
ರೈತ ನಾಯಕ, ಕಾಮ್ರೆಡ್ ಜಿ.ಸಿ ಬಯ್ಯಾರೆಡ್ಡಿ ನಿಧನ: ಸಿಪಿಐಎಂ ಶ್ರದ್ಧಾಂಜಲಿ
ಗಜೇಂದ್ರಗಡ: ಸತ್ಯಮಿಥ್ಯ (ಜ -04).
ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ ಎಸ್) ರಾಜ್ಯ ಸಮಿತಿ ಅಧ್ಯಕ್ಷರಾದ ಕಾಂ. ಜಿ.ಸಿ ಬಯ್ಯಾರೆಡ್ಡಿ ರವರ ನಿಧನದಿಂದ ರಾಜ್ಯದ ರೈತ ಚಳುವಳಿಗೆ ಹಾಗೂ ಐಕ್ಯ ಹೋರಾಟಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ಹೇಳಿದರು.
ಪಟ್ಟಣದ ಸಿಪಿಐಎಂ ಪಕ್ಷದ ಕಾರ್ಯಾಲಯದಲ್ಲಿ ರೈತ ನಾಯಕ ಜಿ.ಸಿ ಬಯ್ಯಾರೆಡ್ಡಿಯವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ರೈತ ಹೋರಾಟದಲ್ಲಿ ಅಸೀಮ ಬದ್ದತೆ ಹಾಗೂ ಸೈದ್ಧಾಂತಿಕ ನಿಷ್ಠೆಯಲ್ಲಿ ಯಾವುದೇ ಕುಂದುಟಾಗದಂತೆ ವ್ಯಕಿತ್ವ ಕಾಪಾಡಿಕೊಂಡಿದ್ದ ಒಬ್ಬ ಮಹಾನ್ ಮಾರ್ಕ್ಸ್‌ವಾದಿ ಹೋರಾಟಗಾರರಾಗಿದ್ದರು ಎಂದು ಸ್ಮರಿಸಿದರು.
ಸಿಪಿಐಎಂ ಪಕ್ಷದ ಶಾಖಾ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಮಾತನಾಡಿ ಸುಮಾರು ನಲವತ್ತು ವರ್ಷಗಳು ರೈತ ಚಳವಳಿ ಮುನ್ನೆಡಿಸಿದ್ದ ಅಪಾರ ಅನುಭವಿ ರೈತ ನಾಯಕನ ಅಗಲಿಕೆಯಿಂದ ರಾಜ್ಯದ ಐಕ್ಯ ರೈತ ಚಳವಳಿಗೆ ಹಾಗೂ ಕಮ್ಯುನಿಸ್ಟ್ ಪಕ್ಷಕ್ಕೆ ಬಹಳ ದೊಡ್ಡ ಹಿನ್ನಡೆ ಉಂಟಾಗಿದ್ದು ಸಾಮೂಹಿಕ ಪ್ರಯತ್ನದಿಂದ ಅವರ ಹೋರಾಟವನ್ನು ಮುಂದುವರೆಸುವುದು ಕಾಂ.ಜಿ.ಸಿ ಬಯ್ಯಾರೆಡ್ಡಿ ರವರಿಗೆ ಸಲ್ಲಿಸುವ ಸರಿಯಾದ ಶ್ರದ್ಧಾಂಜಲಿ ಎಂದರು.
ಜಿಲ್ಲಾ ಸಮಿತಿ ಸದಸ್ಯರಾದ ಪೀರು ರಾಠೋಡ ಮಾತನಾಡಿ ದುಡಿಯವ ಜನರ ಚಳುವಳಿಯನ್ನು ಕಟ್ಟುವಲ್ಲಿ, ಸಂಯುಕ್ತ ಹೋರಾಟ ಕರ್ನಾಟಕದ ಪ್ರಮುಖ ಸಂಚಾಲಕರಾಗಿ ಮಹತ್ವದ ಪಾತ್ರ ವಹಿಸಿದ್ದರು ಎಂದರು.
ಈ ವೇಳೆ ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಮೆಹಬೂಬ್ ಹವಾಲ್ದಾರ್, ಚೆನ್ನಪ್ಪ ಗುಗಲೋತ್ತರ, ಗಣೇಶ ರಾಠೋಡ, ಅನೀಲ ರಾಠೋಡ ಸೇರಿದಂತೆ ಪಕ್ಷದ ಸದಸ್ಯರು ಪಾಲ್ಗೊಂಡಿದ್ದರು.
ವರದಿ : ಚನ್ನು. ಎಸ್.