ಆಹಾರ, ವ್ಯಾಯಾಮ ಮತ್ತು ಜೀವನಶೈಲಿಯಿಂದ ಮಧುಮೇಹದಿಂದ ದೂರವಿರಬಹುದು – ಡಾ. ನವೀನ ನಂದೆಪ್ಪನವರ
ಗಜೇಂದ್ರಗಡ ರೋಟರಿ ಸಂಸ್ಥೆಯಿಂದ ಉಚಿತ ಮಧುಮೇಹ ತಪಾಸಣೆ ಶಿಬಿರ
ಗಜೇಂದ್ರಗಡ : ಸತ್ಯಮಿಥ್ಯ (ಸ -28).
ನಿಮ್ಮ ನಿತ್ಯ ದಿನಚರಿಯಲ್ಲಿ ಗುಣಮಟ್ಟದ ಆಹಾರ,ನಿಯಮಿತ ವ್ಯಾಯಾಮ ಹಾಗೂ ಉತ್ತಮ ಜೀವನ ಶೈಲಿ ಹೊಂದುವ ಮೂಲಕ ಮಧುಮೇಹದಿಂದ ದೂರವಿರಿ.ಯಾಂತ್ರಿಕ ಜೀವನ ಶೈಲಿಯಲ್ಲಿ ಆರೋಗ್ಯದ ಕಡೆ ಗಮನ ಮತ್ತು ವೈದ್ಯರ ಸಲಹೆ ಪಡೆದುಕೊಳ್ಳಿ ಎಂದು ತಜ್ಞ ವೈದ್ಯರಾದ ಡಾ. ನವೀನ ನಂದೆಪ್ಪನವರ ಹೇಳಿದರು.
ಅವರು ಶನಿವಾರ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆಯಿಂದ ಆಯೊಜಿಸಿದ ಉಚಿತ ಮಧುಮೇಹ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಧುಮೇಹಿಗಳ ಪ್ರಮಾಣ ಹೆಚ್ಚುತ್ತಿದೆ. ಕಾರಣ ಒತ್ತಡದ ಜೀವನಶೈಲಿ, ದೈಹಿಕ ಚಟುವಟಿಕೆ ಕೊರತೆ, ಸ್ಥೂಲಕಾಯತೆ, ಕೊಬ್ಬು, ಸಕ್ಕರೆ ಮತ್ತು ಕ್ಯಾಲೋರಿಗಳಲ್ಲಿ ಸಮೃದ್ಧವಾಗಿರುವ ಆಹಾರಗಳ ಸೇವನೆಯಿಂದ ಬರುತ್ತದೆ. ಮೊದಲೇ ಪತ್ತೆ ಹಚ್ಚಿದರೆ, ಅದರ ತೊಡಕು ತಡೆಯಬಹುದು. ಸರಿಯಾದ ಮಾರ್ಗದರ್ಶನ ಮತ್ತು ಸಲಹೆ ಪಡೆದು ಆಹಾರ, ವ್ಯಾಯಾಮ, ಜೀವನಶೈಲಿ ಉತ್ತಮವಾಗಿರಲಿ ಎಂದರು.
ವೈದ್ಯಾಧಿಕಾರಿ ಡಾ. ಅನಿಲ ತೋಟದ ಮಾತನಾಡಿ, ಸರಕಾರಿ ಆಸ್ಪತ್ರೆಗೆ ಬರುವ ೩೦ ವಯಸ್ಸು ಮೇಲ್ಪಟ್ಟ ಎಲ್ಲ ರೋಗಿಗಳ ಬಿಪಿ, ಶುಗರ್ ತಪಾಸಣೆ ಕಡ್ಡಾಯ ಮಾಡುತ್ತೇವೆ . ಶೇ. ೨೫ ಕ್ಕಿಂತಲೂ ಹೆಚ್ಚು ರೋಗಿಗಳಲ್ಲಿ ಮಧುಮೇಹ ಕಂಡು ಬಂದಿದೆ. ಮಧುಮೇಹವನ್ನು ಚಿಕಿತ್ಸೆ ನೀಡದೆ ಬಿಟ್ಟರೆ ಹಲವು ಅಲ್ಪಾವಧಿಯ ಮತ್ತು ದೀರ್ಘಕಾಲೀನ ಕಾಯಿಲೆಗಳಿಗೆ ಕಾರಣವಾಗಲಿದೆ. ಮಧುಮೇಹ ತಡೆಗಟ್ಟುವಿಕೆ ಮತ್ತು ಅದರ ತೊಡಕುಗಳ ಬಗ್ಗೆ ತಿಳಿಯುವದು ಅಗತ್ಯ ಎಂದರು.
