
ಅಧಿಕ ಮಾಸ ಪ್ರಯುಕ್ತ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಸುದರ್ಶನ ಹೋಮ.

ಗಜೇಂದ್ರಗಡ:ಸತ್ಯಮಿಥ್ಯ (ಜೂ -08).
ನಗರದ ಶ್ರೀ ಗುರು ರಾಘವೇಂದ್ರಸ್ವಾಮಿ ಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅಧಿಕ ಮಾಸವು ಪ್ರತಿ 33 ತಿಂಗಳಿಗೊಮ್ಮೆ ಬರುವುದರಿಂದ, ಈ ಪವಿತ್ರ ಮಾಸದಲ್ಲಿ ಮಾಡುವ ಜಪ, ತಪ, ದಾನ ಹಾಗೂ ಹೋಮ-ಹವನಗಳಿಗೆ ಅತ್ಯಂತ ವಿಶೇಷವಾದ ಮತ್ತು ಅಧಿಕ ಫಲವಿರುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ.ಹಿಂದಿನ ಅಧಿಕ ಮಾಸಗಳ ಸಂದರ್ಭದಲ್ಲೂ ಗಣಹೋಮಗಳಂತಹ ಬೃಹತ್ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಪೂರ್ವಕವಾಗಿ ನೆರವೇರಿಸಲಾಗಿತ್ತು. ಪ್ರಸ್ತುತ ಅಧಿಕ ಮಾಸದ ನಿಮಿತ್ತ ಮಠದಲ್ಲಿ 33 ಸುದರ್ಶನ ಹೋಮಗಳು ಅಥವಾ 33 ಅಪೂಪ ದಾನದಂತಹ (ಅಧಿಕ ಮಾಸದ ವಿಶೇಷ ಸಂಪ್ರದಾಯ) ಸಂಕಲ್ಪಗಳೊಂದಿಗೆ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆಗಳು ಮತ್ತು ಹವನಗಳು ಜರುಗಿದವು.
ಬಳಿಕ ಪ್ರಧಾನ ಅರ್ಚಕರಾದ ವೆಂಕಟೇಶ ಆಚಾರ್ಯ ಮಾತನಾಡಿ ಅಧಿಕ ಮಾಸದ ಅಧಿದೇವತೆ ಶ್ರೀ ಮಹಾವಿಷ್ಣು (ಪುರುಷೋತ್ತಮ). ಈ ಮಾಸದಲ್ಲಿ 33 ದೇವತೆಗಳನ್ನು ಸಂತುಷ್ಟಗೊಳಿಸಲು 33 ತರಹದ ದಾನ ಹಾಗೂ 33ರ ತರಹದ ಜಪ-ಹೋಮಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ.ಶ್ರೀಮನ್ ನಾರಾಯಣನ ಶಕ್ತಿಶಾಲಿ ಆಯುಧವಾದ ಸುದರ್ಶನ ಚಕ್ರವನ್ನು ಆರಾಧಿಸುವ ಈ ಹೋಮವು ದೃಷ್ಟಿದೋಷ, ನಕಾರಾತ್ಮಕ ಶಕ್ತಿಗಳು ಮತ್ತು ರೋಗ-ರುಜಿನಗಳನ್ನು ನಿವಾರಿಸಿ, ಜೀವನದಲ್ಲಿ ಸುಖ, ಶಾಂತಿ ಹಾಗೂ ಐಶ್ವರ್ಯವನ್ನು ಕರುಣಿಸುತ್ತದೆ ಎಂದು ನಂಬಲಾಗಿದೆ.ಈ ವಿಶೇಷ ದಿನಗಳಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪ್ರತಿದಿನ ಶ್ರೀ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ಹಸ್ತೋದಕ, ತೀರ್ಥಪ್ರಸಾದ ವಿನಿಯೋಗ ಹಾಗೂ ಧಾರ್ಮಿಕ ಪ್ರವಚನಗಳು ನೆರವೇರುತ್ತವೆ ಎಂದರು.
ಬಳಿಕ ಅಂದಪ್ಪ ಸಂಕನೂರ, ಶ್ರೀನಿವಾಸ ಬಾಕಳೆ ಮಾತನಾಡಿ ಸುದರ್ಶನ ಹೋಮದಲ್ಲಿ ಪಾಲ್ಗೊಳ್ಳುವುದರಿಂದ ಜೀವನದಲ್ಲಿ ಎದುರಾಗುವ ಕಷ್ಟಗಳು, ದೃಷ್ಟಿದೋಷಗಳು ಹಾಗೂ ನಕಾರಾತ್ಮಕ ಯೋಚನೆಗಳು ದೂರವಾಗುತ್ತವೆ. ಮಠದ ಪವಿತ್ರ ವಾತಾವರಣದಲ್ಲಿ ಹೋಮದ ಮಂತ್ರಘೋಷಗಳನ್ನು ಕೇಳಿದಾಗ ಮನಸ್ಸಿಗೆ ಅಪಾರವಾದ ನೆಮ್ಮದಿ ಸಿಕ್ಕಿದೆ ಎಂದರು.
ಇನ್ನೂ ಇದೇ ಸಂದರ್ಭದಲ್ಲಿ ಭಿಷ್ಮಾಸಾ ಬಾಕಳೆ,ದತ್ತುಸಾ ಬಾಕಳೆ,ವೆಂಕಟೇಶ ಶೆಟ್ಟರ,ವಿಶ್ವನಾಥ ಕುಷ್ಟಗಿ,ಆರ್.ಎಮ್.ರಾಯಬಾಗಿ, ನಾಗರಾಜ ವೇರ್ಣೇಕರ, ದೇವೇಂದ್ರ ಬಡಿಗೇರ, ಕಿರಣ ಬಳೂಟಗಿ,ಅಶೋಕ ಮುದೇನೂರ,ನಾಗರಾಜ ಹೊಸಂಗಡಿ, ನಾಗರಾಜ ಹುಣಸಿಕಟ್ಟಿ, ಉಮೇಶ ನಾವಡೆ, ಪ್ರವೀಣ ರಾಯಬಾಗಿ, ಶಿವಕುಮಾರ ತಳಕಲ,ಕವಿತಾ ಜಾಳಿಹಾಳ, ದಿವ್ಯಾ ಸಂಕನೂರ ಸೇರಿದಂತೆ ಅನೇಕರು ಇದ್ದರು.
ವರದಿ : ಪವನ್.




