ದ ಸಿಎಂ ಬದಲಾವಣೆ ಚರ್ಚೆಗೆ ಪೂರ್ಣ ವಿರಾಮ ಸಿಕ್ಕಂತಾಗಿದ್ದು ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ ಪ್ರಮಾಣ ವಚನ ಸ್ವೀಕರಿಸುವದು ಬಹುತೇಕ ಖಚಿತವಾಗಿದೆ.
ನೂತನ ಸರ್ಕಾರ ರಚನೆಯೊಂದಿಗೆ ಬಹಳಷ್ಟು ಪ್ರಭಾವಶಾಲಿಯಾದ ಸಚಿವ ಸಂಪುಟ ರಚನೆ ಮಾಡುವಲ್ಲಿ ಡಿ ಕೆ ಶಿವಕುಮಾರ ಉತ್ಸುಕರಾಗಿದ್ದು ದೆಹಲಿ ನಾಯಕರೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ .
ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಬಹಳಷ್ಟು ಶಾಸಕರು ಜಾತಿ,ವಯಸ್ಸಿನ ಹಿರಿತನ, ಬಹಳ ವರ್ಷಗಳ ಕಾಲ ಶಾಸಕರಾಗಿ ಅಧಿಕಾರ ವಹಿಸಿಕೊಂಡ ಪರಿ, ಮುಂಬೈ – ಕಲ್ಯಾಣ – ಮೈಸೂರು – ಕರಾವಳಿ ಕರ್ನಾಟಕ ಹೀಗೆ ಪ್ರತಿನಿಧಿಯಾಗಿ ಪರಿಗಣಿಸಿ ಸಚಿವ ಸ್ಥಾನ ಪಡೆಯುವ ಹಂಬಲದಲ್ಲಿ ಇದ್ದಾರೆ.
ಅದೇ ರೀತಿ ರೋಣ ಮತಕ್ಷೇತ್ರದ ಶಾಸಕ ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂಬ ಉಹಾಪೋಹ ಉಂಟಾದಾಗ ರೋಣ ಮತಕ್ಷೇತ್ರದ ರೋಣ, ಗಜೇಂದ್ರಗಡ, ನರೇಗಲ್ ಸೇರಿದಂತೆ ಪ್ರಮುಖ ನಗರಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ಮಾಡುವ ಮೂಲಕ ಅಭಿಮಾನಿಗಳು ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿದ್ದರು.
ರೋಣ ಮತಕ್ಷೇತ್ರದ ಜಿ. ಎಸ್. ಪಾಟೀಲರಿಗೆ 5 ಜನ ಸಹೋದರರು.ಬಹುತೇಕ ಎಲ್ಲರೂ ರಾಜಕಾರಣದಲ್ಲಿಯೇ ಇದ್ದಾರೆ ಮತ್ತು ಪ್ರಭಾವಶಾಲಿಗಳಾಗಿದ್ದಾರೆ .1989,1999,2013 ಮತ್ತು 2023 ರಲ್ಲಿ ನಾಲ್ಕು ಭಾರಿ ಶಾಸಕರಾಗಿ ಆಯ್ಕೆ ಯಾಗಿರುವ ಜಿಎಸ್ಪಿ ಅವರ ಗೆಲುವು ದೊಡ್ಡ ಮಟ್ಟದ ಲೀಡ್ ನಿಂದ ಕೂಡಿರುತ್ತದೆ ಎನ್ನುವ ಮಾತನ್ನು ಅವರ ಅಭಿಮಾನಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕಳೆದ ಕೆಲವು ತಿಂಗಳ ಹಿಂದೆ ರೋಣ ಮತಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅಂದಿನ ವೇದಿಕೆ ಕಾರ್ಯಕ್ರಮದಲ್ಲಿ ಜಿ. ಎಸ್. ಪಾಟೀಲ ಸಚಿವರಾಗುವ ಎಲ್ಲ ಅರ್ಹತೆಯನ್ನು ಹೊಂದಿದ್ದಾರೆ ಎನ್ನುವ ಮಾತು ಕಾರ್ಯಕರ್ತರ ಕೂಗಿಗೆ ಸಾತ್ ನೀಡುತ್ತಿದೆ.