ಮುಖ್ಯವಾಗಿ ಮಧುಮೇಹವು ದೀರ್ಘಕಾಲದ ಚಯಾಪಚಯ ಅಸ್ವಸ್ಥತೆಯಾಗಿದ್ದು, ಇದು ಅಧಿಕ ರಕ್ತದ ಸಕ್ಕರೆಯ ಮಟ್ಟದಿಂದ ನಿರೂಪಿಸಲ್ಪಟ್ಟಿದೆ. ಆಗಾಗ್ಗೆ ಮೂತ್ರ ವಿಸರ್ಜನೆ, ಹೆಚ್ಚಿದ ಬಾಯಾರಿಕೆ, ಆಯಾಸ ಮತ್ತು ದೌರ್ಬಲ್ಯ, ದಣಿದ ಭಾವನೆ, ಶಕ್ತಿಯ ಕೊರತೆ, ಅತಿಯಾದ ಬಾಯಾರಿಕೆ ಮತ್ತು ಹಸಿವು, ಮಧುಮೇಹದ ಆರಂಭಿಕ ಲಕ್ಷಣ. ರಕ್ತದಲ್ಲಿನ ಹೆಚ್ಚುವರಿ ಗ್ಲೂಕೋಸ್ ಮೂತ್ರ ಪಿಂಡಗಳು ಸಕ್ಕರೆಯನ್ನು ಫಿಲ್ಟರ್ ಮಾಡಲು ಮತ್ತು ಹೀರಿಕೊಳ್ಳಲು ಹೆಚ್ಚು ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದರು.
ಸಂಸ್ಥೆ ಅಧ್ಯಕ್ಷ ಬಾಬಣ್ಣಾ ನಾವಡೆ ಮಾತನಾಡಿ, ಮದುಮೇಹ ಇತ್ತೀಚಿಗೆ ಬಡವರಲ್ಲಿಯೂ ಕಂಡುಬರುತ್ತಿದ್ದೂ.ಆರ್ಥಿಕವಾಗಿ ದುರ್ಬಲ ಕುಟುಂಬದಲ್ಲಿ ಬಾಲ್ಯಾವಸ್ಥೆಯಲ್ಲಿ ಡಯಾಬಿಟೆಕ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಬೆಂಗಳೂರಿನಲ್ಲಿ ಉಚಿತ ಚಿಕಿತ್ಸೆ ಮತ್ತು ಜೀವನ ನಿರ್ಹಹಣೆಗೆ ವ್ಯವಸ್ಥೆ ಮಾಡಲಾಗುವುದ ಎಂದರು.
ನ್ಯಾಯವಾದಿ ಆರ್.ಎಂ. ರಾಯಬಾಗಿ ಮಾತನಾಡಿದರು.
ಜಿಲ್ಲಾ ಸಮೀಕ್ಷಾಧಿಕಾರಿ ಡಾ. ವೆಂಕಟೇಶ ರಾಠೋಡ, ಲಕ್ಷö್ಮಣ ರಂಗ್ರೇಜಿ, ಗುರುಮೂರ್ತಿ ಕೆಂಚಿ, ಶರಣಬಸವ ಮೆನಸಿನಕಾಯಿ, ಸುರೇಂದ್ರಸಾ ರಾಯಬಾಗಿ, ಸುರೇಶ ರಂಗ್ರೇಜಿ, ಗಣೇಶ ರಾಯಬಾಗಿ, ಅಶೊಕ ರಾಯಬಾಗಿ, ರಾಘವೇಂದ್ರ ರಾಯಬಾಗಿ, ಮಂಜುನಾಥ ಯರಗೇರಿ, ಉಮೇಶ ರಾಠೋಡ, ಇನ್ನಿತರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.