ಇನ್ನೂ 1983ರಿಂದ ಸಕ್ರಿಯ ರಾಜಕಾರಣದಲ್ಲಿರುವ ಶಾಸಕ ಜಿ.ಎಸ್. ಪಾಟೀಲರು ಹಲವು ಬಾರಿ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದರು. 79 ವಯೋಮಾನದವರಾದರೂ ಅವರಲ್ಲಿ ಜನಸೇವೆಯ ಉತ್ಸುಕತೆ ನವತರುಣರನ್ನು ಮೀರಿಸುತ್ತದೆ.ಅವರಲ್ಲಿನ ಪ್ರಬುದ್ಧತೆ ಮತ್ತು ಪಕ್ಷ ನಿಷ್ಠೆಯನ್ನು ಸರ್ಕಾರ ಗಮನಿಸಬೇಕು ಎಂದು ಅನೇಕ ಹಿರಿಯ ರಾಜಕಾರಣಿಗಳ ಅಭಿಪ್ರಾಯವಾಗಿದೆ.ಹೀಗಾಗಿ, ಸಿಎಂ ಬದಲಾವಣೆಯಾದರೆ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ಒಲಿದು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಗದಗ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಪಾಟೀಲರು ಮುಂದಿನ ಮುಖ್ಯಮಂತ್ರಿ ಎಂದು ಹೇಳಲಾಗುತ್ತಿರುವ ಡಿ.ಕೆ.ಶಿವಕುಮಾರ ಜೊತೆಯು ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ.ಕಳೆದ ತಿಂಗಳು ಹಲವು ಶಾಸಕರೊಂದಿಗೆ ದೆಹಲಿಗೆ ತೆರಳಿ, ಹಿರಿಯ ಶಾಸಕರಿಗೆ ಸಚಿವ ಸಂಪುಟ ಪುನರ್‌ರಚನೆಯಲ್ಲಿ ಸ್ಥಾನ ನೀಡಬೇಕು ಎಂದು ರೋಣ ಶಾಸಕ ಜಿ.ಎಸ್.ಪಾಟೀಲರು ಹೈಕಮಾಂಡಗೆ ಸಚಿವ ಸ್ಥಾನದ ಆಸೆಯನ್ನು ಬಿಚ್ಚಿಟ್ಟಿದ್ದರು. ಒಟ್ಟಿನಲ್ಲಿ ರಾಜ್ಯ ರಾಜಕಾರಣ ಬದಲಾದಂತೆ ಗದಗ ಜಿಲ್ಲೆಯ ರಾಜಕೀಯ ರಂಗದಲ್ಲಿ ರೋಣ ಶಾಸಕ ಜಿ. ಎಸ್.ಪಾಟೀಲರಿಗೆ ಸಚಿವ ಸ್ಥಾನ ಒದಗಿ , ಜಿಲ್ಲೆಯ ರಾಜಕೀಯ ಗೊಂದಲ ವಾತಾವರಣಕ್ಕೆ ಬ್ರೇಕ್ ಬೀಳುತ್ತಾ ಕಾದು ನೋಡಬೇಕಾಗಿದೆ.
ನಮ್ಮ ಗೌಡ್ರ ಅಧಿಕಾರದಲ್ಲಿರಲಿ ಬಿಡಲಿ ಅವರ ಬಸಮ್ಮ ತಾಯಿ ಪೌಂಡೇಷನ್ ಮೂಲಕ ಬಡವರ, ದೀನ ದಲಿತರ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ, ಸಾವಿರ ಕೆರೆಗಳ ಸರ್ದಾರ ಬಿರುದು ಪಡೆದುಕೊಂಡವರು, ವಯಸ್ಸು 79 ಆದರೂ ಜನಸೇವೆಯಲ್ಲಿ 29 ರ ಉತ್ಸಾಹ ಇಂತವರಿಗೆ ಸಚಿವ ಸ್ಥಾನ ಸಿಗಲಿ ಎಂದು ಕ್ಷೇತ್ರದ ಅವರ ಅಭಿಮಾನಿಗಳು ದೇವರಿಗೆ ಹರಕೆ ಹೊರುತ್ತಿರುವದಂತು ಸತ್ಯ.




